ಚ್ಯಾನೆಲ್ ಚರ್ಚೆಯ ನಡುವೆ ಬಿಜೆಪಿ ನಾಯಕನ ಮೇಲೆ ಕಾಂಗ್ರೆಸ್ ನಾಯಕನಿಂದ ಗ್ಲಾಸು ಎಸೆತ

0
1161

ಹೊಸದಿಲ್ಲಿ,ಎ.7: ಚ್ಯಾನೆಲ್ ಚರ್ಚೆಯಲ್ಲಿ ಆರೋಪ ಪ್ರತ್ಯಾರೋಪಗಳ ನಡುವೆ ಕಾಂಗ್ರೆಸ್ ಪ್ರತಿನಿಧಿ ಅಲೋಕ್ ಶರ್ಮ ಕುಡಿಯುವ ನೀರಿನ ಗ್ಲಾಸನ್ನು ಬಿಜೆಪಿ ನಾಯಕನ ಮೇಲೆ ಎಸೆದಿದ್ದಾರೆ. ಹಿಂದಿ ಸುದ್ದಿ ವಾಹಿನಿ ನ್ಯೂಸ್ 24ರಲ್ಲಿ ನಡೆದ ಚುನಾವಣಾ ಚರ್ಚೆಯ ವೇಳೆ ಅಹಿತಕರ ಘಟನೆ ನಡೆದಿದೆ.

ಬಿಜೆಪಿ ಪ್ರತಿನಿಧಿ ಕೆ.ಕೆ. ಶರ್ಮ ದೇಶ ದ್ರೋಹಿ ಎಂದು ಪದೇ ಪದೇ ಹೇಳಿದ್ದಕ್ಕೆ ರೇಗಿದ ಕಾಂಗ್ರೆಸ್ ನಾಯಕ ಅಲೋಕ್ ಶರ್ಮ ಈ ಕೃತ್ಯವೆಸಗಿದರು. ಸುದ್ದಿ ನಿರೂಪಕ ಎಷ್ಟು ಮನವಿ ಮಾಡಿದರೂ ಇಬ್ಬರೂ ಶಾಂತರಾಗದೆ ಬೊಬ್ಬೆ ಹೊಡೆದಿದ್ದಾರೆ. ಅಂತಿಮವಾಗಿ ಅಲೋಕ್ ಶರ್ಮ ತಾನು ಕುರ್ಚಿಯಿಂದ ಎದ್ದು ಕುಡಿಯಲು ಇರಿಸಿದ್ದ ನೀರಿನ ಗ್ಲಾಸನ್ನು ಕೆ.ಕೆ.ಶರ್ಮರ ಮೇಲೆ ಎಸೆದರು. ಗ್ಲಾಸು ಗೋಡೆಗೆ ಹೋಗಿ ಬಡಿದಿತ್ತು. ಯಾರೂ ಗಾಯಗೊಂಡಿಲ್ಲ.

ಆದರೆ ಗ್ಲಾಸಿನಲ್ಲಿ ಬಹುಭಾಗ ನೀರು ನಿರೂಪಕನ ಮೇಲೆ ಬಿದ್ದಿದೆ. ನಂತರ ಬಟ್ಟೆ ಬದಲಾಯಿಸಿ ಬಂದು ಚರ್ಚೆಯನ್ನು ಮುಂದುವರಿಸಿದ್ದಾರೆ. ಉತ್ತರಪ್ರದೇಶ ಮುಖ್ಯ ಮಂತ್ರಿ ಯೋಗಿ ಆದಿತ್ಯನಾಥ್ ಸೇನೆಯನ್ನು ಮೋದಿಯ ಸೇನೆ ಎಂದು ಕರೆದಿರುವುದಕ್ಕೆ ಸಂಬಂಧಿಸಿದ ಚರ್ಚೆಯ ವೇಳೆ ಘಟನೆ ನಡೆದಿದೆ.