ಶರೀಅತ್‌ ಸಮಾವೇಶ ಅರ್ಥಪೂರ್ಣವಾಗಲಿ

0
1169

✒ ಮುಹಮ್ಮದ್‌ ಸಿದ್ದೀಕ್‌, ಜಕ್ರಿಬೆಟ್ಟು

ಹೌದು, ಮುಸ್ಲಿಮ್‌ ಸಮುದಾಯದ ಕುಟುಂಬ ಜೀವನ ಧಾರಾಳ ಸವಾಲುಗಳನ್ನು ಬೆದರಿಕೆಗಳನ್ನು ಎದುರಿಸುತ್ತಿದೆ. ಸ್ವಂತ ಪತ್ನಿಯನ್ನೇ ತಿರುಗಿ ನೋಡದವರು ಇಂದು ಅಧಿಕಾರದ ಮದದಿಂದ ಮುಸ್ಲಿಮರ ತಲಾಕ್‌ನ ವಿರುದ್ಧ ಮಸೂದೆ ಮಂಡಿಸಲು ಹೊರಟಿದ್ದಾರೆ ಮತ್ತು ಅದು ಮುಸ್ಲಿಮ್‌ ಮಹಿಳೆಯರೊಂದಿಗಿನ ಅನುಕಂಪವೆಂದೂ ಬಿಂಬಿಸಲಾಗುತ್ತದೆ. ವಾಸ್ತವದಲ್ಲಿ ಅನುಕಂಪದ ಪರದೆಯನ್ನು ಸರಿಸಿ ನೋಡಿದರೆ ಭಯಾನಕ ಚಿತ್ರಣಗಳು ಹೊತ್ತಿ ಉರಿಯುತ್ತವೆ.

ಹೌದು, ಇಸ್ಲಾಮೀ ಕೌಟುಂಬಿಕ ಕಾನೂನಿನ ವಿರುದ್ಧ ಆಕ್ಷೇಪಗಳು ಕೇಳಿ ಬರಲು ಮುಖ್ಯ ಕಾರಣ ಮುಸ್ಲಿಮ್ ಸಮಾಜದ ಕೆಡುಕುಗಳು ಮತ್ತು ಅವರ ಶರೀಅತ್‌ ವಿರೋಧಿ ಕೃತ್ಯಗಳಾಗಿವೆ. ಇಂದಿಗೂ ಸದ್ದುಸುದ್ದಿಯಾಗದೆ ಸಹಜವೆಂಬಂತೆ ಅನುಭವಿಸುವ ವರದಕ್ಷಿಣೆಯ ಕಿರಾತಕ ನೋವುಗಳಿವೆ. ಫೀಲ್ಡ್‌ಗೆ ಹೋದರೆ ಅದರ ವಿಭಿನ್ನ ಕರಾಳ ಮುಖಗಳ ಅರಿವಾಗುತ್ತವೆ. ಪ್ರಾಯ ನಲ್ವತ್ತು ದಾಟಿಯೂ ಅವಿವಾಹಿತರಾಗಿ ಮನೆಯಲ್ಲೇ ಬಾಕಿಯಾದ ಸಹೋದರಿಯರ ಉದ್ದದ ಪಟ್ಟಿ ಟಿಆರ್‌ಎಫ್‌ನವರಲ್ಲಿದೆ‌‌. ಹಾಗೆಯೇ ಹೇಗಾದರೂ ಮಗಳನ್ನು ಮದುವೆ ಮಾಡಿಸಿ ಜವಾಬ್ದಾರಿಯಿಂದ ಮುಕ್ತನಾಗಲು ಹಂಬಲಿಸುವ ತಂದೆ, ಅದಕ್ಕಾಗಿ ಮನೆ-ಮಠ ಮಾರುವುದನ್ನೂ ಬಡ್ಡಿಗೆ ಸಾಲ ಪಡೆದು ಆರ್ಥಿಕವಾಗಿ ದಿವಾಳಿಯಾಗುತ್ತಿರುವುದನ್ನೂ ಮತ್ತು ಮರ್ಯಾದೆ ಬೀದಿಪಾಲಾಗದಿರಲೆಂದು ಕೊನೆಗೆ ಆತ್ಮಹತ್ಯೆಗೆ ಶರಣಾದುದೂ ಶರೀಅತ್‌ ವಿರೋಧಿಯಲ್ಲವೇ? ಇದಕ್ಕೆ ಯಾರು ಕಾರಣರು? ವಯಸ್ಸಿಗೆ ಬಂದ ಮಗಳ ಮದುವೆಗಾಗಿ ಭಿಕ್ಷೆ ಬೇಡಲು ಮಸೀದಿಯ ಆಡಳಿತ ಕಮಿಟಿ ನೀಡಿದ ಪರವಾನಿಗೆಯನ್ನು ಕೈಯಲ್ಲಿಡಿದು ಮನೆ, ಕಛೇರಿ, ಬಝಾರ್, ಅಂಗಡಿ ಬಾಗಿಲಲ್ಲಿ ಅಂಗಲಾಚುವ ದಯನೀಯ ಅವಸ್ಥೆ ಇಸ್ಲಾಮೀ ಶರೀಅತ್‌‌ಗೆ ಸಹಮತವೇ? ವಾರೀಸು ಸೊತ್ತು ವಿತರಣೆಯಲ್ಲೂ ಮಹಿಳೆಯನ್ನು ಕಡೆಗಣಿಸುವುದು ಶರೀಅತ್‌ ವಿರೋಧಿ ಕೃತ್ಯವಲ್ಲವೇ? ನಮ್ಮ ಸಹೋದರಿಯರ ಬಾಳನ್ನು ಕೆಡಿಸಿದ ಮತ್ತು ಅವರ ಹೆತ್ತವರ ಇಝ್ಝತ್ತನ್ನು ಹರಾಜಾಗಿಸುವ ವರದಕ್ಷಿಣೆ ದಾಹದ ಶಪಿಸಲ್ಪಟ್ಟ ಷಂಡರ ಹಾಗೂ ಅದನ್ನು ಸಮರ್ಥಿಸುವ ಪುರೋಹಿತರುಗಳ ಕುರಿತು ಶರೀಅತ್‌ ಸಮಾವೇಶದ ಠರಾವು ಏನು?

