ಪುಲ್ವಾಮ ದಾಳಿ ಖಂಡಿಸಿದ ಜಮಾಅತೆ ಇಸ್ಲಾಮೀ ಹಿಂದ್: ಮುಂಬರುವ ಚುನಾವಣೆಗಳಿಗೆ ಈ ದಾಳಿ ಪಿತೂರಿಯಾಗದಿರಲಿ- ಉಮರಿ

0
818

ನವದೆಹಲಿ: ಪುಲ್ವಾಮ ನಲ್ಲಿ ನಡೆದ ಭಯೋತ್ಪಾದನಾ ದಾಳಿಯನ್ನು ಜಮಾಅತೆ ಇಸ್ಲಾಮೀ ಹಿಂದ್ ತೀವ್ರವಾಗಿ ಖಂಡಿಸಿದ್ದು ಇದೊಂದು ಹೇಯ ಕೃತ್ಯ ಎಂದಿದೆ.

“ಪುಲ್ವಾಮ ನಲ್ಲಿ 44 ಸಿಆರ್‌ಪಿಎಫ್ ಯೋಧರು ಭಯೋತ್ಪಾದನಾ ದಾಳಿಯಲ್ಲಿ ವೀರ ಮರಣವನ್ನಪ್ಪಿದ ಘಟನೆಯು ದೇಶಕ್ಕೆ ಸಹಿಸಲಾಗದ ದುಃಖವಾಗಿದೆ.ಮೃತ ಯೋಧರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಗಾಯಾಳುಗಳು ಶೀಘ್ರವಾಗಿ ಗುಣಮುಖರಾಗಲಿ ಎಂದು ನಾವು ಪ್ರಾರ್ಥಿಸುತ್ತೇವೆ” ಎಂದು ಜಮಾಅತೆ ಇಸ್ಲಾಮೀ ಹಿಂದ್ ನ ರಾಷ್ಟ್ರ ಅಧ್ಯಕ್ಷರಾದ ಮೌಲಾನಾ ಜಲಾಲುದ್ದೀನ್ ಉಮರಿಯವರು ನುಡಿದರು.

ಮುಂದುವರಿದು ಮಾತನಾಡಿದ ಅವರು “ಇಂತಹ ಶೋಕಭರಿತ ವಾತಾವರಣದಲ್ಲಿಯೂ ಶಾಂತಿ ಮತ್ತು ಸುರಕ್ಷತೆಯನ್ನು ಕಾಯ್ದುಕೊಳ್ಳಲು ಪ್ರಯತ್ನಗಳು ನಡೆಯಬೇಕಿದೆ ಇದನ್ನು ದೇಶಗಳ ನಡುವಿನ ಸಂಪರ್ಕ ಹಾಗೂ ಸಹಕಾರಗಳ ಮೂಲಕ ಸಾಧಿಸಬೇಕಾದ ಅಗತ್ಯತೆ ಇದೆ. ಸರಕಾರವು ಈ ದಾಳಿಯ ಹಿಂದಿರುವ ಸತ್ಯಾಸತ್ಯಗಳನ್ನು ಬಯಲಿಗೆಳೆಯಲು ಮತ್ತು ಹಂತಕರನ್ನು ಶಿಕ್ಷಿಸಲು ಮುಂದಾಗಬೇಕಿದೆ.

ಈ ದಾಳಿಯ ಹಿಂದೆ ಕಾಶ್ಮೀರದ ವಾತಾವರಣವನ್ನು ಹಾಳುಗೆಡಹುವ ಉದ್ದೇಶಗಳಿವೆಯೇ, ಭಾರತ- ಪಾಕಿಸ್ತಾನದ ನಡುವಿನ ಸಂಬಂಧಗಳು ಕಾರಣವಾಗಿದೆಯೇ ಅಥವಾ ದೇಶದಲ್ಲಿರುವ ಶಾಂತಿಪೂರ್ಣ ವಾತಾವರಣವನ್ನು ಕೆಡಿಸಲು ಮುಂಬರುತ್ತಿರುವ ಚುನಾವಣೆಗಳಲ್ಲಿ ಇದನ್ನು ಅಸ್ತ್ರವಾಗಿರಿಸಿಕೊಳ್ಳಲು ನಡೆಸಿದ ದೊಡ್ಡ ಪಿತೂರಿಯಾದೆಯೇ ಎಂಬ ಕುರಿತು ಅರಿಯಬೇಕಾದ ಅವಶ್ಯಕತೆ ಇದೆ. ಕಾಶ್ಮೀರದ ಜನತೆಯಲ್ಲಿ ಹುದುಗಿರುವ ಭಯವನ್ನು ಹಾಗೂ ದುಃಖವನ್ನು ಕಡಿಮೆಗೊಳಿಸಲು ಶಾಂತಿ ಮತ್ತು ಭದ್ರತೆಯನ್ನು ಹೆಚ್ಚಿಸಬೇಕಾದ ಅಗತ್ಯತೆ ಇದೆ” ಎಂದರು.