➦ ಸಲೀಮ್ ಬೋಳಂಗಡಿ
ಮುಂದಿನ ಲೋಕಸಭಾ ಚುನಾವಣೆಯ ‘ಸೆಮಿಫೈನಲ್’ ಎಂದೇ ಬಿಂಬಿತವಾಗಿರುವ ಐದು ರಾಜ್ಯಗಳ ವಿಧಾನಸಭಾ ಚುನಾವಣೆಯ ಭೂಮಿಕೆ ಸಿದ್ಧವಾಗಿದೆ. ಈ ವರ್ಷದ ಕೊನೆಯಲ್ಲಿ ಫಲಿತಾಂಶವೂ ಪ್ರಕಟವಾಗಲಿದೆ. ಮಧ್ಯಪ್ರದೇಶ, ಛತ್ತೀಸ್ಗಢ, ರಾಜಸ್ತಾನ, ಮಿಝೋರಂ ಮತ್ತು ತೆಲಂಗಾಣ ರಾಜ್ಯಗಳ ಚುನಾವಣೆಯ ಫಲಿತಾಂಶ ಲೋಕಸಭಾ ಚುನಾವಣೆಯ ಮೇಲೆ ಪ್ರಭಾವ ಬೀರುವುದು ಖಚಿತ.
ಯಾವುದಾದರೊಂದು ಮೈತ್ರಿಕೂಟ ರಚಿಸಿ ಸ್ಪಷ್ಟ ಬಹುಮತ ಪಡೆಯಲು ಪಕ್ಷಗಳು ಹಾತೊರೆಯುತ್ತಿವೆ. ಕೇಂದ್ರ ಸರ ಕಾರದ ದುರಾಡಳಿತ, ಮಿತಿಮೀರಿದ ತೈಲ ಬೆಲೆ ಏರಿಕೆಯಿಂದ ಜನರು ರೋಸಿ ಹೋಗಿರುವಾಗ ಕಾಂಗ್ರೆಸ್ ಪಕ್ಷವು ಮೈತ್ರಿಕೂಟ ರಚಿಸಿ ರಣತಂತ್ರ ರೂಪಿಸುತ್ತಿದೆ. ಹೀಗಿರುವಾಗ ಬಿಜೆಪಿ ಸಹಜವಾಗಿಯೇ ಮಾನಸಿಕವಾಗಿ ಕುಸಿದಿದೆ. ಮಾತ್ರವಲ್ಲ, ಕಾಂಗ್ರೆಸ್ ಮತ್ತದರ ಮಿತ್ರಪಕ್ಷಗಳ ಇತ್ತೀಚಿನ ಚುನಾವಣೆಗಳಲ್ಲಿ ಕೆಲಕಡೆ ಜಯಭೇರಿ ಬಾರಿಸಿದ್ದು ಬಿಜೆಪಿ ಪಾಳಯದಲ್ಲಿ ಆತಂಕದ ಛಾಯೆ ಹರಡಿದೆ. ಹೀಗಿರುವಾಗ ಬಿಎಸ್ಪಿ ನಾಯಕಿ ಮಾಯಾ ವತಿಯು ರಾಜಸ್ತಾನ ಮತ್ತು ಮಧ್ಯಪ್ರದೇಶದಲ್ಲಿ ಸ್ವತಂತ್ರವಾಗಿ ಸ್ಪರ್ಧಿಸುವೆನೆಂದು ಹೇಳಿ ಕೆಲ ಕಾಂಗ್ರೆಸ್ ನಾಯಕರ ಮೇಲೆ ಎಗರಾಡಿದ್ದು ಬಿಜೆಪಿ ಪಾಳಯಕ್ಕೆ ಗ್ಲೂಕೋಸ್ ನೀಡಿದಂತಾಗಿದೆಯೆಂದರೆ ತಪ್ಪಾಗಲಾರದು. ಬಹುಜನ ಸಮಾಜ ವಾದಿ ಪಕ್ಷದ ನಾಯಕಿಯ ಈ ಹಠಾತ್ ನಿರ್ಧಾರದ ಹಿಂದೆ ಸೀಟು ತರ್ಕವೆಂದು ಹೇಳಬಹುದಾದರೂ ಬಿಜೆಪಿಯ ಕೈಚಳಕವನ್ನು ತಳ್ಳಿಹಾಕುವಂತಿಲ್ಲ.
