ವಾರಣಾಸಿಯಲ್ಲಿ ಪ್ರಿಯಾಂಕಾ ಮ್ಯಾಜಿಕ್ ನಡೆಯಬಹುದೇ?

0
1490

ಹೊಸದಿಲ್ಲಿ,ಎ.1: ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್‍ನ ಪುನಶ್ಚೇತನಕ್ಕೆ ಸತತ ಪ್ರಯತ್ನ ನಡೆಸುತ್ತಿದ್ದಾರೆ. ಇದೇವೇಳೆ, ಪ್ರಧಾನಿ ನರೇಂದ್ರ ಮೋದಿ ಸ್ವಕ್ಷೇತ್ರ ವಾರಣಾಸಿಯಲ್ಲಿ ಕಾಂಗ್ರೆಸ್‍ನ ಅದೃಷ್ಟ ಖುಲಾಯಿಸಬಹುದೇ ಎನ್ನುವ ಪ್ರಶ್ನೆ ಈಗ ಕಾರ್ಯಕರ್ತರ ನಡುವೆ ವ್ಯಾಪಕ ಚರ್ಚೆಯಾಗುತ್ತಿದೆ. ಪ್ರಿಯಾಂಕಾ ಈಗಾಲೇ ತಾನೇಕೆ ವಾರಣಾಸಿಯಿಂದ ಸ್ಪರ್ಧಿಸಬಾರದು ಎಂದು ಕಾರ್ಯಕರ್ತರನ್ನು ಕೇಳಿ ವ್ಯಾಪಕ ಕುತೂಹಲಕ್ಕೂ ಕಾರಣರಾಗಿದ್ದಾರೆ. 2014ರಲ್ಲಿ ವಾರಣಾಸಿಯಲ್ಲಿ ಮೋದಿ ಅಲೆ ವ್ಯಾಪಕವಾಗಿತ್ತು. ಮನೆ,ಮನೆಗಳಲ್ಲಿ ಮೋದಿ ಎನ್ನುವ ಕೂಗು ಕೇಳಿ ಬರುತ್ತಿದ್ದವು. ಆದರೆ ಈಗ ಪರಿಸ್ಥಿತಿ ಹಿಂದಿಗಿಂತ ಭಿನ್ನವಾಗಿದ್ದು ಒಂದು ವೇಳೆ ಪ್ರಿಯಾಂಕಾ ವಾರಣಾಸಿಯಿಂದ ಚುನಾವಣೆಯಲ್ಲಿ ಸ್ಪರ್ಧಿಸಿದರೆ ಗೆಲ್ಲುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಕಾಂಗ್ರೆಸ್ 1953ರಿಂದ ಆರು ಬಾರಿ ವಾರಣಾಸಿಯಲ್ಲಿ ಗೆದ್ದಿತ್ತು. ನಂತರ ಈ ಕ್ಷೇತ್ರ ಕಾಂಗ್ರೆಸ್‍ನ ಕೈಬಿಟ್ಟು ಹೋಯಿತು. 2017ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸಮಾಜವಾದಿ ಪಾರ್ಟಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದರೂ ಮೋದಿ ಅಲೆ ಮತ್ತು ಮತಗಳ ಧ್ರುವೀಕರಣದಿಂದಾಗಿ ಹೇಳಿಕೊಳ್ಳುವಂತಹ ಸಾಧನೆ ಮಾಡಿರಲಿಲ್ಲ.

2014ರಲ್ಲಿ ಮೋದಿಯ ವಿರುದ್ಧ ಕಾಂಗ್ರೆಸ್‍ಗೆ ಕೇವಲ ಶೇ.7ರಷ್ಟು ಮತಗಳು ಬಿದ್ದಿದ್ದವು. ಬಿಎಸ್ಪಿಗೆ ಶೇ. 6 ಮತ್ತು ಸಮಾಜವಾದಿ ಪಾರ್ಟಿಗೆ ಶೇ. 4ರಷ್ಟು ಮತಗಳು ಬಿದ್ದಿದ್ದವು. ಆದರೆ 2004ರಲ್ಲಿ ವಾರಣಾಸಿಯಲ್ಲಿ ಬಿಜೆಪಿ ತತ್ತರಿಸಿತ್ತು. ಕಾಂಗ್ರೆಸ್‍ನ ರಾಜೇಶ್ ಮಿಶ್ರ ಬಿಜೆಪಿಯನ್ನು ಸೋಲಿಸಲು ಯಶಸ್ವಿಯಾಗಿದ್ದರು. ಆದರೆ, ಕಾಂಗ್ರೆಸ್‍ನ ಮತ ಪ್ರಮಾಣ ಶೇ. 13ರಿಂದ ಶೇ.7ಕ್ಕೆ ಇಳಿಕೆಯಾಗಿತ್ತು. 1991ರಿಂದ 2014ರವರೆಗೆ ಏಳು ಬಾರಿ ಬಿಜೆಪಿ ಇಲ್ಲಿ ಗೆದ್ದಿದೆ.

ಈಸಲ ಪ್ರಿಯಾಂಕಾ ಅಭ್ಯರ್ಥಿಯಾದರೆ ಕಾಂಗ್ರೆಸ್ ಈ ಕ್ಷೇತ್ರವನ್ನು ಗೆಲ್ಲುವ ಸಾಧ್ಯತೆಯಿಂದ ಎನ್ನುವ ಆಶಾವಾದವನ್ನು ಕಾಂಗ್ರೆಸ್ ಕಾರ್ಯಕರ್ತರು ವ್ಯಕ್ತಪಡಿಸುತ್ತಿದ್ದಾರೆ. ಒಂದು ವೇಳೆ, ಮೋದಿ ವಿರುದ್ಧ ಪ್ರಿಯಾಂಕಾ ಗೆಲುವು ಸಾಧಿಸಿದರೆ ಇಡೀ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಚೇತರಿಸಿಕೊಳ್ಳುವ ಎಲ್ಲ ಸಾಧ್ಯತೆಗಳು ಇವೆ ಎಂದು ಹೇಳಲಾಗುತ್ತಿದೆ.