ಅಪರಿಚಿತರ ಗುಂಡೇಟಿಗೆ ಬನಾರಸ್ ವಿವಿ ವಿದ್ಯಾರ್ಥಿ ಬಲಿ

0
1218

ವಾರಣಾಸಿ,ಎ.3: ಉತ್ತರ ಪ್ರದೆಶದ ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಯೊಬ್ಬ ಹಾಸ್ಟೆಲ್ ಗೇಟಿನ ಸಮೀಪ ಗುಂಡೇಟಿಗೆ ಬಲಿಯಾಗಿದ್ದಾನೆ. ಮೃತ ವಿದ್ಯಾರ್ಥಿಯನ್ನು ಗೌರವ್ ಸಿಂಗ್(20) ಎಂದು ಗುರುತಿಸಲಾಗಿದೆ. ಮಂಗಳವಾರ ರಾತ್ರೆ ಬೈಕ್ ನಲ್ಲಿ ಬಂದ ಅಪರಿಚಿತರು ಗೌರವ್‍ನನ್ನು ಹತ್ಯೆ ಮಾಡಿ ಪರಾರಿಯಾಗಿದ್ದಾರೆ. ಮೃತದೇಹದಲ್ಲಿ ಮೂರು ಗುಂಡುಗಳು ಹೊಕ್ಕಿವೆ. ಕಳೆದ ವರ್ಷ ಗೌರವ್‍ನನ್ನು ವಿಶ್ವವಿದ್ಯಾನಿಲಯದ ಅಧಿಕಾರಿಗಲು ಅಮಾನತುಗೊಳಿಸಿದ್ದರು. ವಿದ್ಯಾರ್ಥಿಗಳ ಸುರಕ್ಷೆಯ ವಿಚಾರದಲ್ಲಿ ಹಿಂಸಾಚಾರ ನಡೆದಿತ್ತು. ಇದರಲ್ಲಿ ಗೌರವ್ ಭಾಗಿಯಾಗಿದ್ದಾನೆ ಎಂದು ಆರೋಪಿಸಿ ಆತನನ್ನು ಅಮಾನತಿನಲ್ಲಿರಿಸಲಾಗಿತ್ತು. ಹಿಂಸಾಚಾರದಲ್ಲಿ ಬಸ್‍ಗೆ ಬೆಂಕಿ ಹಚ್ಚಿದ ಆರೋಪವನ್ನು ಗೌರವ್ ವಿರುದ್ಧ ಹೊರಿಸಲಾಗಿದೆ.

ಬನಾರಸ್ ವಿಶ್ವವಿದ್ಯಾನಿಲಯದಲ್ಲಿ ಗೌರವ್ ಸ್ನಾತಕೋತ್ತರ ಪದವಿ ವಿದ್ಯಾರ್ಥಿಯಾಗಿದ್ದನು. ಹಾಸ್ಟೆಲಿನ ಬಿರ್ಲಾ ಗೇಟಿನ ಸಮೀಪದಲ್ಲಿ ಗೆಳೆಯರ ಜೊತೆ ಮಾತಾಡುತ್ತಿದ್ದಾಗ ಬೈಕಿನಲ್ಲಿ ಬಂದ ಇಬ್ಬರು ಗೌರವ್‍ಗೆ ಗುಂಡು ಹಾರಿಸಿದ್ದಾರೆ. ಹೊಟ್ಟೆಯಲ್ಲಿ ಮೂರು ಕಡೆ ಗುಂಡು ಹೊಕ್ಕಿವೆ. ಕೂಡಲೇ ಆಸ್ಪತ್ರೆಗೆ ಗೌರವ್‍ನನ್ನು ದಾಖಲಿಸಲಾಗಿತ್ತು. ಆದರೆ ಮುಂಜಾನೆ ಒಂದೂವರೆ ಗಂಟೆಗೆ ಗೌರವ್ ಮೃತಪಟ್ಟಿದ್ದಾನೆ.