ಈ ನಾಡಿನ ಸರ್ವ ಧರ್ಮೀಯರೊಂದಿಗೆ ನನ್ನ ಭಿನ್ನಹ

0
1362

✍ಮುಹಮ್ಮದ್‌ ಸಿದ್ದೀಕ್‌, ಜಕ್ರಿಬೆಟ್ಟು

ನಮ್ಮ ಸಮಾಜದಲ್ಲಿ ಅತ್ಯಧಿಕ ಗಲಭೆ-ಹಿಂಸೆ, ಕೊಲೆಪಾತಕಗಳು ನಡೆಯುತ್ತಿರುವುದು ಧರ್ಮ ಮತ್ತು ದೇವರ ಹೆಸರಲ್ಲಾಗಿದೆ. ಓಟಿಗಾಗಿ ಜನರ ಭಾವನೆಗಳನ್ನು ಕೆರಳಿಸಿ ಮೆಟ್ಟಿಲುಗಳನ್ನಾಗಿಸಿದರೆ,  ಗದ್ದುಗೆಯನ್ನೇರುವುದು ಬಹು ಸುಲಭವೆಂಬುವುದು ಇಲ್ಲಿನ ಶಕುನಿ ರಾಜಕೀಯದ ಲೆಕ್ಕಾಚಾರ. ಆದ್ದರಿಂದಲೇ ಅವರು ಮನುಷ್ಯರ ಮಧ್ಯೆ ವಿದ್ವೇಷ ಮತ್ತು ವಿಭಜನೆಯ ವಿಷ ಬೀಜವನ್ನು ಬಿತ್ತುತ್ತಲೇ, ರಕ್ತದೊಂದಿಗೆ ಚೆಲ್ಲಾಡುತ್ತಾರೆ. ಸ್ವಂತ ಮನೆಯ ಜವಾಬ್ದಾರಿಕೆಯನ್ನೂ ಕೈಗೆತ್ತಿ ಕೊಳ್ಳದ, ಕೆಲವು ಚಿಗುರು ಮೀಸೆಯ ಯುವಕರನ್ನು ಗೂಂಡಾಗಿರಿಗೆ ಪ್ರಚೋದಿಸುತ್ತಾ, ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಾರೆ. ವಿಶೇಷವಾಗಿ

ಮುಸ್ಲಿಮರನ್ನು ಉದ್ರಿಕ್ತಗೊಳಿಸಿ ರಾಜಕೀಯ ಲಾಭ ಪಡೆಯಲು ನಿತ್ಯ ಒಂದಲ್ಲೊಂದು ಪ್ರಚೋದನಕಾರಿ ಹೇಳಿಕೆಗಳು, ಘೋಷಣೆಗಳು ಹರಡುತ್ತಲೇ ಇವೆ. ನಿನ್ನೆಮೊನ್ನೆ ಅಲ್ಲಾಹನಿಗೇ ಚಟ್ಟ ಕಟ್ಟಲು ಹೊರಟ ಉದ್ರಿಕ್ತ ಘೋಷಣೆಯ ವೀಡಿಯೋ ಒಂದು ವೈರಲ್ ಆಯಿತು. ಆದರೂ ಮುಸ್ಲಿಮರು ಸಂಯಮ ಪಾಲಿಸಿದರು. ಆದರೆ ಹಾಗೆ ಘೋಷಣೆ ಕೂಗಿದ ಸಹೋದರರೊಂದಿಗೆ ಒಂದು ವಿಷಯ ನೆನಪಿಸುತ್ತೇನೆ. ಅದೇನೆಂದರೆ, ಅಲ್ಲಾಹ್‌ ಕೇವಲ ಮುಸ್ಲಿಮರ ದೇವರಲ್ಲ. ಪವಿತ್ರ ಕುರ್‌ಆನಿನಲ್ಲಿ,

ಮನುಷ್ಯರೆಲ್ಲರೂ ಅಲ್ಲಾಹನ ಸೃಷ್ಟಿಗಳೆಂದೂ ಏಕೋದರ ಸಹೋದರರೆಂದೂ ಮಾನವ ಸಮಾನತೆಯನ್ನು ಒತ್ತುಕೊಟ್ಟು ಹೇಳಲಾಗಿದೆ. ಅದರ ಕೊನೆಯ ಅಧ್ಯಾಯದಲ್ಲಿ ಅಲ್ಲಾಹನು ಮನುಷ್ಯರ ಒಡೆಯ, ಮನುಷ್ಯರ ಅಧಿಪತಿ ಮತ್ತು ಮನುಷ್ಯರ ಆರಾಧ್ಯನೆಂದು ಪರಿಚಯಿಸಲಾಗಿದೆ. ಪವಿತ್ರ ಕುರ್‌ಆನಿನ ಒಂದೇ ಒಂದು ಸೂಕ್ತದಲ್ಲಾಗಲೀ ಪ್ರವಾದಿ ಮುಹಮ್ಮದ್‌(ಸ)ರ ಒಂದೇ ಒಂದು ವಚನದಲ್ಲಾಗಲೀ ಅಲ್ಲಾಹನನ್ನು ಮುಸ್ಲಿಮರ ದೇವರು ಎಂದು ಎಲ್ಲೂ ಪ್ರಸ್ತಾಪಿಸಿಲ್ಲ. ಪವಿತ್ರ ಕುರ್‌ಆನಿನಲ್ಲಿ ಆ ಏಕದೇವನ ತೊಂಬತ್ತೊಂಬತ್ತು ಗುಣನಾಮಗಳನ್ನು ಪ್ರಸ್ತಾಪಿಸಲಾಗಿದೆ. ಆ ಪೈಕಿ ಯಾವ ಗುಣವೂ ಅಲ್ಲಾಹನು ಯಾವುದೇ ಒಂದು ಜಾತಿಯ, ಜನಾಂಗದ, ಭಾಷೆಯ ಅಥವಾ ವರ್ಗದ ದೇವನೆಂದು ಸೂಚಿಸುವುದಿಲ್ಲ. ಬದಲಾಗಿ

