ವಯನಾಡ್,ಮಾ. 23: ರಾಹುಲ್ ಗಾಂಧಿ ಕೇರಳದ ವಯನಾಡಿನಿಂದ ಲೋಕಸಭೆಗೆ ಸ್ಪರ್ಧಿಸುವ ಕುರಿತು ಕೆಪಿಸಿಸಿ ಆಗ್ರಹಿಸಿದೆ. ಈ ವಿಷಯವನ್ನು ಎಐಸಿಸಿಗೂ ಕೆಪಿಸಿಸಿ(ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿ) ತಿಳಿಸಿದ್ದು ಕೆಪಿಸಿಸಿಯ ಮನವಿಯನ್ನು ರಾಹುಲ್ ಬಹುತೇಕ ಸ್ವೀಕರಿಸಲಿದ್ದಾರೆ ಎಂದು ಕೆಪಿಸಿ ಮೂಲಗಳು ತಿಳಿಸಿವೆ. ರಾಹುಲ್ ಗಾಂಧಿ ದಕ್ಷಿಣ ಭಾರತದಿಂದ ಸ್ಪರ್ಧಿಸುವುದು ಪಾರ್ಟಿಗೆ ಪ್ರಯೋಜನ ಆಗಬಹುದು ಎಂಬ ನಿರೀಕ್ಷೆ ಕೇರಳದ ಕಾಂಗ್ರೆಸ್ಸಿಗರ ನಡುವೆ ಹರಿದಾಡುತ್ತಿದೆ.
ಇದೇ ವೇಳೆ ರಾಹುಲ್ ಗಾಂಧಿ ಕೆಪಿಸಿಸಿಯ ಆಗ್ರಹವನ್ನು ಸಮ್ಮತಿಸಬಹುದು ಎಂದು ಕಾಂಗ್ರೆಸ್ ಹಿರಿಯ ನಾಯಕ ಕೇರಳದ ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಹೇಳಿದರು. ರಾಹುಲ್ ಗಾಂಧಿ ವಯನಾಡ್ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲಿ ಎಂದು ಕೇರಳ ವಿಪಕ್ಷ ನಾಯಕ ರಮೇಶ್ ಚೆನ್ನಿತ್ತಲ ಕೂಡ ಹೇಳಿದರು. ರಾಹುಲ್ ವಯನಾಡಿನಿಂದ ಸ್ಪರ್ಧಿಸಿದರೆ ಅದರ ಲಾಭ ದಕ್ಷಿಣ ಭಾರತಕ್ಕಾಗಲಿದೆ ಎಂದು ಚೆನ್ನಿತ್ತಲ ಹೇಳಿದರು.
ವಯನಾಡಿನಿಂದ ರಾಹುಲ್ ಸ್ಪರ್ಧಿಸುವುದಾದರೆ ಅದನ್ನು ಸ್ವಾಗತಿಸುತ್ತೇನೆ ಎಂದು ವಯನಾಡಿನ ಘೋಷಿತ ಅಭ್ಯರ್ಥಿ ಕಾಂಗ್ರೆಸ್ ನಾಯಕ ಟಿ.ಸಿದ್ದೀಕ್ ಹೇಳಿದರು. ರಾಹುಲ್ಗಾಗಿ ಸೀಟು ಬಿಟ್ಟುಕೊಡಲು ಸಿದ್ಧ ಎಂದು ಅವರು ಹೇಳಿದರು. ಇದೇ ವೇಳೆ ಕೇರಳ ಬಿಜೆಪಿ ನಾಯಕಿ ಶೋಭಾ ಸುರೇಂದ್ರನ್ ಸ್ಮೃತಿ ಇರಾನಿಗೆ ಹೆದರಿ ರಾಹುಲ್ ಅಮೇಠಿಯಿಂದ ಕೇರಳದ ವಯನಾಡಿಗೆ ವಲಸೆ ಬರುತ್ತಿದ್ದಾರೆ ಎಂದು ಹೇಳಿದ್ದಾರೆ.












