ರಾಜ್ಯವೇ ಉತ್ಸಾಹದಿಂದ ಸ್ವೀಕರಿಸಬೇಕಾದವರು ಈ ಇಸ್ಮಾಯಿಲ್ ಸಾಹೇಬರು

0
1244

✒ ಇದ್ರಿಸ್ ಹೂಡೆ

ಶಿಕ್ಷಣ ಕ್ಷೇತ್ರದ ಸಾಧನೆಗಾಗಿ ತೋನ್ಸೆ ಹೂಡೆಯ ಸಾಲಿಹಾತ್ ಸಮೂಹ ಶಿಕ್ಷಣ ಸಂಸ್ಥೆಗಳ ವಿಶ್ವಸ್ಥ ಮಂಡಳಿ ಮಹಮ್ಮದೀಯ ಎಜುಕೇಷನಲ್ ಟ್ರಸ್ಟ್‌ನ ಅಧ್ಯಕ್ಷ ಎಂ. ಇಸ್ಮಾಯಿಲ್ ಸಾಹೇಬರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸಂದಿರುವುದು ನಿಮಗೂ ಗೊತ್ತಿರಬಹುದು. ಆದರೆ ಅವರ ಬಗ್ಗೆ ನಿಮಗೆ ಎಷ್ಟು ಗೊತ್ತಿದೆ?

ಅರೆಕಾಲಿಕ ಧಾರ್ಮಿಕ ಶಿಕ್ಷಣ ನೀಡುವ ಉದ್ದೇಶದಿಂದ 1971ರಲ್ಲಿ ಪಡುತೋನ್ಸೆ ಗ್ರಾಮದಲ್ಲಿ ಆರಂಭಗೊಂಡ ಶಿಕ್ಷಣ ಸಂಸ್ಥೆಯಲ್ಲಿ ಪದಾಧಿಕಾರಿಯಾಗಿ ಎಮ್ ಇಸ್ಮಾಯಿಲ್’ರವರ ಆಗಮನದ ನಂತರ ಆಸುಪಾಸಿನ ಪ್ರದೇಶದ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದೆಂಬ ಉದ್ದೇಶದಿಂದ ಇಸ್ಮಾಯಿಲ್ ಸಾಹೇಬರು ಶಿಕ್ಷಣ ಪ್ರೇಮಿಗಳೊಂದಿಗೆ ಸೇರಿ ಸಾಲಿಹಾತ್ ಸಮೂಹ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದರು.

ಈ ಸಂಸ್ಥೆಯು ಮುಂದುವರೆದು 1984ರಲ್ಲಿ ನರ್ಸರಿ, 1994ರಲ್ಲಿ ಹೆಣ್ಣು ಮಕ್ಕಳಿಗೆ ಅರೇಬಿಕ್ ಕಾಲೇಜು, 1996ರಲ್ಲಿ ಬಾಲಕಿಯರ ಕನ್ನಡ ಮಾಧ್ಯಮ ಪ್ರೌಢ ಶಾಲೆಯೊಂದಿಗೆ ವಿಸ್ತರಣೆಗೊಳ್ಳುತ್ತಾ ಸಾಗಿತು. ಆ ಸಂದರ್ಭದಲ್ಲಿ ಮನೆಯಿಂದ ದೂರದ ಪ್ರದೇಶಕ್ಕೆ ಹೋಗಿ ವಿದ್ಯಾಭ್ಯಾಸ ಮಾಡಲು ಇಚ್ಚಿಸದೆ ಏಳನೇ ತರಗತಿಗೆ ಶಿಕ್ಷಣ ಮೊಟಕುಗೊಳಿಸಿ ಮನೆ ಸೇರಿದ್ದ ಒಂದು ದೊಡ್ಡ ಸಂಖ್ಯೆಯ ಹೆಣ್ಣುಮಕ್ಕಳಿಗೆ ತಮ್ಮ ಶಿಕ್ಷಣ ಮುಂದುವರಿಸಿ ಒಂದು ಹಂತಕ್ಕೆ ತಲುಪಲು ಈ ಸಂಸ್ಥೆ ಮೈಲುಗಲ್ಲಾಯಿತು. ಅದರಲ್ಲೂ ಕೆಲವರು ಮೂರ್ನಾಲ್ಕು ವರ್ಷಗಳಿಂದ ಶಿಕ್ಷಣ ನಿಲ್ಲಿಸಿದ್ದರು. ಆ ವಿದ್ಯಾರ್ಥಿಗಳ ಹೆತ್ತವರನ್ನು ಸಮಜಾಯಿಸಿ ಅವರ ಶಿಕ್ಷಣ ಮುಂದುವರಿಯುವಂತೆ ನೋಡಿಕೊಳ್ಳಲಾಯಿತು. 1997ರಲ್ಲಿ ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯನ್ನು ಪ್ರಾರಂಭಿಸಲಾಯಿತು. 2009ರಲ್ಲಿ ಬಾಲಕಿಯರ ಪದವಿ ಪೂರ್ವ ಕಾಲೇಜನ್ನು, 2016ರಲ್ಲಿ ಮಹಿಳಾ ಪದವಿ ಕಾಲೇಜನ್ನು ಪ್ರಾರಂಭಿಸಲಾಯಿತು.

