ಯುದ್ಧಾಪರಾಧಿ ನೆತನ್ಯಾಹುರನ್ನು ಬಂಧಿಸುವಂತೆ ಅಮ್ನೆಸ್ಟಿ ಇಂಟರ್ನ್ಯಾಷನಲ್ ಕರೆ

0
731

ಸನ್ಮಾರ್ಗ ವಾರ್ತೆ

ಹಂಗೇರಿಗೆ ಭೇಟಿ ನೀಡಲಿರುವ ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು ಬಂಧಿಸುವಂತೆ ಅಮ್ನೆಸ್ಟಿ ಇಂಟರ್ನ್ಯಾಷನಲ್ ಆಗ್ರಹಿಸಿದೆ. ಹಂಗೇರಿಯನ್ ಪ್ರಧಾನಿ ವಿಕ್ಟರ್ ಓರ್ಬನ್ ಅವರ ಆಹ್ವಾನದ ಮೇರೆಗೆ ನೆತನ್ಯಾಹು ಬುಧವಾರ ಯುರೋಪಿಯನ್ ಯೂನಿಯನ್ ಸದಸ್ಯ ರಾಷ್ಟ್ರಕ್ಕೆ ಭೇಟಿ ನೀಡಲಿದ್ದಾರೆ ಎಂಬ ವರದಿಗಳ ನಂತರ ಈ ಆಗ್ರಹ ಹೊರಬಂದಿದೆ.

ಗಾಜಾದಲ್ಲಿ ಇಸ್ರೇಲ್ ನಡೆಸಿದ ಕ್ರೂರ ಕೃತ್ಯಗಳಿಗೆ ಸಂಬಂಧಿಸಿದಂತೆ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯ (ಐಸಿಸಿ) ನವೆಂಬರ್‌ನಲ್ಲಿ ನೆತನ್ಯಾಹು ಅವರ ವಿರುದ್ಧ ಬಂಧನ ವಾರಂಟ್ ಜಾರಿಗೊಳಿಸಿತ್ತು. ಆದರೆ ಓರ್ಬನ್, ಈ ವಾರಂಟ್ ಜಾರಿಗೊಳಿಸುವುದಿಲ್ಲ ಎಂದು ಹೇಳಿದ್ದು ವಿವಾದ ಸೃಷ್ಟಿಸಿದೆ. ಐಸಿಸಿ ಸದಸ್ಯ ರಾಷ್ಟ್ರವಾಗಿರುವ ಹಂಗೇರಿಯು ಈ ವಾರಂಟ್ ಅನ್ನು ಕಾರ್ಯಗತಗೊಳಿಸಬೇಕಾಗಿದೆ.

ಅಮ್ನೆಸ್ಟಿ ಇಂಟರ್‌ನ್ಯಾಷನಲ್‌ನ ಜಾಗತಿಕ ಸಂಶೋಧನೆ, ವಕಾಲತ್ತು ಮತ್ತು ನೀತಿಯ ಮುಖ್ಯಸ್ಥೆ ಎರಿಕಾ ಗುವೇರಾ-ರೋಸಾಸ್, ನೆತನ್ಯಾಹು ಒಬ್ಬ ಯುದ್ಧ ಅಪರಾಧಿಯಾಗಿದ್ದು, ಹಸಿವನ್ನು ಯುದ್ಧನೀತಿಯ ಉಪಾಯವಾಗಿ ಬಳಸಿದ್ದಾರೆ, ನಾಗರಿಕರ ಮೇಲೆ ಉದ್ದೇಶಪೂರ್ವಕ ದಾಳಿ ನಡೆಸಿದ್ದಾರೆ ಮತ್ತು ಮಾನವೀಯತೆಯ ವಿರುದ್ಧದ ಅಪರಾಧಗಳನ್ನು ಎಸಗಿದ್ದಾರೆ ಎಂದು ದೂರಿದ್ದಾರೆ.

ಹಂಗೇರಿಯ ಪ್ರವಾಸ ನೆತನ್ಯಾಹುಗೆ ಬಂಧನದ ಭೀತಿ ಇಲ್ಲದಿರುವಂತೆ ಮಾಡುವ ಉದ್ದೇಶಿತ ಪ್ರಯತ್ನವೆಂದು ಅಮ್ನೆಸ್ಟಿ ಆರೋಪಿಸಿದ್ದು, ಇದು ಗಾಜಾದಲ್ಲಿ ಪ್ಯಾಲೆಸ್ಟೀನಿಯನ್ ನಾಗರಿಕರ ವಿರುದ್ಧ ಇಸ್ರೇಲ್ ನಡೆಸಿದ ದಾಳಿಗಳಿಗೆ ನ್ಯಾಯ ಒದಗಿಸುವ ಪ್ರಕ್ರಿಯೆಯನ್ನು ದುರ್ಬಲಗೊಳಿಸುವ ಸಾಧ್ಯತೆಯಿದೆ ಎಂದು ಎಚ್ಚರಿಸಿದೆ.

ಯೂರೋಪಿಯನ್ ನಾಯಕರು ಮತ್ತು ಜಾಗತಿಕ ನಾಯಕರು ತಮ್ಮ ನಿಷ್ಕ್ರಿಯತೆಯನ್ನು ತೊರೆದು, ಹಂಗೇರಿಗೆ ಭೇಟಿ ನೀಡಿದಾಗ ನೆತನ್ಯಾಹು ಅವರನ್ನು ಬಂಧಿಸುವಂತೆ ಒತ್ತಾಯಿಸಬೇಕು ಎಂಬ ಅಮ್ನೆಸ್ಟಿ ಇಂಟರ್‌ನ್ಯಾಷನಲ್‌ನ ಆಗ್ರಹವು ವಿಶ್ವದ ಗಮನ ಸೆಳೆದಿದೆ.