ಈ ಮಹಾ ಮೈತ್ರಿಕೂಟದ ನಡುವೆ ಎಳ್ಳು ನೀರು ಬಿಟ್ಟರೆ ಮಾತ್ರ ಬಿಜೆಪಿಗೆ ಯಶಸ್ಸು ಎಂಬುದು ಸರ್ವ ವೇದ್ಯವಾದ ಮಾತು. ಮಧ್ಯಪ್ರದೇಶದಲ್ಲಿ ಐವತ್ತು ಮತ್ತು ಚತ್ತೀಸ್ಗಢದಲ್ಲಿ 15 ಸ್ಥಾನ ನೀಡಬೇಕೆಂದು ಬಿಎಸ್ಪಿ ಕೇಳಿದ್ದರೆ ಕಾಂಗ್ರೆಸ್ ಕ್ರಮವಾಗಿ 22 ಮತ್ತು ಒಂಬತ್ತು ನೀಡುವುದಾಗಿ ಹೇಳಿತ್ತು. ರಾಜಸ್ತಾನದಲ್ಲಿ ಬಿಎಸ್ಪಿಗೆ ಹೆಚ್ಚು ಹಿಡಿತವಿಲ್ಲದ ಕಾರಣ ಅಲ್ಲಿ ಹೆಚ್ಚು ತರ್ಕಕ್ಕೆ ಆಸ್ಪದ ನೀಡಿರಲಿಲ್ಲ. ಮಧ್ಯಪ್ರದೇಶದಲ್ಲಿ 2015ರಲ್ಲಿ 227 ಸ್ಥಾನಗಳಿಗೆ ಸ್ಪರ್ಧಿಸಿದ್ದ ಬಿಎಸ್ಪಿ ಶೇಕಡಾ 6.29 ಮತ ಗಳಿಸಿದರೆ, ಶೇಕಡಾ 36.35 ಮತ ಪಡೆದ ಕಾಂಗ್ರೆಸ್ 58 ಸ್ಥಾನ ಗಳಿಸಿತ್ತು. ಶೇಕಡಾ 44.88 ಮತ ಗಳಿಸಿದ ಬಿಜೆಪಿ 165 ಸ್ಥಾನ ಗಳಿಸಿ ಅಧಿಕಾರಕ್ಕೇರಿತ್ತು. ಚತ್ತೀಸ್ಗಡದಲ್ಲಿಯೂ 2013ರಲ್ಲಿ 90 ಸ್ಥಾನಗಳಿಗೆ ಸ್ಪರ್ಧಿಸಿದ ಬಿಎಸ್ಪಿ ಕೇವಲ ಶೇಕಡಾ 4.2 ಮತ ಪಡೆದು ಒಂದು ಸ್ಥಾನವನ್ನು ಗಳಿಸಿತ್ತು. ಕಾಂಗ್ರೆಸ್ 43.33 ಶೇಕಡಾ ಮತ ಪಡೆದು 39 ಸ್ಥಾನ ಗಳಿಸಿದರೆ ಬಿಜೆಪಿಯು 54.44 ಶೇಕಡಾ ಮತ ಪಡೆದು 49 ಸ್ಥಾನ ಗಳಿಸಿತ್ತು. ಈ ಅಂಕಿ ಅಂಶಗಳು ಎರಡೂ ರಾಜ್ಯಗಳಲ್ಲಿ ಕಾಂಗ್ರೆಸ್ ಮೈತ್ರಿಕೂಟ ಎಷ್ಟು ನಿ ರ್ಣಾಯಕವೆಂಬುದನ್ನು ಸ್ಪಷ್ಟಪಡಿಸಿದೆ.