ನಿಜವಾಗಿ, ಇಸ್ಲಾಮಿನ ದೃಷ್ಟಿಯಲ್ಲಿ ಮದುವೆ ಎಂಬುದು ಇಬಾದತ್ ಆಗಿದೆ ಮತ್ತು ಪ್ರವಾದಿ ಚರ್ಯೆಯಾಗಿದೆ. ಅದು ಸರಳವಾಗಿರಬೇಕೆಂದೂ ಅದರಿಂದ ಯಾರಿಗೂ ತೊಂದರೆಯಾಗಬಾರದೆಂದೂ ಮತ್ತು ಅಲ್ಲಿ ಮಹರ್‌ನ ಚರ್ಚೆಯಾಗಬೇಕೇ ಹೊರತು ವರದಕ್ಷಿಣೆಯದ್ದಲ್ಲ. ಕಠಿಣ ದಾರಿದ್ರ್ಯದ ಸಂದರ್ಭದಲ್ಲೂ ಸ್ವಹಾಬತ್ತ್‌ಗಳೆಲ್ಲರೂ ಮಹರ್‌ ನೀಡಿಯೇ ವಿವಾಹವಾದರು. ಏಕೆಂದರೆ, ಅವರ ಬದುಕು ಕುರ್‌ಆನ್‌ ಮತ್ತು ಪ್ರವಾದಿಚರ್ಯೆಗನುಗುಣವಾಗಿತ್ತು. ಆದ್ದರಿಂದ ವರದಕ್ಷಿಣೆಯ ಬೇಡಿಕೆಯನ್ನಿಟ್ಟು ಹೆಣ್ಣುಹೆತ್ತವರನ್ನು ಅನಿವಾರ್ಯತೆಗೆ ಸಿಲುಕಿಸುವ ವರನ ಕಡೆಯವರ ನಡೆ ಅತ್ಯಾಚಾರದ ವ್ಯಾಪ್ತಿಗೆ ಬರುವುದೋ ಅಥವಾ ಬೇರೆ ಯಾವುದೋ ಕ್ರಿಮಿನಲ್‌ ಮೊಕದ್ದಮೆಗೆ ಬರುವುದೋ ಎಂದು ಶರೀಅತ್‌ ಸಂರಕ್ಷಣಾ ಸಮಾವೇಶ ಸ್ಪಷ್ಟಪಡಿಸಬೇಕು.

