ಚಂದದ ಹುಡುಗಿಯರನ್ನು ಮದುವೆ ಮಾಡಿಸುವ ಆಸೆ ಹುಟ್ಟಿಸಿ ಅಮಾಯಕರನ್ನು ಬ್ಲಾಕ್‌ಮೈಲ್ ಮಾಡುತ್ತಿದ್ದ ನಕಲಿ ಪೊಲೀಸ್ ಗ್ಯಾಂಗ್‍ನ ಬಂಧನ

0
674

ಫತೇಹಗಡ(ಪಂಚಾಬ್),ಮಾ. 27: ಚಂದದ ಹುಡುಗಿಯರನ್ನು ಮದುವೆಯ ಮಾಡಿಸುತ್ತೇವೆ ಎಂದು ಆಮಿಷವೊಡ್ಡಿ ಅಮಾಯಕರನ್ನು ಬ್ಲಾಕ್ ಮೈಲ್ ಮಾಡುತ್ತಿದ್ದ  ಐವರು ಸದಸ್ಯgನ್ನೊಳಗೊಂಡ  ನಕಲಿ ಪೊಲೀಸ್ ಗ್ಯಾಂಗ್‍ವೊಂದನ್ನು ಫತೇಹಗಡದ  ಪೊಲೀಸರು ಬಂಧಿಸಿದ್ದಾರೆ. ಅಮಾಯಕರನ್ನು ಹುಡುಕಿ ತಂಡದ ವ್ಯಕ್ತಿಯೊಬ್ಬ ಚಂದದ ಹುಡುಗಿಯರನ್ನು ಮದುವೆ ಮಾಡಿಸುತ್ತೇನೆ ಎಂದು ಹೇಳುತ್ತಿದ್ದ. ನಂತರ ಯುವತಿಯರೊಂದಿಗೆ ನಕಲಿ ಮದುವೆಯನ್ನೂ  ಮಾಡಿಸುತ್ತಿದ್ದ. ಇದಾದ ಬಳಿಕ ಮದುವೆ ವಿಚ್ಛೇದನ ಮಾಡಿಸುತ್ತೇನೆ. ಅತ್ಯಾಚಾರ ಪ್ರಕರಣ ದಾಖಲಿಸುತ್ತೇನೆ ಎಂದು ಬೆದರಿಸಿ ಅಮಾಯಕರಿಂದ ತಂಡ  ಹಣ ವಸೂಲು ಮಾಡುತ್ತಿತ್ತು ಎಂದು ಫತೇಹಗಡ ಎಎಸ್ಪಿ ಶ್ರೀಮತಿ ಅಮನೀತ್ ಕ್ಯಾಂಡಲ್ ಹೇಳಿದರು.

ಇವರ ಬಲೆಗೆ ಬಿದ್ದವರಿಂದ ಹಣವನ್ನು ವಸೂಲು ಮಾಡುವ ಸಲುವಾಗಿ ಪೊಲೀಸರಂತೆ ವೇಷ ತೊಟ್ಟ ಗ್ಯಾಂಗ್‍ನ ಸದಸ್ಯರು ಹೋಗುತ್ತಿದ್ದರು. ಪೊಲೀಸರು ಇಬ್ಬರು ಮಹಿಳೆಯರ ಸಹಿತ ಐವರನ್ನು  ಬಂಧಿಸಿದ್ದು 420, 120ಬಿ ಮತ್ತು 370 ಸೆಕ್ಷನ್ ಪ್ರಕಾರ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಇನ್ನೂ ಕೆಲವರು ಈ ಗ್ಯಾಂಗ್‍ನಲ್ಲಿ  ಸಕ್ರಿಯರಾಗಿದ್ದು ಅವರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಹೊರರಾಜ್ಯದ ಬಡ ಹುಡುಗಿಯರನ್ನು ಹಣದ ಆಶೆ ಹುಟ್ಟಿಸಿ ಕರೆ ತಂದು ಅಮಾಯಕರೊಂದಿಗೆ ನಕಲಿ ಮದುವೆ ಮಾಡಿಸುವುದು ಇವರ ಕಾರ್ಯಾಚರಣೆ ರೀತಿ ಎಂದು ಪೊಲೀಸರು ತಿಳಿಸಿದ್ದಾರೆ.