ಆದ್ದರಿಂದ ಹೇಗಾದರೂ ಮಾಡಿ ಈ ಮೈತ್ರಿಕೂಟವನ್ನು ಮುರಿಯಲು ಬಿಜೆಪಿ ಮುಂದಾಗಲೇಬೇಕು. ಕೇಂದ್ರ ಸರಕಾರ ಆದಾಯ ತೆರಿಗೆಯ ದಾಳಿಯ ಅಸ್ತ್ರವನ್ನು ಮಾಯಾವತಿಯ ಸಹೋದರ ಆನಂದ ಕುಮಾರ್ ವಿರುದ್ಧ ಪ್ರಯೋಗಿಸಿದೆ ಎಂಬ ಆರೋಪಗಳು ಕೇಳಿಬರುತ್ತಿದೆ. ಅನಧಿಕೃತ ಆಸ್ತಿಯ ವಿಚಾರದಲ್ಲಿ ಆದಾಯ ಇಲಾಖೆಯು 2017ರ ಜನವರಿಯಲ್ಲಿ ಆನಂದ ಕುಮಾರ್ ವಿರುದ್ಧ ಪ್ರಕರಣ ದಾಖಲಿಸಿತ್ತು. ಹೌದು, 2007ರಿಂದ 2014ರ ನಡುವೆ ಆನಂದ ಕುಮಾರ್ರ ಆಸ್ತಿಯಲ್ಲಿ 1300 ಕೋಟಿ ಪಟ್ಟು ವರ್ಧನೆಯಾಗಿದೆ. ಇದು ಸಂಶಯಕ್ಕೆಡೆ ಮಾಡಿದೆ.
ಛತ್ತೀಸ್ಗಢದಲ್ಲಿ ಕಾಂಗ್ರೆಸ್ನ ಬಂಡಾಯ ನಾಯಕ ಅಜಿತ್ ಜೋಗಿಯೊಂದಿಗೆ ಸೇರಿ ಮಾಯಾವತಿ ಚುನಾ ವಣಾ ಕಣಕ್ಕಿಳಿದರೆ ಕಾಂಗ್ರೆಸ್ ಮತಬ್ಯಾಂಕ್ಗೆ ಹೊಡೆತ ಬೀಳುವುದು ಖಚಿತ. ಇದು ಬಿಜೆಪಿಗೆ ವರದಾನವಾಗುತ್ತದೆ.
ಹೀಗಿದ್ದರೂ, ಈ ಮಹಾಮೈತ್ರಿ ಕೂಟಕ್ಕೆ ಮಾಯಾವತಿ ಮರಳಿ ಸೇರುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಯಾಕೆಂದರೆ, ಒಂದುವೇಳೆ ಬಿಎಸ್ಪಿ ಏಕಾಂಗಿಯಾಗಿ ಸ್ಪರ್ಧಿಸಿದರೆ ಬಿಎಸ್ಪಿ ಈ ರಾಜ್ಯಗಳಲ್ಲಿ ಹೇಳಹೆಸರಿಲ್ಲದಂತೆ ಧೂಳೀಪಟ ವಾಗುವ ಸಾಧ್ಯತೆಯೂ ಇದೆ. ದಿ ಗ್ವಿಜಯ್ ಸಿಂಗ್ ಮತ್ತಿತರ ಕೆಲ ನಾಯಕರನ್ನು ಟೀಕಿಸಿದರೂ ಸೋನಿಯಾ ಗಾಂಧಿ ಮತ್ತು ರಾಹುಲ್ರನ್ನು ಮಾಯಾವತಿ ಟೀಕಿಸದೇ ಇರುವುದು ಮತ್ತು ರಾಹುಲ್ಗಾಂಧಿಯವರು ಬಿಎಸ್ಪಿ ಮತ್ತಿತರ ಪಕ್ಷಗಳ ಜೊತೆಯಾಗಿ ಚುನಾವಣೆ ಎದುರಿಸು ವೆವು ಎಂದು ಹೇಳಿ ರುವುದು ಮತ್ತೆ ಮೈತ್ರಿ ಕೂಟ ಪ್ರಬಲವಾಗುವ ಸಾಧ್ಯತೆಯನ್ನು ಜೀವಂತವಾಗಿರಿಸಿದೆ.
ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೇರುವುದನ್ನು ತಡೆಯಲು ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿಕೂಟ ರಚಿಸಿದ್ದನ್ನು ಪ್ರಶಂಸಿಸಿ ಅಭಿನಂಧಿಸಲು ಬಂದಿದ್ದ ಮಾಯಾವತಿ ಮಹಾ ಮೈತ್ರಿಕೂಟದ ಕನಸಿಗೆ ಜೀವ ತುಂಬಿದ್ದರು. ನಿಜವಾಗಿ ಅದಕ್ಕಿಂತ ಎರಡು ತಿಂಗಳು ಮೊದಲೇ ಗೋರಖ್ಪುರ ಮತ್ತು ಪುಲ್ಪುರ ಲೋಕಸಭಾ ಚುನಾವಣೆಯಲ್ಲಿ ಈ ಮೈತ್ರಿಕೂಟ ತನ್ನ ಛಾಪು ಮೂಡಿಸಿತ್ತು. ಕರ್ನಾಟಕದ ವಿಧಾನಸಭಾ ಚುನಾವಣೆಯ ಬಳಿಕ ಹೆಚ್ಚು ಬಲಿಷ್ಠವಾದ ಈ ಮೈತ್ರಿಕೂಟವು ಉತ್ತರ ಪ್ರದೇಶದ ಖೈರ್ನಾರ್ ಮಹಾರಾಷ್ಟ್ರದ ಬಂದಾರದಲ್ಲಿ ಬಿಜೆಪಿಯ ತೆಕ್ಕೆಯಲ್ಲಿದ್ದ ಸಂಸತ್ ಸ್ಥಾನವನ್ನು ಕಸಿದುಕೊಂಡಿತ್ತು. ಕೆಲ ವಿಧಾನಸಭಾ ಸ್ಥಾನಗಳನ್ನು ಬಿಜೆಪಿ ಕಳಕೊಳ್ಳಬೇಕಾಯಿತು.
ಹೀಗೆ ಮಹಾಮೈತ್ರಿ ಕೂಟ ಪ್ರಜ್ಞಾವಂತ ನಾಗರಿಕರಲ್ಲಿ ಹೊಸ ಭರವಸೆ ಮೂಡತೊಡಗಿದಂತೆ ಎನ್ಸಿಪಿ ನಾಯಕ ಶರದ್ ಪವಾರ್ ಕೂಡಾ ಬಿಜೆಪಿ ಪಾಳಯಕ್ಕೆ ಹೊರಳುವ ಸೂಚನೆಗಳು ಕಂಡುಬರತೊಡಗಿತು. ಜಾತ್ಯತೀತರಾದ ಈ ದೇಶದ ಜನರನ್ನು ನಿರಾಶಗೊಳಿಸುವ ಸ್ಥಿತಿಯಲ್ಲಿ ಕೆಲ ನೇತಾರರ ವರ್ತನೆಗಳು ಬಹಿರಂಗವಾಗು ತ್ತಿರುವುದು ಆಶಾದಾಯಕ ವಿಚಾರವೇನಲ್ಲ.
ನಿಜವಾಗಿ, ಮಾಯಾವತಿಯವರು ರಾಜಕೀಯ ದಲ್ಲಿ ಪಕ್ವತೆಯಿರುವವರು. ಮಾಯಾವತಿಗೆ ಇತರ ರಾಜ್ಯಗಳಿಗಿಂತ ಉತ್ತರ ಪ್ರದೇಶದ ರಾಜಕೀಯವು ಪ್ರಮುಖವಾಗಿದೆ. ಈಗ ಮಹಾಮೈತ್ರಿಕೂಟ ವೊಂದನ್ನು ರಚಿಸಿ ಬಿಜೆಪಿಯನ್ನು ಕೆರಳಿಸುವಂತಹ ಪ್ರಕ್ರಿಯೆಗೆ ಮುಂದಾಗುವ ಸಾಧ್ಯತೆ ವಿರಳ. ಯಾಕೆಂದರೆ, ಮಾಯಾವತಿಯವರ ಮೇಲಿರುವ ಹಳೆಯ ಕೇಸು ಕಡತವನ್ನು ಬಿಜೆಪಿ ತೆರೆಯ ಬಹುದು. ಈಗಾಗಲೇ ಚಿದಂಬರಂ ಮತ್ತವರ ಪುತ್ರನನ್ನು ಬಿಜೆಪಿಯು ಕಾಡುತ್ತಿರುವುದು ಮಾಯಾವತಿಯವರ ಗಮನಕ್ಕೆ ಬಂದಿರಬಹುದು. ವೃಥಾ ರಗಳೆಯನ್ನು ಮೈಮೇಲೆ ಏಕೆ ಎಳೆದು ಕೊಳ್ಳಬೇಕೆಂಬ ಚಿಂತೆಯೂ ಅವರನ್ನು ಕಾಡಿರ ಬಹುದು. ಕಾಂಗ್ರೆಸ್ಗೆ ಮೈತ್ರಿಕೂಟ ಅನಿವಾರ್ಯ ವಾಗಿದೆ. ಆದ್ದರಿಂದ ಸ್ವಲ್ಪ ಹೆಚ್ಚೇ ಸ್ಥಾನ ಕೇಳಿ ಕಾಂಗ್ರೆಸನ್ನು ಮಾಯಾವತಿಯವರು ಆಡಿಸುತ್ತಿದ್ದಾರೆ. ಜೊತೆಗೆ ಕಾಂಗ್ರೆಸ್ ಬಂಡುಕೋರ ಅಜಿತ್ ಜೋಗಿ ಜೊತೆ ಹೊಂದಾಣಿಕೆ ಮಾಡಿಕೊಳ್ಳುತ್ತೇ ನೆಂದು ಹೇಳಿರುವಾಗ ಈ ಒತ್ತಡಕ್ಕೆ ಕಾಂಗ್ರೆಸ್ ಅನಿವಾರ್ಯವಾಗಿ ಮಣಿಯಲೇಬೇಕಾದ ಪರಿಸ್ಥಿತಿ ಯಾಗಿದೆ.
