ಪ್ಲಾಸ್ಮಾ ನೀಡಲು ಮುಂದೆ ಬಂದ 350 ತಬ್ಲೀಗಿ ಸದಸ್ಯರು: ಪ್ಲಾಸ್ಮಾ ನೀಡುವಂತೆ ಮುಖಂಡ ಮುಹಮ್ಮದ್ ಸಾದ್ ರಿಂದ ಮನವಿ

0
786

ಸನ್ಮಾರ್ಗ ವಾರ್ತೆ

ನವದೆಹಲಿ ಏಪ್ರಿಲ್ 28- ಕೊರೋನಾದಿಂದ ಗುಣಮುಖರಾದ 350 ಮಂದಿ ತಬ್ಲಿಗಿ ಜಮಾಅತ್ ನ ಸದಸ್ಯರು ಪ್ಲಾಸ್ಮಾವನ್ನು ನೀಡುವುದಕ್ಕೆ ಮುಂದೆ ಬಂದಿದ್ದಾರೆ.

ಕಳೆದ ತಿಂಗಳು ದೆಹಲಿಯ ನಿಜಾಮುದ್ದೀನ್ ಮರ್ಕಜ್ ಸಭೆಯಲ್ಲಿ ಭಾಗಿಗಳಾಗಿದ್ದ ಇವರು ಕೊರೋನಾ ಸೋಂಕಿತರಾಗಿ ಇದೀಗ ಗುಣಮುಖರಾಗಿದ್ದು ಕೊರೋನಾ ಚಿಕಿತ್ಸೆಯಲ್ಲಿ ಪರಿಣಾಮಕಾರಿ ಪಾತ್ರ ನಿರ್ವಹಿಸುವ ಪ್ಲಾಸ್ಮಾವನ್ನು ನೀಡಲು ಮುಂದೆ ಬಂದಿದ್ದಾರೆ. ಈಗಾಗಲೇ 25 ಮಂದಿ ಪ್ಲಾಸ್ಮಾವನ್ನು ನೀಡಿದ್ದಾರೆ ಎಂದು ವರದಿಯಾಗಿದೆ. ಈ ನಡುವೆ ತಬ್ಲಿಗಿ ಜಮಾಅತ್ ಮುಖಂಡರಾದ ಮುಹಮ್ಮದ್ ಸಾದ್ ಅವರು ಹೇಳಿಕೆಯೊಂದನ್ನು ನೀಡಿ ಕೊರೋನಾದಿಂದ ಗುಣಮುಖರಾದ

ತಬ್ಲಿಗಿ ಜಮಾಅತ್ ಇನ ಸದಸ್ಯರು ಪ್ಲಾಸ್ಮಾವನ್ನು ನೀಡಿ ಸರಕಾರದೊಂದಿಗೆ ಸಹಕರಿಸಬೇಕು ಎಂದು ಸೂಚಿಸಿರುವುದಾಗಿ ಎ ಎನ್ ಐ ಟ್ವೀಟ್ ಮಾಡಿದೆ. ಪ್ಲಾಸ್ಮಾವನ್ನು ಕೊಡಲು ಮುಂದೆ ಬಂದವರಲ್ಲಿ ದೆಹಲಿಯ ಸುಲ್ತಾನಪುರಿ ಮತ್ತು ನರೇಲಾ ಕ್ವಾರಂಟೈನ್ ಸೆಂಟರ್ ನಲ್ಲಿ ಇದ್ದವರಾಗಿದ್ದಾರೆ ಎಂದು ದೆಹಲಿಯ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಈ ಎರಡು ಕ್ವಾರಂಟೈನ್ ಕೇಂದ್ರಗಳಲ್ಲಿದ್ದ ರೋಗಿಗಳನ್ನು ಸೋಮವಾರ ದೆಹಲಿಯ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಭೇಟಿಯಾಗಿದ್ದರು. ಅಲ್ಲದೆ, ಇತ್ತೀಚೆಗೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಕೂಡ ಗುಣಮುಖರಾದವರು ತಮ್ಮ ಪ್ಲಾಸ್ಮಾವನ್ನು ನೀಡಿ ಸಹಕರಿಸಬೇಕು ಎಂದು ಕೇಳಿಕೊಂಡಿದ್ದರು. ಕಾಯಿಲೆ ಬಿಗಡಾಯಿಸಿದವರನ್ನು ಬದುಕಿಸಲು ಪ್ಲಾಸ್ಮ ಉಪಯುಕ್ತ ಅನ್ನುವುದು ವೈದ್ಯಕೀಯವಾಗಿ ಸಾಬೀತಾಗಿದೆ.

ಮಧುಮೇಹ ಮತ್ತು ರಕ್ತದೊತ್ತಡ ಇಲ್ಲದ 18 ರಿಂದ 60 ವರ್ಷದೊಳಗಿನ ಕೊರೋನಾದಿಂದ ಗುಣ ಹೊಂದಿದ ಯಾವುದೇ ವ್ಯಕ್ತಿ ಪ್ಲಾಸ್ಮಾವನ್ನು ನೀಡಬಹುದು. ದೆಹಲಿಯ ಲೋಕನಾಯಕ ಆಸ್ಪತ್ರೆಯಲ್ಲಿ ಈಗಾಗಲೇ ತೀವ್ರ ನಿಗಾ ವಿಭಾಗದಲ್ಲಿದ್ದ ಆರು ಮಂದಿಗೆ ಪ್ಲಾಸ್ಮಾ ಚಿಕಿತ್ಸೆಯನ್ನು ನೆರವೇರಿಸಲಾಗಿತ್ತು. ಇವರಲ್ಲಿ ಇಬ್ಬರು ತೀವ್ರ ನಿಗಾ ವಿಭಾಗದಿಂದ ಈಗ ಹೊರಬಂದಿದ್ದಾರೆ.

ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.