11ಜೋಡಿಗಳ ಸರಳ ಸಾಮೂಹಿಕ ವಿವಾಹ

0
529

ಸನ್ಮಾರ್ಗ ವಾರ್ತೆ

ಮಂಗಳೂರು: ಹಾಜಿ ಕಾರ್ಕಳ ಶೇಕ್ ಸಾಬು ಸಾಹೀಬ್ ಮೆಮೊರಿಯಲ್ ಟ್ರಸ್ಟ್ ಬರ್ಕೆ ಮಂಗಳೂರು ವತಿಯಿಂದ 11 ಮುಸ್ಲಿಂ ಜೋಡಿಗಳ ಸಾಮೂಹಿಕ ಮದುವೆ ಸಮಾರಂಭ ರವಿವಾರ ನಗರದ ಬೋಳಾರಿನಲ್ಲಿರುವ ಶಾದಿ ಮಹಲ್ ಸಭಾಂಗಣದಲ್ಲಿ ನಡೆಯಿತು. ವಿರೋಧ ಪಕ್ಷದ ಉಪನಾಯಕ ಯು.ಟಿ ಖಾದರ್ ಕಾರ್ಯಕ್ರಮವನ್ನು ಉದ್ಘಾಟಿಸಿ, ಶಿಕ್ಷಣದಿಂದ ಮಾತ್ರ ಸಕಾರಾತ್ಮಕ ಭವಿಷ್ಯ ರೂಪಿಸಲು ಸಾಧ್ಯ, ಮುಂದಿನ ಜನಾಂಗಕ್ಕೆ ಅದುವೇ ನಾವು ಕೊಡುವ ಉಡುಗೊರೆ ಎಂದು ನವ ಜೋಡಿಗಳಿಗೆ ಉಪದೇಶಿಸಿ, ಶುಭ ಹಾರೈಸಿದರು.

ನಿಕಾಹ್‌‌ನ ನೇತೃತ್ವವನ್ನು ಮಂಗಳೂರಿನ ಖಾಝಿ ಹಾಜಿ‌ ಶೇಖುನಾ ತ್ವಾಖಾ ಅಹ್ಮದ್ ಮುಸ್ಲಿಯಾರ್ ಮತ್ತು ಜಾಮೀಯ ಮಸೀದಿಯ ಖತೀಬ್ ಹಾಜಿ‌ ಮುಫ್ತಿ‌‌ ಮನ್ನಾನ್ ವಹಿಸಿದರು. ಶೈಕ್ಷಣಿಕ ಮತ್ತು ಉದ್ಯಮದಲ್ಲಿ ಯಶಸ್ವಿ ಸಾಧನೆಗೈದ ಡಾ.ವೈ ಅಬ್ದುಲ್ಲ ಕುಂಞಿ( ಕುಲಪತಿ ಯೇನಪೋಯ ವಿಶ್ವವಿದ್ಯಾಲಯ), ಮತ್ತು ಹಾಜಿ ಕೆ.ಎಸ್ ನಿಸಾರ್ ಅಹ್ಮದ್ ಕಾರ್ಕಳ (ಚೇರ್ಮನ್, ನಾಶಾ ಗ್ರೂಪ್ ಆಫ್ ಕಂಪೆನಿಸ್ ದುಬೈ) ಇವರಿಗೆ ಅವಿಭಜಿತ ದ.ಕ ಸೆಂಟ್ರಲ್ ಕಮಿಟಿ ವತಿಯಿಂದ ಸನ್ಮಾನ ಮಾಡಲಾಯಿತು.

ಸಭೆಯ ಅಧ್ಯಕ್ಷತೆಯನ್ನು ದ.ಕ ಮತ್ತು ಉಡುಪಿ ಜಿಲ್ಲೆಯ ಮುಸ್ಲಿಂ ಸೆಂಟ್ರಲ್ ಕಮಿಟಿಯ ಅಧ್ಯಕ್ಷರಾದ ಹಾಜಿ ಕೆ.ಎಸ್ ಮಸೂದ್ ವಹಿಸಿದ್ದರು. ಮುಹಮ್ಮದ್ ‌ಆರಿಫ್ ಮಸೂದ್ ಸ್ವಾಗತಿಸಿದರು. ಹಾಜಿ ಕೆ.ಎಸ್ ಇಮ್ತಿಯಾಝ್ ಅಹ್ಮದ್, ಕಾರ್ಯದರ್ಶಿ, ಹಾಜಿ ಕಾರ್ಕಳ ಶೇಖ್ ಸಾಬು ಮೆಮೊರಿಯಲ್ ಟ್ರಸ್ಟ್ ಸಂಸ್ದೆಯ ಪರಿಚಯ‌ ಮಾಡಿದರು. ವೇದಿಕೆಯಲ್ಲಿ ಮಾಜಿ ಶಾಸಕ ಮೊಯ್ದೀನ್ ಬಾವಾ, ಮುಸ್ಲಿಂ ಸೆಂಟ್ರಲ್ ಮಾಜಿ ಉಪಾಧ್ಯಕ್ಷ ಬಾಷಾ ಕುಂದಾಪುರ, ಶಾದಿ‌ ಮಹಲ್ ಟ್ರಸ್ಟ್ ಅಧ್ಯಕ್ಷ ಅಬ್ದುಲ್ ಖಾದರ್ ಉಪಸ್ಥಿತರಿದ್ದರು. ಮೌಲಾನ ಝಬೈರ್ ಕಿರಾಅತ್ ಪಠಿಸಿದರು. ಹಾಜಿ ಇಬ್ರಾಹಿಂ ಕೋಡಿಜಾಲ್ ಕಾರ್ಯಕ್ರಮ ನಿರೂಪಿಸಿದರು. ಮುಹಮ್ಮದ್ ಹನೀಫ್ ಧನ್ಯವಾದವಿತ್ತರು.