ದೆಹಲಿ ಹಿಂಸಾಚಾರ ಪ್ರಕರಣ: ಸಾಕ್ಷ್ಯಾಧಾರದ ಕೊರತೆಯಿಂದಾಗಿ 20 ಮಂದಿಗೆ ಜಾಮೀನು; FIRನಲ್ಲಿ ತಮ್ಮ ಹೆಸರಿಲ್ಲ ಎಂದ ಅರ್ಜಿದಾರರು

0
723

ಸನ್ಮಾರ್ಗ ವಾರ್ತೆ

ನವದೆಹಲಿ,ಮೇ.25: ಕಳೆದ ಒಂದು ವಾರದಲ್ಲಿ ಈಶಾನ್ಯ ದೆಹಲಿ ಹಿಂಸಾಚಾರ ಪ್ರಕರಣದಲ್ಲಿ 20 ಜನರಿಗೆ ಜಾಮೀನು ಸಿಕ್ಕಿದೆ. ಅವರಲ್ಲಿ ಹೆಚ್ಚಿನವರು ಸಂಬಂಧಪಟ್ಟ ನ್ಯಾಯಾಲಯಗಳಿಗೆ, ತಮ್ಮ ಹೆಸರು ಎಫ್‌ಐಆರ್‌ಗಳಲ್ಲಿಲ್ಲ ಎಂದೂ ತಮ್ಮ ಹೆಸರುಗಳನ್ನು ತಪ್ಪಾಗಿ ಉಲ್ಲೇಖಿಸಿ ಆರೋಪಹೊರಿಸಲಾಗಿದೆ ಎಂದು ಹೇಳಿರುವುದು ವರದಿಯಾಗಿದೆ.

“ಜಾಮೀನು ಕೋರಿದ ಹೆಚ್ಚಿನ ಆರೋಪಿಗಳನ್ನು ಲಾಕ್‌ಡೌನ್ ಸಮಯದಲ್ಲಿ ಬಂಧಿಸಲಾಗಿದೆ ”ಎಂದು ದಿ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.

ಕೊರೋನಾ ವೈರಸ್ ಹರಡುವಿಕೆಯನ್ನು ನಿಯಂತ್ರಿಸುವ ಸಲುವಾಗಿ ಮಾರ್ಚ್ 24 ರಂದು ರಾಷ್ಟ್ರವ್ಯಾಪಿ ಲಾಕ್ ಡೌನ್ ವಿಧಿಸಲಾಯಿತು.

ಫೆಬ್ರವರಿ ಅಂತ್ಯದ ಈಶಾನ್ಯ ದೆಹಲಿಯ ವಿವಿಧ ಪ್ರದೇಶಗಳಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಪೊಲೀಸರು 750 ಪ್ರಕರಣಗಳನ್ನು ದಾಖಲಿಸಿ 1300 ಜನರನ್ನು ಬಂಧಿಸಿದ್ದಾರೆ.

ಫೆಬ್ರವರಿ 24 ರಿಂದ ಪ್ರಾರಂಭವಾದ ಮೂರು ದಿನಗಳ ಹಿಂಸಾಚಾರದಲ್ಲಿ, ಸುಮಾರು 50 ಜನರು ಸಾವನ್ನಪ್ಪಿದರು ಮತ್ತು ನೂರಾರು ಮಂದಿ ಗಾಯಗೊಂಡರು. ಗಲಭೆಕೋರರು ನೂರಾರು ಮನೆಗಳನ್ನು, ಅಂಗಡಿಗಳು ಮತ್ತು ವಾಹನಗಳನ್ನು ಲೂಟಿ ಮಾಡಿ ಸುಟ್ಟು ಹಾಕಿದ್ದರು.