ಪ್ರಸ್ತುತ ಈ ಶಿಕ್ಷಣ ಸಂಸ್ಥೆಗಳಲ್ಲಿ ಸುಮಾರು ಒಂದು ಸಾವಿರಕ್ಕಿಂತಲೂ ಅಧಿಕ ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣವನ್ನು ಪಡೆಯುತಿದ್ದಾರೆ. ಶಿಕ್ಷಣ ಸಂಸ್ಥೆಗಳು ಶೇ.100 ಫಲಿತಾಂಶವನ್ನು ಪ್ರತಿವರ್ಷ ದಾಖಲಿಸುತ್ತಿರುವುದು ಇವರ ಸಾಧನೆಯ ಕಿರೀಟಕ್ಕೆ ಇಟ್ಟ ಗರಿಯಾಗಿದೆ. ಉದ್ಯಮಿಯಾಗಿರುವ ಇಸ್ಮಾಯಿಲ್ ಸಾಹೇಬರು ತನ್ನ ಆದಾಯದ ಒಂದು ದೊಡ್ಡ ಮೊತ್ತವನ್ನು  ಶಿಕ್ಷಣದ ಪ್ರಸರಣಕ್ಕೆ , ಈ ಸಂಸ್ಥೆಗಳ ಸಬಲಿಕರಣಕ್ಕೆ ಮತ್ತು ಇತರ ಸಮಾಜಸೇವಾ ಕಾರ್ಯಗಳಿಗೆ ವಿಯೋಗಿಸುತ್ತಿದ್ದಾರೆ.ತಾನು ಕೈಗೆತ್ತಿಕೊಂಡ ಎಲ್ಲಾ ಚಟುವಟಿಕೆಗಳು ಅತ್ಯುತ್ತಮವಾಗಿರಬೇಕೆಂದು ಬಯಸುವ ಅವರ ಉದ್ಯಮದಲ್ಲೂ ರಾಷ್ಟ್ರೀಯ ಮಟ್ಟದ ಪುರಸ್ಕಾರಗಳನ್ನು ಪಡೆದಿದ್ದಾರೆ.

ಉದ್ಯಮ ಕ್ಷೇತ್ರದಲ್ಲಿ ಸಾಧನೆಗೆ ರಾಷ್ಟ್ರೀಯ ಪ್ರಶಸ್ತಿ. ರಫ್ತಿಗೆ ಸಾಂಪ್ರದಾಯಿಕವಲ್ಲದ ಹೊಸ ಮಾರುಕಟ್ಟೆ ಆಯ್ಕೆಗಾಗಿ. [Marine Product Export Development Authority (MPEDA) Award for New Market (2009-10)]