ಹಾಗೆಯೇ ಬಿಜೆಪಿ ಜೊತೆ ಸೇರಿ ಕೊಂಡರೆ ಬಿಎಸ್ಪಿ ಅವಸಾನವಾದಂತೆ ಎಂಬ ವಾಸ್ತವದ ಅರಿವೂ ಮಾಯಾವತಿಯವರಿಗಿದೆ. ಆದ್ದರಿಂದ ಬಹಳ ಎಚ್ಚರಿಕೆಯಿಂದ ಮಾಯಾವತಿ ರಾಜಕೀಯದಾಟವಾಡುತ್ತಿದ್ದಾರೆ.
ಮತ್ತೊಂದೆಡೆ ಬಿಜೆಪಿಯು 2014ರ ಸ್ಥಿತಿಯಲ್ಲಿದ್ದಂತೆ ಈಗಿಲ್ಲ. ಹೀಗಿರುವಾಗ ಮೈತ್ರಿಕೂಟ ಮುಂದುವರಿದರೆ ಅಪಾಯ ಖಚಿತವೆಂಬ ಅರಿವೂ ಬಿಜೆಪಿಗಿದೆ. ಆದ್ದರಿಂದ ಮೋದಿ-ಅಮಿತ್ ಶಾ ಜೊತೆಯಾಗಿ ಈ ಮೈತ್ರಿಕೂಟ ಮುರಿಯಲು ನಾನಾ ರೀತಿಯ ತಂತ್ರ ಕಸರತ್ತುಗಳಲ್ಲಿ ತೊಡಗಿರಬಹುದು. ದೇಶದಲ್ಲಿ ಆಡಳಿತ ವಿರೋಧಿ ಅಲೆಯಿದೆಯೆಂಬ ಸಣ್ಣ ವಾಸನೆಯೂ ಬಿಜೆಪಿಯ ಮೂಗಿಗೆ ಬಡಿದಿರಬಹುದು.
ಆದ್ದರಿಂದ ಮೈತ್ರಿಕೂಟವನ್ನು ಮೊಳಕೆಯಲ್ಲಿಯೇ ಚಿವುಟಿ ಹಾಕುವ ಪ್ರಯತ್ನದಲ್ಲಿ ಅವರು ತೊಡಗಿರಬಹುದು. ಆದರೆ ಮಾಯಾವತಿಯ ರಾಜಕೀಯ ಚಾಣಾಕ್ಷತೆಯು ಈ ದೇಶದ ಪ್ರಜೆಗಳಿಗೆ ಪ್ರಯೋಜನ ಕಾರಿಯಾಗಬೇಕೇ ಹೊರತು ಸ್ವಾರ್ಥಕ್ಕಾಗಿ ಬಳಸು ವುದು ಥರವಲ್ಲ. ಕೊನೆಯ ಕ್ಷಣ ಮಾಯಾವತಿ ಯವರು ಎಡವಟ್ಟು ಮಾಡಿ ತಮ್ಮ ದಾರಿಗೆ ತಾವೇ ಮುಳ್ಳು ಹಾಕುತ್ತಿದ್ದಾರೆಯೇ? ಆದರೆ ಕಾಂಗ್ರೆಸ್ ಕೂಡಾ ಪರಿಸ್ಥಿತಿಯನ್ನು ಅರ್ಥೈಸಿ ವಿಶಾಲ ಮನೋ ಭಾವವನ್ನು ಪ್ರದರ್ಶಿಸಬೇಕಾಗಿದೆ.