ಮೇ 22 ರಂದು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ (ಎಎಸ್‌ಜೆ) ಸುನಿಲ್ ಚೌಧರಿ ಸಾಕ್ಷ್ಯಾಧಾರದ ಕೊರತೆಯಿಂದಾಗಿ ಕೆಲವು ಆರೋಪಿಗಳಿಗೆ ಜಾಮೀನು ನೀಡಿದರು.

ಜಾಮೀನು ಅರ್ಜಿಯನ್ನು ಐಒ ವಿರೋಧಿಸಿದೆ. ಪ್ರಶ್ನೆಯ ನಂತರ, ಐಒ ಅವರು ಈ ಘಟನೆಯಲ್ಲಿ ಅರ್ಜಿದಾರರ(ಆರೋಪಿ) ಸಕ್ರಿಯ ಪಾಲ್ಗೊಳ್ಳುವಿಕೆಯನ್ನು ತೋರಿಸಲು ಯಾವುದೇ ಎಲೆಕ್ಟ್ರಾನಿಕ್ ಪುರಾವೆಗಳನ್ನು ಸಂಗ್ರಹಿಸಲು ಸಾಧ್ಯವಾಗಿಲ್ಲ ಎಂದು ಉತ್ತರಿಸಿದರು. ಘಟನೆಯಲ್ಲಿ ಜಾಮೀನುಕೋರಿದ ಅರ್ಜಿದಾರರನ್ನು ಹಿಂಸೆಯಲ್ಲಿ ಭಾಗಿಯಾಗಿರುವುದನ್ನು ನೋಡಿದ ಯಾವುದೇ ಸಾರ್ವಜನಿಕ ಪ್ರತ್ಯಕ್ಷದರ್ಶಿ ಸಾಕ್ಷ್ಯಗಳನ್ನು ಕಂಡುಹಿಡಿಯಲು ತನಗೆ ಸಾಧ್ಯವಾಗಿಲ್ಲ ಎಂದು ಐಓ ಹೇಳಿದ್ದಾರೆ” ಎಂದು ಜಾಮೀನು ಆದೇಶದಲ್ಲಿ ಎಎಸ್‌ಜೆ ಚೌಧರಿ ಉಲ್ಲೇಖಿಸಿರುವುದಾಗಿ, ಇಂಗ್ಲಿಷ್ ದಿನಪತ್ರಿಕೆ ಹೇಳುತ್ತದೆ.

ಕಳೆದ ಒಂದು ತಿಂಗಳಲ್ಲಿ, ಈಶಾನ್ಯ ದೆಹಲಿ ಹಿಂಸಾಚಾರಕ್ಕೆ ಸಂಬಂಧಿಸಿದಂತೆ, ಡಿಸೆಂಬರ್-ಮಾರ್ಚ್ ನಡುವಿನ ಸಿಎಎ ವಿರೋಧಿ ಪ್ರತಿಭಟನೆಯಲ್ಲಿ ಮುಂಚೂಣಿಯಲ್ಲಿದ್ದ ಹಲವಾರು ಯುವ ಕಾರ್ಯಕರ್ತರು ಮತ್ತು ವಿದ್ಯಾರ್ಥಿಗಳನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಅವರಲ್ಲಿ ಜಾಮಿಯಾ ಮಿಲ್ಲಿಯಾ ವಿದ್ಯಾರ್ಥಿಗಳಾದ ಸಫೂರಾ ಜರ್ಗರ್, ಮೀರಾನ್ ಹೈದರ್ ಮತ್ತು ಆಸಿಫ್ ಇಕ್ಬಾಲ್ ತನ್ಹಾ ಸೇರಿದ್ದಾರೆ. ಇವರ ಮೇಲೆ ಕಾನೂನು ಬಾಹಿರ ಚಟುವಟಿಕೆಗಳ ತಡೆಗಟ್ಟುವಿಕೆ ಕಾಯ್ದೆ (ಯುಎಪಿಎ)ಅಡಿಯಲ್ಲಿ ಆರೋಪಗಳನ್ನು ಹೊರಿಸಲಾಗಿದೆ.