ಸನ್ಮಾರ್ಗ ವಾರ್ತೆ
ಇಸ್ರೇಲ್ ಮತ್ತು ಹಮಾಸ್ ನಡುವಿನ ಕದನ ವಿರಾಮ ಮುರಿದ ನಂತರ, ಕಳೆದ 10 ದಿನಗಳಲ್ಲಿ ಗಾಜಾದಲ್ಲಿ ಕನಿಷ್ಠ 322 ಮಕ್ಕಳು ಸಾವನ್ನಪ್ಪಿದ್ದಾರೆ ಮತ್ತು 609 ಮಕ್ಕಳು ಗಾಯಗೊಂಡಿದ್ದಾರೆ ಎಂದು ವಿಶ್ವಸಂಸ್ಥೆಯ ಮಕ್ಕಳ ನಿಧಿ (ಯುನಿಸೆಫ್) ಸೋಮವಾರ ತಿಳಿಸಿದೆ.
ಯುನಿಸೆಫ್ ಕಾರ್ಯನಿರ್ವಾಹಕ ನಿರ್ದೇಶಕಿ ಕ್ಯಾಥರೀನ್ ರಸೆಲ್, “ಕದನ ವಿರಾಮವು ಗಾಜಾದ ಮಕ್ಕಳಿಗೆ ತೀರಾ ಅಗತ್ಯವಾದ ಜೀವನಾಡಿಯನ್ನು ಒದಗಿಸಿತ್ತು, ಆದರೆ ಈಗ ಮಕ್ಕಳು ಮತ್ತೆ ಹಿಂಸೆ ಮತ್ತು ಅಪಾಯಕ್ಕೆ ಒಳಗಾಗಿದ್ದಾರೆ” ಎಂದು ವಿಷಾದ ವ್ಯಕ್ತಪಡಿಸಿದರು. ಎಲ್ಲಾ ಪಕ್ಷಗಳು ಅಂತರರಾಷ್ಟ್ರೀಯ ಮಾನವೀಯ ಕಾನೂನಿನ ಪ್ರಕಾರ ಮಕ್ಕಳ ರಕ್ಷಣೆ ಹೊಣೆ ಹೊತ್ತುಕೊಳ್ಳಬೇಕಾಗಿದೆ ಎಂದು ಅವರು ಒತ್ತಿಹೇಳಿದರು.
ಮೃತರಾದ ಹೆಚ್ಚಿನ ಮಕ್ಕಳು ಸ್ಥಳಾಂತರಗೊಂಡು ತಾತ್ಕಾಲಿಕ ಡೇರೆಗಳಲ್ಲಿ ಅಥವಾ ಹಾನಿಗೊಳಗಾದ ಮನೆಗಳಲ್ಲಿ ಆಶ್ರಯ ಪಡೆದಿದ್ದರು. ಮಾರ್ಚ್ 23 ರಂದು ಅಲ್-ನಾಸರ್ ಆಸ್ಪತ್ರೆಯ ಶಸ್ತ್ರಚಿಕಿತ್ಸಾ ವಿಭಾಗದ ಮೇಲೆ ನಡೆದ ದಾಳಿಯಲ್ಲಿ ಸಹ ಹಲವಾರು ಮಕ್ಕಳು ಪ್ರಾಣ ಕಳೆದುಕೊಂಡಿದ್ದಾರೆ. ಮಾರ್ಚ್ 2 ರಿಂದ ಇಸ್ರೇಲಿ ದಾಳಿಗಳು ಪುನರಾರಂಭಗೊಂಡು, ಗಾಜಾದ ಸಹಾಯವು ಸಂಪೂರ್ಣವಾಗಿ ನಿರ್ಬಂಧಕ್ಕೆ ಒಳಗಾಗಿದೆ, ಇದರಿಂದ ಹತ್ತು ಲಕ್ಷಕ್ಕೂ ಹೆಚ್ಚು ಮಕ್ಕಳು ತೀವ್ರ ಅಪಾಯ ಎದುರಿಸುತ್ತಿದ್ದಾರೆ ಎಂದು ಯುನಿಸೆಫ್ ಎಚ್ಚರಿಸಿದೆ.
“ಯುದ್ಧ ಪ್ರಾರಂಭವಾದ ನಂತರದ ಅವಧಿಯು ಅತಿ ಉದ್ದದ ನಿರ್ಬಂಧದ ಅವಧಿಯಾಗಿದೆ. ಮಾರ್ಚ್ 2ರಿಂದ ಗಾಜಾಕ್ಕೆ ಯಾವುದೇ ಆಹಾರ, ನೀರು, ಆಶ್ರಯ ಅಥವಾ ವೈದ್ಯಕೀಯ ನೆರವು ಪ್ರವೇಶಿಸಿಲ್ಲ” ಎಂದು ಸಂಸ್ಥೆ ವರದಿ ಮಾಡಿದ್ದು, ತಡೆಗಟ್ಟಬಹುದಾದ ಮಕ್ಕಳ ಸಾವುಗಳು ಇನ್ನಷ್ಟು ಹೆಚ್ಚಾಗಬಹುದು ಎಂದು ಆತಂಕ ವ್ಯಕ್ತಪಡಿಸಿದೆ.
ಯುನಿಸೆಫ್ ತಕ್ಷಣದ ಕದನ ವಿರಾಮ, ಯುದ್ಧದ ಅಂತ್ಯ ಮತ್ತು ಗಾಜಾಗೆ ಮಾನವೀಯ ಹಾಗೂ ವಾಣಿಜ್ಯ ಸರಕುಗಳ ಪ್ರವೇಶಕ್ಕೆ ಅವಕಾಶ ಕಲ್ಪಿಸುವಂತೆ ಕರೆ ನೀಡಿದೆ. “ಜಗತ್ತು ಮಕ್ಕಳ ಹತ್ಯೆ ಮತ್ತು ಬಳಲಿಕೆಯನ್ನು ಮುಂದುವರಿಯಲು ಅವಕಾಶ ಕಲ್ಪಿಸಬಾರದು” ಎಂದು ಒತ್ತಿಹೇಳಿದ್ದು, ಅಂತರರಾಷ್ಟ್ರೀಯ ಸಮುದಾಯ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಒತ್ತಾಯಿಸಿದೆ.
ಅಕ್ಟೋಬರ್ 2023ರಿಂದ ಗಾಜಾದಲ್ಲಿ ಇಸ್ರೇಲಿ ದಾಳಿಯಲ್ಲಿ 50,000ಕ್ಕೂ ಹೆಚ್ಚು ಪ್ಯಾಲೆಸ್ಟೀನಿಯನ್ನರು, ಹೆಚ್ಚಿನವರು ಮಹಿಳೆಯರು ಮತ್ತು ಮಕ್ಕಳು, ಸಾವನ್ನಪ್ಪಿದ್ದಾರೆ. ಇಸ್ರೇಲ್ ವಿರುದ್ಧ ನರಮೇಧದ ಪ್ರಕರಣ ಅಂತರರಾಷ್ಟ್ರೀಯ ನ್ಯಾಯಾಲಯದಲ್ಲಿ ಮುಂದುವರೆದಿದ್ದು, ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ಮಾಜಿ ರಕ್ಷಣಾ ಸಚಿವ ಯೋವ್ ಗ್ಯಾಲಂಟ್ ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯ (ಐಸಿಸಿ) ಬಂಧನ ವಾರಂಟ್ ಹೊರಡಿಸಿದೆ.