ವರದಕ್ಷಿಣೆ ಸಮುದಾಯವನ್ನು ಮಾರಕವಾಗಿ ಕೊರೆದು ನೆಲಕ್ಕಪ್ಪಳಿಸುತ್ತಿರುವಾಗ, ಅದರ ವಿರುದ್ಧ ಠರಾವು ಅಂಗೀಕರಿಸದೆ ಬಡ ಹೆಣ್ಣುಮಕ್ಕಳ ಮದುವೆಗೆ ಸಹಕರಿಸಿದರೆ ಪುಣ್ಯವಿದೆಯೆಂಬ ಸುಲಭದ ಹಾದಿ ಕಂಡುಕೊಂಡಿರುವುದು ಪಲಾಯನ ವಾದವಲ್ಲದೆ ಮತ್ತೇನೂ ಅಲ್ಲ! ಅದು ಸಮಸ್ಯೆಯನ್ನು ಜೀವಂತವಾಗಿಯೇ ಉಳಿಸುತ್ತದೆ.

ನಿಜವಾಗಿ ಇಂದು ಹಣ ಮತ್ತು ಸೌಂದರ್ಯ ಮಾತ್ರ ಪರಿಗಣಿಸಿ ಸಂಬಂಧಗಳು ಕುದುರುತ್ತವೆ. ಅಲ್ಲಿ ದೇವಭಯ ಮತ್ತು ಮೌಲ್ಯಗಳನ್ನು ಕಡೆಗಣಿಸಲಾಗುತ್ತದೆ. ಪರಿಣಾಮವಾಗಿ ಬಹಳ ಬೇಗನೆ ಒಂದುಗೂಡುವ ಸಂಬಂಧಗಳು ಅಷ್ಟೇ ವೇಗದಲ್ಲಿ ಮುರಿದು ಬೀಳುತ್ತವೆ. ಮದುವೆ ಹೆಸರಲ್ಲಿ ಶರೀಅತ್‌ಗೆ ವಿರುದ್ಧವಾದ ವರದಕ್ಷಿಣೆ ಹಾಗೂ ಮದುವೆಯ ಹಿಂದುಮುಂದು ಹತ್ತುಹಲವು ಅನಿಸ್ಲಾಮಿಕ ಅನಾಚಾರ-ದುಂದುವೆಚ್ಚಗಳು ಸಮುದಾಯಕ್ಕೆ ಶಾಪವಾಗಿದೆ.

ಕಲ್ಯಾಣ ಮಂಟಪಗಳು ಜನ ಮರುಳೋ ಜಾತ್ರೆ ಮರುಳೋ ಎಂಬಂತಾಗಿ, ನಿತ್ಯ ಪ್ರಯಾಣಿಕರಿಗೆ ರಸ್ತೆತಡೆ-ಅಡಚಣೆಗಳುಂಟಾಗಿ ನಮ್ಮ ಮದುವೆಗಳು ಶಪಿಸಲ್ಪಡುತ್ತಿವೆ. ಈ ವಿಷಯದಲ್ಲಿ ಶ್ರೀಮಂತರು ಬಡವರಿಗೆ, ಉಳ್ಳವರು ಇಲ್ಲದವರಿಗೆ, ನಾಯಕರು ಜನಸಾಮಾನ್ಯರಿಗೆ ಮಾದರಿಗಳಾದರೆ ಎಲ್ಲವೂ ಸರಿಹೊಂದಬಹುದು. ನಾವು ಶರೀಅತ್‌ ವಿರುದ್ಧ ಮೂಗು ತೂರಿಸುವವರನ್ನು ಮಾತ್ರ ಆಕ್ಷೇಪಿಸಿ ಬಾಧ್ಯತೆಗಳಿಂದ ದೂರ ಸರಿಯವಂತಾಗ ಬಾರದು.