ಆತನನ್ನು ಭೂಮಿ-ಆಕಾಶಗಳ ಮತ್ತು ಅವುಗಳ ಮಧ್ಯೆ ಇರುವ ಎಲ್ಲ ವಸ್ತುಗಳ ಸೃಷ್ಟಿಕರ್ತ, ಪ್ರಭು ಮತ್ತು ಪರಿಪಾಲಕನೆಂದು ಘಂಟಾಘೋಷವಾಗಿ ಸಾರುತ್ತದೆ. ಈ ಗೋಚರ ಪ್ರಪಂಚವನ್ನು ಮತ್ತು ಅದರಾಚೆಗಿರುವ ಸರ್ವವನ್ನೂ ಶೂನ್ಯದಿಂದ ಸೃಷ್ಟಿಸಿ, ನೆಲೆನಿಲ್ಲಿಸಿ, ಪರಿಪಾಲಿಸಿ, ಕ್ರಮಾನುಗತವಾಗಿ ಅಭಿವೃದ್ಧಿ ಪಡಿಸುತ್ತಿರುವ ಸರ್ವಶಕ್ತನೂ ಸರ್ವಜ್ಞನೂ ಸೃಷ್ಟಿಕರ್ತನೂ ಆದ ಪ್ರಪಂಚ ನಿರ್ಮಾತೃನಾಗಿದ್ದಾನೆ

ಅಲ್ಲಾಹು. ಓ ದೇವರೇ, ಓ ಗಾಡ್‌, ಓ ಪರಮೇಶ್ವರಾ ಎಂದು ಮನುಷ್ಯನು ಸಾಮಾನ್ಯವಾಗಿ ಕರೆಯುವಾಗ, ಆ ವ್ಯಕ್ತಿ ಯಾವ ಜಾತಿಯಲ್ಲಿ ಸೇರಿದವನಾಗಿದ್ದರೂ ಮತ್ತು ಯಾವ ಕುಲದಲ್ಲಿ ಹುಟ್ಟಿದವನಾಗಿದ್ದರೂ ಅವನು ಉದ್ದೇಶಿಸುವುದು ತನ್ನ ಸೃಷ್ಟಿಕರ್ತನಾದ, ಪ್ರಪಂಚ ನಿರ್ಮಾತೃನಾದ ಅಲ್ಲಾಹನನ್ನಾಗಿದೆ. “ನಿರ್ಗತ ಆಕಾರಾತ್ಸ ನಿರಾಕಾರ=ಯಾರಿಗೆ ಆಕಾರವಿಲ್ಲವೋ ಅವನು” ಎಂದು ಉಪನಿಷತ್ತು ದೇವನನ್ನು ನಿರಾಕಾರಕನೆಂದು ಪರಿಚಯಿಸಿದೆ. ಸರ್ವ ಮನುಷ್ಯರ ನೈಜ ಆರಾಧ್ಯನು ಅಲ್ಲಾಹು ಮತ್ತು ಆತನನ್ನು ಮಾತ್ರ ಆರಾಧಿಸ ಬೇಕೆಂದು ಪವಿತ್ರ ಕುರ್‌ಆನ್‌ ಆಧಾರ ಸಹಿತ ಒತ್ತುಕೊಟ್ಟು ಹೇಳಿದ್ದರೂ, ಅದೇ ಕುರ್‌ಆನ್‌‌ ಬಹುದೇವಾರಾಧಕರ ಆರಾಧ್ಯವನ್ನು ಮೂದಲಿಸ ಬಾರದೆಂದೂ ನಿಂದಿಸ ಬಾರದೆಂದೂ ತಾಕೀತು ನೀಡಿದೆ. ಒಟ್ಟಿನಲ್ಲಿ ಧರ್ಮ ಅಂದರೆ ಸತ್ಯ, ನ್ಯಾಯ, ನೀತಿ ಮತ್ತು ಮಾನವೀಯ ಮೌಲ್ಯಗಳನ್ನು ಉಳಿಸಿ ಬೆಳೆಸುವ ಆಧ್ಯಾತ್ಮಿಕ ಬದುಕದು. ಆದ್ದರಿಂದ ಆ ದೇವನಿಗೆ ಚಟ್ಟಕಟ್ಟಲು ಹೊರಟವರ ದುರವಸ್ಥೆಗೆ ಮರುಕ ಪಡಬೇಕಾಗುತ್ತದೆ.

