ಸನ್ಮಾರ್ಗ ವಾರ್ತೆ
ಉತ್ತರ ಪ್ರದೇಶ,ಅ.2: ಕೇಂದ್ರ ಹಾಗೂ ಉತ್ತರ ಪ್ರದೇಶ ಸರಕಾರಗಳ ಅಧಿಕಾರ ಬಲಪ್ರಯೋಗವನ್ನು ವಿರೋಧಿಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗಾಂಧೀಜಿಯ ಮಾತುಗಳನ್ನು ಟ್ವೀಟ್ ಮಾಡಿದ್ದಾರೆ. ಮೇಲ್ಜಾತಿಯವರ ಕ್ರೂರ ದೌರ್ಜನ್ಯದಿಂದ ಕೊಲೆಯಾದ ಹಥ್ರಸ್ನ ಬಾಲಕಿಯ ಕುಟುಂಬವನ್ನು ಭೇಟಿ ಮಾಡದಂತೆ ತಡೆಯುವ ವೇಳೆ ಅವರ ಮೇಲೆ ಕೈ ಮಾಡಿದ ಪೊಲೀಸರ ವರ್ತನೆಗೆ ಭೂಮಿಯಲ್ಲಿ ನಾನು ಯಾರಿಗೂ ಹೆದರುವುದಿಲ್ಲ ಎಂಬ ಗಾಂಧಿ ಉವಾಚವನ್ನು ಬಳಸಿಕೊಂಡಿದ್ದಾರೆ. ಗಾಂಧೀಜಿಯವರ ನುಡಿಗಳನ್ನು ಹಂಚಿಕೊಂಡ ರಾಹುಲ್ರ ಟ್ವೀಟ್ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಚರ್ಚೆಗೊಳಗಾಗಿದೆ.
“ಭೂಮಿಯಲ್ಲಿ ಯಾರಿಗೂ ನಾನು ಹೆದರುವುದಿಲ್ಲ. ನಾನು ಯಾರ ಅನ್ಯಾಯವನ್ನೂ ಸಹಿಸುವುದಿಲ್ಲ. ನಾನು ಸತ್ಯದ ಮೂಲಕ ಅಸತ್ಯವನ್ನು ಜಯಿಸುವೆನು. ಅಸತ್ಯವನ್ನು ಎದುರಿಸುವಾಗ ಆಗು ಎಲ್ಲ ಕಷ್ಟಗಳನ್ನು ನನ್ನಿಂದ ಸಹಿಸಲು ಸಾಧ್ಯವಿದೆ ಎಂಬ ಮಹಾತ್ಮಾ ಗಾಂಧಿಯ ಮಾತುಗಳನ್ನು ರಾಹುಲ್ ಗಾಂಧಿ ಗಾಂಧಿ ಜಯಂತಿ ಎಂಬ ಹ್ಯಾಶ್ ಟ್ಯಾಗ್ ಮೂಲಕ ಟ್ವೀಟ್ ಮಾಡಿದ್ದಾರೆ.
ಉತ್ತರ ಪ್ರದೇಶದ ಹಥ್ರಾಸ್ನಲ್ಲಿ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿ ಮೃತಪಟ್ಟಿದ್ದ ಬಾಲಕಿಯ ಮನೆಗೆ ಭೇಟಿ ನೀಡಲು ತೆರಳಿದ್ದ ರಾಹುಲ್ ಗಾಂಧಿ, ಸಹೋದರಿ ಪ್ರಿಯಾಂಕಾ ಗಾಂಧಿಯವರನ್ನು ಉತ್ತಪ್ರದೇಶ ಪೊಲೀಸರು ತಡೆದು ದೂಡಿಹಾಕಿದ್ದರು. ರಾಹುಲ್, ಪ್ರಿಯಾಂಕಾರ ವಿರುದ್ಧ ಕೇಸು ದಾಖಲಿಸಲು ಉತ್ತರ ಪ್ರದೇಶ ಸರಕಾರ ತೀರ್ಮಾನಿಸಿದೆ.
ನಿಷೇಧಾಜ್ಞೆ ಉಲ್ಲಂಘಿಸಿದ ಆರೋಪವನ್ನು ಇಬ್ಬರ ಮೇಲೆ ಹೊರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಸವಾಲಿನ ಟ್ವೀಟನ್ನು ರಾಹುಲ್ ಮಾಡಿದ್ದಾರೆ. ಉತ್ತರ ಪ್ರದೇಶದ ಹಥ್ರಸ್ನಲ್ಲಿ ಸೆಪ್ಟಂಬರ್ 14ರಂದು 19 ವರ್ಷದ ದಲಿತ ಬಾಲಕಿಯನ್ನು ಸಾಮೂಹಿಕ ಅತ್ಯಾಚಾರ ಮಾಡಲಾಗಿತ್ತು. ಗಂಭೀರ ಗಾಯಗೊಂಡಿದ್ದ ಆಕೆ ನಂತರ ದಿಲ್ಲಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಳು.