ವರದಕ್ಷಿಣೆ ಮತ್ತು ಮದುವೆಯ ಹಿಂದುಮುಂದು ನಡೆಯುವ ಅನಾಚಾರ-ದುರ್ವ್ಯಯಗಳ ವಿರುದ್ಧ ಸಮಸ್ತದ ಅಧೀನದಲ್ಲಿರುವ ಮಸೀದಿಗಳ ನಿಲುವು ಏನು ಎಂಬುದನ್ನು ಸ್ಪಷ್ಟ ಪಡಿಸಬೇಕು. ಸಮಸ್ತದ ಅಧೀನದಲ್ಲಿ ಧಾರಾಳ ಮಸೀದಿ-ಮದ್ರಸಗಳಿವೆ ಮತ್ತು ಸಮಸ್ತಕ್ಕೆ ದೊಡ್ಡ ಜನಬೆಂಬಲವೂ ಇದೆ. ಆದ್ದರಿಂದ ಅಂತಹ ಮದುವೆಗಳಿಗೆ ಖತೀಬ್‌-ಉಸ್ತಾದರುಗಳನ್ನು ಮತ್ತು ದಾಖಲೆ ಪುಸ್ತಕವನ್ನು ಕಳಿಸಿ ಕೊಡುವುದರ ವಿರುದ್ಧ ಠರಾವು ಘೋಷಿಸಬೇಕು. ಹೌದು, ನಿಖಾಹ್‌ನೊಂದಿಗೆ ದಂಪತಿಗಳೊಳಗೆ ಪ್ರಬಲವಾದ ಕರಾರು ಏರ್ಪಟ್ಟಿದೆಯೆಂದು ಕುರ್‌ಆನ್‌ ಜೋಡಿಗಳ ಆತ್ಮೀಯ ಸಂಬಂಧಕ್ಕೆ ಒತ್ತು ನೀಡಿದೆ ಮತ್ತು ಇಸ್ಲಾಮ್‌ ವಿಚ್ಛೇದನವನ್ನು ನಿರುತ್ಸಾಹ ಪಡಿಸಿದೆ. ಅತ್ಯಂತ ಅನಿವಾರ್ಯವಾಗಿ ವಿಚ್ಛೇದನದ ಅಗತ್ಯ ಬಂದರೂ, ಏಕಾಏಕಿ ತಲಾಕ್‌(ವಿಚ್ಛೇದನ) ನೀಡುವಂತಿಲ್ಲ. ವಿಚ್ಛೇದನಕ್ಕೆ ಮೊದಲು ಪಾಲಿಸ ಬೇಕಾದ ಕೆಲವು ನಿಯಮಗಳಿವೆ. ಉಲೆಮಾಗಳು ನಿಖಾಹ್‌ ನಡೆಸಿಕೊಟ್ಟ ಮಾತ್ರಕ್ಕೆ ಬಾಧ್ಯತೆ ಮುಗಿಯದು. ದಾಂಪತ್ಯ ತಕರಾರುಗಳು, ವಾರೀಸು ಸೊತ್ತು ವಿತರಣೆಯ ತಗಾದೆಗಳು ಅಥವಾ ಇನ್ಯಾವುದೇ ಸಮಸ್ಯೆಗಳು ಉಲ್ಬಣಿಸಿದರೆ, ಅದನ್ನು ಯಾರೋ ಕೆಲವು ಗೂಂಡಾಗಳು ಇತ್ಯರ್ಥ ಪಡಿಸುವಂತಾಗ ಬಾರದು.

