ಚುನಾವಣಾ ಪ್ರಚಾರದ ವೇಳೆ ತಮಿಳ್ನಾಡು ಮುಖ್ಯಮಂತ್ರಿ ಕೆ. ಪಳನಿ ಸ್ವಾಮಿಗೆ ಚಪ್ಪಲಿ ಎಸೆತ

0
773

ತಂಜಾವೂರ್,ಎ.1: ತಮಿಳ್ನಾಡಿನ ಮುಖ್ಯಮಂತ್ರಿ ಕೆ. ಪಳನಿಸ್ವಾಮಿಗೆ ಸೋಮವಾರ ಲೋಕಸಭಾ ಚುನಾವಣಾ ಪ್ರಚಾರದ ವೇಳೆ ತಂಜಾವೂರಿನಲ್ಲಿ ಚಪ್ಪಲಿ ಎಸೆಯಲಾಗಿದೆ. ಸದ್ಯ ಚಪ್ಪಲಿ ಎಸೆದ ವ್ಯಕ್ತಿಯನ್ನು ಗುರುತಿಸಲು ಸಾಧ್ಯವಾಗಿಲ್ಲ. ಆದರೆ, ಮುಖ್ಯಮಂತ್ರಿಯ ಸುರಕ್ಷೆಯ ವಿಚಾರದಲ್ಲಿ ಸವಾಲು ಸೃಷ್ಟಿಯಾಗಿದೆ. ಮುಖ್ಯಮಂತ್ರಿಯ ಕಾರಿಗೆ ಚಪ್ಪಲಿ ಬಂದು ಅಪ್ಪಲಿಸಿದ್ದು ವೀಡಿಯೊದಲ್ಲಿ ಕಂಡು ಬರುತ್ತಿದೆ ಎಂದು ವರದಿಯಾಗಿದೆ.

ತಮಿಳ್ನಾಡಿನ 39 ಲೋಕಸಭಾ ಸ್ಥಾನಗಳಿಗೆ ಎಪ್ರಿಲ್ ಹದಿನೆಂಟರಂದು ಚುನಾವಣೆ ನಡೆಯಲಿದೆ. ಈ ಹಿಂದೆ ಪಳನಿ ಸ್ವಾಮಿಯವರ ಮನೆಯಲ್ಲಿ ಬಾಂಬು ಇರಿಸಲಾಗಿದೆ ಎಂದು ವ್ಯಕ್ತಿಯೊಬ್ಬ ಕರೆಮಾಡಿದ್ದ. ಆದರೆ ಅದು ಸುಳ್ಳು ಕರೆಯೆಂದು ನಂತರ ಸಾಬೀತಾಗಿತ್ತು. 23 ವರ್ಷದ ಮಾನಸಿಕ ಅಸ್ವಸ್ಥ ಯುವಕನನ್ನು ಈ ಘಟನೆಯಲ್ಲಿ ಪೊಲೀಸರು ಬಂಧಿಸಿದ್ದರು.

ಮುಖ್ಯ ಮಂತ್ರಿಗಳ ವಿರುದ್ಧ ಚಪ್ಪಲಿ ಎಸೆತದ ಘಟನೆಗಳು ಈ ಹಿಂದೆಯೂ ನಡೆದಿವೆ. ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ ಚಪ್ಪಲಿ ಎಸೆಯಲಾಗಿತ್ತು. ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್‍ರಿಗೆ ಸಾರ್ವಜನಿಕ ಸಭೆಯಲ್ಲಿ ಚಪ್ಪಲಿ ಎಸೆದ ಘಟನೆ ಕೂಡಾ ನಡೆದಿತ್ತು.