ಕೊಲ್ಲಂ,ಮಾ.21: ಓಚ್ಚಿರ ಎಂಬಲ್ಲಿಂದ ರಾಜಸ್ಥಾನ ಮೂಲದ 13 ವರ್ಷದ ಅಪ್ರಾಪ್ತ ಬಾಲಕಿಯನ್ನು ಅಪಹರಿಸಿದ್ದ ತಂಡದ ಇನ್ನೊಬ್ಬ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಈತನ ವಿರುದ್ಧ ಹಲವು ಕ್ರಿಮಿನಲ್ ಆರೋಪಗಳಿದ್ದು ಬಂಧಿತನನ್ನು ಓಚ್ಚಿರದ ಪ್ಯಾರಿ ಎಂದು ಗುರುತಿಸಲಾಗಿದೆ. ಈತನ ವಿರುದ್ಧ ಪೊಲೀಸರು ಕಾಪ್ಪ ಕಾನೂನಿನಡಿಯಲ್ಲಿ ಕೇಸು ದಾಖಲಿಸಿದ್ದಾರೆ. ಮುಖ್ಯ ಆರೋಪಿ ಮತ್ತು ಬಾಲಕಿ ಇನ್ನೂ ಪತ್ತೆಯಾಗಿಲ್ಲ. ಇವರ ಶೋಧಕ್ಕಾಗಿ ಪೊಲೀಸರು ಬೆಂಗಳೂರನತ್ತ ತನಿಖೆಯನ್ನು ವಿಸ್ತರಿಸಿದ್ದಾರೆ.
ಆವೆ ಮಣ್ಣಿನಿಂದ ಗೊಂಬೆ ತಯಾರಿಸುವ ರಾಜಸ್ಥಾನ ಮೂಲದ ಕುಟುಂಬದ ಬಾಲಕಿಯನ್ನು ಕಳೆದ ಸೋಮವಾರ ನಾಲ್ವರ ತಂಡ ಅಪಹರಿಸಿತ್ತು. ವಲಿಯಕುಳಂಗರ ಎಂಬಲ್ಲಿ ಈ ಕುಟುಂಬ ಶೆಡ್ನಲ್ಲಿ ವಾಸಿಸುತ್ತಿತ್ತು. ಅಲ್ಲಿಗೆ ಬಂದ ನಾಲ್ವರು ಬಾಲಕಿಯ ತಂದೆಗೆ ಥಳಿಸಿ ಆಕೆಯನ್ನು ಅಪಹರಿಸಿಕೊಂಡು ಹೋಗಿದ್ದರು. ಈ ತಂಡಕ್ಕೆ ಪ್ಯಾರಿ ನೇತೃತ್ವ ವಹಿಸಿದ್ದನೆಂದು ಪೊಲೀಸರು ತಿಳಿಸಿದ್ದಾರೆ. ಕೇರಳದ ಗೂಂಡಾ ಕಾಯಿದೆ ಕಾಪ್ಪವನ್ನು ಈತ ವಿರುದ್ಧ ಹೊರಿಸಲಾಗುವುದು ಎಂದು ಪೋಲಿಸರು ತಿಳಿಸಿದ್ದು, ಹಿಂದಿನ ಕ್ರಿಮಿನಲ್ ಪ್ರಕರಣಗಳಲ್ಲಿ ಜಾಮೀನು ಪಡೆದಿದ್ದ ಈತ ನಂತರ ಬಾಲಕಿ ಅಪಹರಣಕ್ಕೆ ನೇತೃತ್ವ ನೀಡಿದ್ದನೆಂದು ತಿಳಿಸಿದ್ದಾರೆ.
ಪ್ಯಾರಿ ಸಹಿತ ಪ್ರಕರಣದಲ್ಲಿ ಈವರೆಗೆ ಮೂವರನ್ನು ಬಂಧಿಸಲಾಗಿದೆ. ಅನಂತು, ವಿಪಿನ್ ಈಗ ಪ್ಯಾರಿ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಓಚ್ಚಿರದ ಮುಹಮ್ಮದ್ ರೋಶನ್ ಬಾಲಕಿಯನ್ನು ಪ್ರೀತಿಸುತ್ತಿದ್ದ ಎನ್ನಲಾಗಿದೆ. ಬಾಲಕಿ ಮತ್ತು ರೋಶನ್ ಬೆಂಗಳೂರಿನಲ್ಲಿದ್ದಾನೆ ಎನ್ನುವ ವಿವರದ ಆಧಾರದಲ್ಲಿ ಪೊಲೀಸರು ಬೆಂಗಳೂರನ್ನು ಕೇಂದ್ರೀಕರಿಸಿ ತನಿಖೆ ನಡೆಸುತ್ತಿದ್ದಾರೆ. ಆದರೆ ಆರೋಪಿ ಮತ್ತು ಬಾಲಕಿಯ ಕುರಿತು ಯಾವುದೇ ವಿವರ ಪೊಲೀಸರಿಗೆ ಈವರೆಗೆ ದೊರಕಿಲ್ಲ ಎಂದು ಮೂಲಗಳು ತಿಳಿಸಿವೆ. ಘಟನೆಯಲ್ಲಿ ಮಾನವಹಕ್ಕು ಆಯೋಗ ಸ್ವಯಂ ಪ್ರೇರಿತ ಕೇಸು ದಾಖಲಿಸಿಕೊಂಡಿದೆ.












