ಮೋದಿಯ ಹೆಲಿಕಾಪ್ಟರಿನಲ್ಲಿ ದೇಶ ನೋಡಬಾರದಂತಹದೇನಿದೆ?-ಕಾಂಗ್ರೆಸ್ ಪ್ರಶ್ನೆ

0
1727

ಹೊಸದಿಲ್ಲಿ,ಎ.18: ಪ್ರಧಾನಿಯ ಹೆಲಿಕಾಪ್ಟರ್‍ನಲ್ಲಿ ತಪಾಸಣೆ ನಡೆಸಿದ್ದಕ್ಕೆ ಒಡಿಸ್ಸದಲ್ಲಿ ನಿರೀಕ್ಷರಾಗಿದ್ದ ಐಎಎಸ್ ಅಧಿಕಾರಿಯನ್ನು ಅಮಾನತು ಮಾಡಿದ ಘಟನೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ಟೀಕಾಪ್ರಹಾರ ನಡೆಸಿದೆ. ಹೆಲಿಕಾಪ್ಟರ್ ತಪಾಸಣೆ ನಡೆಸುವ ತನ್ನ ಕರ್ತವ್ಯವನ್ನು ನಿರ್ವಹಿಸಿದ ಓರ್ವ ಅಧಿಕಾರಿಯನ್ನು ಅಮಾನತುಗೊಳಿಸಲಾಯಿತು. ಚುನಾವಣಾ ಪ್ರಚಾರಕ್ಕೆ ಅಧಿಕೃತ ವಾಹನ ಬಳಕೆಗೆ ನಿಯಂತ್ರಣವಿದೆ. ತಪಾಸಣೆಯಿಂದ ಪ್ರಧಾನಿಯ ವಾಹನಕ್ಕೆ ವಿನಾಯಿತಿಯಿಲ್ಲ. ದೇಶ ಕಾಣಲಾರದಂತಹ ಏನನ್ನು ಹೆಲಿಕಾಪ್ಟರ್‍ನಲ್ಲಿ ಪ್ರಧಾನಿ ಬಚ್ಚಿಟ್ಟಿಕೊಂಡಿದ್ದಾರೆ ಎಂದು ಕಾಂಗ್ರೆಸ್ ತನ್ನ ಅಧಿಕೃತ ಟ್ವಿಟರ್ ಪುಟದಲ್ಲಿ ಟ್ವೀಟ್ ಮಾಡಿ ಪ್ರಶ್ನಿಸಿದೆ.

ಮೋದಿಯ ಹೆಲಿಕಾಪ್ಟರಿನಲ್ಲಿ ಪರಿಶೀಲನೆ ನಡೆಸಿದ್ದಕ್ಕಾಗಿ ಚುನಾವಣಾ ಆಯೋಗ ನಿರೀಕ್ಷರಾದ 1996ರ ಬ್ಯಾಚ್ ಕರ್ನಾಟಕ ಕ್ಯಾಡರ್ ಐಎಎಸ್ ಅಧಿಕಾರಿ ಮುಹ್ಸಿನ್‍ರನ್ನು ಅಮಾನತುಗೊಳಿಸಿದೆ. ಎಸ್‍ಪಿಜಿ ಸುರಕ್ಷೆಯಿರುವ ವಿಐಪಿಯ ಹೆಲಿಕಾಪ್ಟರ್‍ಗಳನ್ನು ಪರಿಶೀಲಿಸಬಾರದೆನ್ನುವ ಸೂಚನೆಯನ್ನು ಐಎಎಸ್ ಅಧಿಕಾರಿ ಉಲ್ಲಂಘಿಸಿದ್ದಾರೆ ಎಂದು ಅವರ ವಿರುದ್ಧ ದೂರು ನೀಡಲಾಗಿತ್ತು. ಮುನ್ಸೂಚನೆ ನೀಡದೆ ತಪಾಸಣೆ ಮಾಡಿದ್ದರಿಂದ ಪ್ರಧಾನಿ ಪ್ರಯಾಣಿಸಲು ಹದಿನೈದು ನಿಮಿಷ ತಡವಾಗಿತ್ತು.

ಇದೇ ರೀತಿ ಒಡಿಸ್ಸದಲ್ಲಿ ಮುಖ್ಯಮಂತ್ರಿ ನವೀನ್ ಪಟ್ನಾಯಕ್‍ರ ಹೆಲಿಕಾಪ್ಟರನ್ನು ರೂರ್‍ಕಿಯಲ್ಲಿ ಮತ್ತು ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್‍ರ ಹೆಲಿಕಾಪ್ಟರ್‍ನಲ್ಲಿ ಸಂಬಾಲ್ಪುರದಲ್ಲಿ ತಪಾಸಣೆ ನಡೆದಿದ್ದು, ಈ ಘಟನೆಯ ಕುರಿತು ಕೂಡಾ ತನಿಖೆ ನಡೆಯುತ್ತಿದೆ. ಮುಹ್ಸಿನ್ ವಿರುದ್ಧ ಜಿಲ್ಲಾಧಿಕಾರಿ, ಪೊಲೀಸ್ ಡಿಐಜಿ ನೀಡಿದ ವರದಿಯ ಆಧಾರದಲ್ಲಿ ಕ್ರಮ ಜರಗಿಸಲಾಗಿದೆ.