ಕಣ್ಣೂರ್, ಮೇ 4: ಹೌದೆನ್ನುತ್ತವೆ ವರದಿಗಳು. ಕಾಂಗ್ರೆಸ್ನಿಂದ ಉದ್ದೇಶಪೂರ್ವಕವಾಗಿ ಹೊರ ಹೆಜ್ಜೆ ಇಡಲಿಕ್ಕಾಗಿ ಕಾಂಗ್ರೆಸ್ ನಾಯಕ ಅಬ್ದುಲ್ಲ ಕುಟ್ಟಿ ಮೋದಿಯವರನ್ನು ಮಹಾತ್ಮಗಾಂಧಿಗೆ ಹೋಲಿಸಿದ್ದಾರೆ ಎಂದು ವರದಿಯಾಗಿದೆ. ಮಂಗಳೂರು ಸಹಿತ ದಕ್ಷಿಣ ಕನ್ನಡದಲ್ಲಿ ಬಿಜೆಪಿಯ ಅಲ್ಪಸಂಖ್ಯಾತ ವಿಭಾಗದತ್ತ ಅವರು ಕಣ್ಣು ಹಾಯಿಸಿದ್ದಾರೆ ಎನ್ನಲಾಗುತ್ತಿದೆ. ಅಬ್ದುಲ್ಲ ಕುಟ್ಟಿ ಕೆಲವು ವರ್ಷಗಳಿದ ಕುಟುಂಬ ಸಹಿತ ಮಂಗಳೂರಿನಲ್ಲಿ ವಾಸಿಸುತ್ತಿದ್ದು ದಕ್ಷಿಣ ಕನ್ನಡದ ಲೋಕಸಭಾ ಸದಸ್ಯ ನಳಿನ್ಕುಮಾರ್ ಗೆ ನಿಕಟವಾಗಿದ್ದಾರೆ ಎನ್ನಲಾಗುತ್ತಿದೆ. ಬಿಜೆಪಿಯ ಕಣ್ಣೂರ್, ಕಾಸರಗೋಡು ಜಿಲ್ಲೆಯ ಉಸ್ತುವಾರಿ ಕಟೀಲ್ರಿಗಿದೆ.
ಕಟೀಲ್ ಮತ್ತು ಅಬ್ದುಲ್ಲ ಕುಟ್ಟಿಯವರ ನಡುವೆ ಮಾತುಕತೆ ನಡೆಯುತ್ತಿದ್ದರೂ ಕಣ್ಣೂರಿನ ಬಿಜೆಪಿ ನಾಯಕರಿಗೆ ಈ ಬಗ್ಗೆ ತಿಳಿದಿಲ್ಲ. ಅಬ್ದುಲ್ಲಕುಟ್ಟಿ ನಿರ್ಧರಿಸಿ ಕಾಂಗ್ರೆಸ್ನಿಂದ ಹೊರಗೆ ಹೆಜ್ಜೆ ಇಟ್ಟಿದ್ದರು . ಇದಕ್ಕೆ ಅವರ ಇತ್ತೀಚೆಗಿನ ಬೆಳವಣಿಗೆಗಳಲ್ಲಿ ಸಾಕ್ಷ್ಯವಿದೆ. ನರೇಂದ್ರ ಮೋದಿಯ ಎದುರು ಕಾಂಗ್ರೆಸ್ ದಯನೀಯವಾಗಿ ಸೋಲುಂಡ ಬೆನ್ನಿಗೆ ಮೋದಿಯನ್ನು ಗಾಂಧೀಜಿಗೆ ಅವರು ಹೋಲಿಸುವ ಧೈರ್ಯವನ್ನು ತೆಗೆದುಕೊಂಡಿದ್ದರು. ಕಾಂಗ್ರೆಸ್ ಇದನ್ನು ಸಹಿಸದು ಎಂದು ಅವರಿಗೆ ಗೊತ್ತಿದ್ದರೂ ತಮ್ಮ ನಿಲುವಿನಲ್ಲಿ ಅಚಲವಾದರು. ಕೆಪಿಸಿಸಿ ಶೋಕಾಸು ನೋಟಿಸಿಗೂ ಸರಿಯಾಗಿ ಉತ್ತರಿಸಿಲ್ಲ. ಕಾಂಗ್ರೆಸ್ಗೆ ಅವರನ್ನು ಉಚ್ಚಾಟಿಸುವುದೊಂದೇ ದಾರಿಯೆನ್ನುವ ಪರಿಸ್ಥಿತಿ ಸೃಷ್ಟಿಸಿದ್ದರು. ಹೀಗೆ ಅವರು ಬಿಜೆಪಿಯತ್ತ ಸರಿಯುತ್ತಿದ್ದಾರೆ ಎಂದು ಕೇರಳ ಮೂಲದ ವರದಿಗಳು ತಿಳಿಸುತ್ತಿವೆ. ಅಬ್ದುಲ್ಲಕುಟ್ಟಿ ಮೊದಲು ಸಿಪಿಎಂ ನಾಯಕರಾಗಿದ್ದು ಅಲ್ಲಿಂದ ಉಚ್ಚಾಟನೆಗೊಂಡಿದ್ದರು. ನಂತರ ಕಾಂಗ್ರೆಸ್ ಸೇರ್ಪಡೆಯಾಗಿದ್ದರು. ಅಲ್ಲಿಂದಲೂ ಉಚ್ಚಾಟಿಸಲ್ಪಟ್ಟಿದ್ದಾರೆ. ಇದೇವೇಳೆ ರಾಜಕೀಯದಿಂದ ದೂರವಿರುವುದಿಲ್ಲ ಎಂದು ಅವರು ಹೇಳುತ್ತಿದ್ದಾರೆ. ಅವರಿಗೆ ಇನ್ನು ಇರುವ ಏಕೈಕ ಆಸರೆ ಬಿಜೆಪಿ ಎನ್ನಲಾಗುತ್ತಿದೆ.