ಪ್ರಾಮಾಣಿಕ ಮಧ್ಯಸ್ಥಿಕೆದಾರರಾಗಿ ಸಂಧಾನ ಮತ್ತು ಮಾತುಕತೆಯ ಮೂಲಕ ಉಲೆಮಾಗಳು ಸರಿಪಡಿಸಿ ಕೊಡಬೇಕು. ಅದಕ್ಕಾಗಿ ಕನಿಷ್ಠ ತಾಲೂಕು ಮಟ್ಟದಲ್ಲಾದರೂ ಮಸೀದಿಯ ಅಧೀನದಲ್ಲಿ ಒಂದೆರೆಡು ಸಮರ್ಥ ಕೌನ್ಸಿಲಿಂಗ್ ಸೆಂಟರ್‌ಗಳಿರ ಬೇಕು. ಆ ಮೂಲಕ ಸಂಬಂಧಗಳು ಕಲುಷಿತಗೊಂಡು, ಆರೋಪ-ಪ್ರತ್ಯಾರೋಪಗಳೊಂದಿಗೆ, ವರ್ಷಗಟ್ಟಲೆ ಕೋರ್ಟು-ಕಛೇರಿ ಅಲೆದಾಡಿ, ಕೌಟುಂಬಿಕ ರಹಸ್ಯಗಳು ಹರಾಜಾಗುವುದನ್ನು ತಡೆಗಟ್ಟಬಹುದು. ಜತೆಗೆ ಒಂದು ವಿಷಯ ತಿಳಿದಿರಬೇಕು.

ಶರೀಅತ್‌ ಎಂಬುದು ನಿಖಾಹ್‌-ತಲಾಕ್‌-ಖುಲಾ ಮುಂತಾದ ವೈವಾಹಿಕ ರಂಗಕ್ಕೆ ಮಾತ್ರ ಸಂಬಂಧಪಟ್ಟ ವಿಧಿಯಲ್ಲ. ಶರೀಅತ್‌‌ನ ಬೆಳಕು ಸತ್ಯವಿಶ್ವಾಸಿಯ ಸಮಗ್ರ ಬದುಕಿನ ಮೇಲೆ ಹರಡಿ ಉನ್ನತ ಚಾರಿತ್ರ್ಯವಂತರಾಗಿ ಬೆಳೆಯಬೇಕು. ಯಾರು ಶರೀಅತ್‌ನ ವಿಧಿಗಳನ್ನು ತಿರಸ್ಕರಿಸುವನೋ ಅವನಿಗೆ ನರಕಾಗ್ನಿಯಲ್ಲಿ ಅಪಮಾನಕರ ಶಿಕ್ಷೆ ಕಾದಿದೆಯೆಂಬ ಮುನ್ನೆಚ್ಚರಿಕೆ ಪವಿತ್ರ ಕುರ್‌ಆನಿನದ್ದು! ಈ ನಿಟ್ಟಿನಲ್ಲಿ ಡಿಸೆಂಬರ್ 9ರಂದು ಮಂಗಳೂರಿನ ನೆಹರೂ ಮೈದಾನದಲ್ಲಿ ನಡೆಯಲಿರುವ  ಶರೀಅತ್‌ ಸಮಾವೇಶ ಅರ್ಥಪೂರ್ಣವಾಗಲಿ, ಕುಟುಂಬಗಳನ್ನು ಬೆಸೆಯುವಲ್ಲಿ ಮಹತ್ತರ ಪಾತ್ರ ವಹಿಸಲೆಂದು ಶುಭ ಹಾರೈಸೋಣ! ಯಾವ ಕಾರಣಕ್ಕೂ ಶರೀಅತ್‌‌ನೊಳಗಿನ ಹಸ್ತಕ್ಷೇಪವನ್ನು ಸಹಿಸುವುದಿಲ್ಲವೆಂದು ಸಂವಿಧಾನ ವಿರೋಧಿಗಳನ್ನು ಒಗ್ಗಟ್ಟಿನಿಂದ ಎಚ್ಚರಿಸೋಣ! ನೀವೇನಂತೀರಿ?