ಆ ದೇವನ ವಿರುದ್ಧವೇ ಯುದ್ಧ ಸಾರುವುದು ಅಹಂಕಾರದ ಪರಮಾವಧಿಯಾಗಿದೆ. ಆ ದೇವನ ಶಾಪ-ಕ್ರೋಧ ಎರಗುವ ಮೊದಲು ಆತ್ಮಾರ್ಥವಾಗಿ ಪಶ್ಚಾತ್ತಾಪ ಪಡುವುದು ಒಳಿತು. ದೇವನ ಕ್ರೋಧವನ್ನು ಹಿಡಿದು ನಿಲ್ಲಿಸಲು ರಾಜಕೀಯ ಕುಲಗಳಿಂದಲೂ ಸಾಧ್ಯವಿಲ್ಲ. ಇತಿಹಾಸವನ್ನು ಅಧ್ಯಯನ ನಡೆಸಿ, ಸಂಪತ್ತು ಮತ್ತು ಅಧಿಕಾರದ ಮದದಿಂದ ದೇವನಿಗೆ ಚಟ್ಟ ಕಟ್ಟಲು ಹೊರಟವರೆಲ್ಲರೂ ಸ್ವಯಂ ಚಟ್ಟ ಹತ್ತಿದರು. ಈಜಿಪ್ಟ್‌ನ ಮ್ಯೂಸಿಯಮ್‌ನಲ್ಲಿರುವ ಫಿರ್‌ಔನ್‌ನ ಬದುಕು ಮತ್ತು ಅಂತ್ಯವನ್ನೊಮ್ಮೆ ತೆರೆದು ಓದಿ…

ಕಳೆದ ನಾಲ್ಕೂವರೆ ವರ್ಷಗಳಿಂದ ರಾಮ ಮಂದಿರದ ಬಗ್ಗೆ ಮೌನವಾಗಿದ್ದವರು, ಇದೀಗ ಚುನಾವಣೆ ಸಮೀಪಿಸಿದಾಗ ಒಮ್ಮಿಂದೊಮ್ಮಲೆ ರಾಮ ಮಂದಿರದ ಜಪ ಮಾಡಲು ಹೊರಟಿದುದರ ಸೋಗಲಾಡಿತನವನ್ನು ಅರ್ಥಮಾಡಿ ಕೊಳ್ಳಲು ಉನ್ನತ ಪದವಿ ಪಡೆಯಬೇಕಾ? ಗೋವಿನ ಬಗ್ಗೆ ಮೊಸಳೆ ಕಣ್ಣೀರು ಸುರಿಸಿದವರೇ ದಾಖಲೆಯ ಗೋಮಾಂಸವನ್ನು ರಫ್ತು ಮಾಡಿದ್ದಾರೆ. ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಅಭಿವೃದ್ಧಿ-ಭರವಸೆಗಳ ಕುರಿತು ಏನೂ ಚರ್ಚೆಗಳಾಗುತ್ತಿಲ್ಲ ಮತ್ತು ಸತ್ಯವನ್ನು ಬಚ್ಚಿಟ್ಟು ಮುಸ್ಲಿಮರು ಮಂದಿರ ನಿರ್ಮಾಣದ ವಿರೋಧಿಗಳೆಂದು ಚಿತ್ರೀಕರಿಸಲಾಗುತ್ತದೆ. ಆದ್ದರಿಂದ ಈ ನಾಡಿನ ಸರ್ವ ಧರ್ಮೀಯರೊಂದಿಗೆ ನನ್ನ ಭಿನ್ನಹ ಇಷ್ಟೇ:

ಪರಮತ ದ್ವೇಷವನ್ನು ಬಗಲಲ್ಲಿಟ್ಟು ಕೊಂಡು ದೇಶದ  ಶಾಂತಿ-ಸಾಮರಸ್ಯಕ್ಕೆ ಕಿಚ್ಚು ಹಚ್ಚದಿರಿ. ಇಲ್ಲಿ ಧರ್ಮದ ಹೆಸರಲ್ಲಿ ರಾಜಕೀಯ ಚದುರಂಗದಾಟ ನಡೆಯುತ್ತಿದೆಯೇ ಹೊರತು ಧರ್ಮದ ಸಂರಕ್ಷಣೆ ಖಂಡಿತ ಅಲ್ಲ. ನಾವಂತೂ ಅದರ ಬಲಿಪಶುಗಳಾಗ ಬಾರದು. ನೀವೇನಂತೀರಿ?