ಪೋಷಕರೇ, ಮಕ್ಕಳ ಜೊತೆ ಹೇಗಿದ್ದೀರಿ?

0
762

ಸನ್ಮಾರ್ಗ ವಾರ್ತೆ

✍️ ಡಾ| ಸುಮೈರ್ ಯೂನುಸ್

ಮಕ್ಕಳು ಬಂಗಾರವಾಗಿದ್ದಾರೆ. ಚಿನ್ನದೊಂದಿಗೆ ಹೇಗೆಯೋ ಹಾಗೆಯೇ ಮಕ್ಕಳೊಂದಿಗೆ ಬಹಳ ಸೂಕ್ಷ್ಮವಾಗಿ ವರ್ತಿಸಬೇಕಾಗುತ್ತದೆ.

ಇಮಾಮ್ ಇಬ್ನು ಕಯ್ಯುಮ್ ಹೇಳುತ್ತಾರೆ, “ಹೆಚ್ಚಿನ ಮಕ್ಕಳು ಹಾಳಾಗಲು ಕಾರಣ ತಂದೆ ತಾಯಿಯಾಗಿರುತ್ತಾರೆ. ಅವರ ನಿರ್ಲಕ್ಷ್ಯದ ಕಾರಣ ಮಕ್ಕಳು ಕೆಡುತ್ತಾರೆ.”

ಒಂದು ವೇಳೆ ಮಕ್ಕಳೊಂದಿಗೆ ಕಠೋರವಾಗಿ ವರ್ತಿಸುತ್ತಿದ್ದರೆ ಅಥವಾ ನಿರ್ಲಕ್ಷ್ಯವನ್ನು ಮಾಡುತ್ತಿದ್ದರೆ ಅವರು ಪ್ರಕೃತಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾನೆ ಎಂದು ಅರಿತಿರಬೇಕು. ಪ್ರಕೃತಿಯು ಪ್ರಕೃತಿಯಲ್ಲಿ ಸೌಂದರ್ಯವಾದಂತೆ ಮಕ್ಕಳ ಮನಸ್ಸು ಮತ್ತು ಸ್ವಭಾವದಲ್ಲಿ ನಿಷ್ಕಳಂಕರಾಗಿರುತ್ತಾರೆ.

ಒಂದುವೇಳೆ ಪ್ರಕೃತಿಯನ್ನು ಕೆಡಿಸಿದರೆ ಹೇಗೆ ಭೀಕರ ಅನಾಹುತಗಳಿಗೆ ಕಾರಣವಾಗುತ್ತದೋ ಹಾಗೆಯೇ ಮಕ್ಕಳು ನೈತಿಕ ಅಧಃಪತನಕ್ಕೆ ಸಾಗಿದರೆ ಅದೂ ಭವಿಷ್ಯದ ಭಯಾನಕ ಅನಾಹುತಗಳಿಗೆ ಕಾರಣವಾಗುತ್ತದೆ.

ತಂದೆ-ತಾಯಿಯರ ಕಠೋರತೆಯು ಮಕ್ಕಳ ಮತ್ತು ಹೆತ್ತವರ ನಡುವಿನ ಅಂತರವನ್ನು ಹೆಚ್ಚಿಸುತ್ತದೆ. ಅವರಲ್ಲಿ ಪರಸ್ಪರ ಅನ್ಯೋನ್ಯತೆ ಮುಕ್ತ ಮಾತುಕತೆಗೆ ತಡೆಗೋಡೆಯನ್ನು ನಿರ್ಮಿಸುತ್ತದೆ. ಮಕ್ಕಳು, ಯುವಕ, ಯುವತಿಯರಲ್ಲಿ ಕೇಳಿದರೆ ನಾವು ಮನೆಯಲ್ಲಿ ಪರಸ್ಪರ ಮಾತನಾಡುವುದೇ ಇಲ್ಲ ಅನ್ನುತ್ತಾರೆ. ಒಂದು ವೇಳೆ ಮಾತಾಡಿದರೂ ದೂರ, ನಕಾರಾತ್ಮಕ ವಿಚಾರಗಳಲ್ಲಿ ಚರ್ಚೆ ವಾಗ್ವಾದ ನಡೆಯುತ್ತದೆ ಎಂದು ಖೇದ ವ್ಯಕ್ತಪಡಿಸುತ್ತಾರೆ.

ಒಂದು ವೇಳೆ ಈ ಸತ್ಯಾಂಶವನ್ನು ಹೆಚ್ಚಿನ ಹೆತ್ತವರೂ ಅರಿತಿದ್ದರೆ ಮನೆ ಎಂಬ ವಾತಾವರಣ ಎಷ್ಟೊಂದು ಸುಂದರವಾಗುತ್ತಿತ್ತು. ಪರಸ್ಪರ ಮಾತು ಕತೆಯಿಂದ ಬಹಳಷ್ಟು ಸಮಸ್ಯೆಗಳು ಪರಿಹಾರವಾಗುತ್ತವೆ. ಇದರ ಪ್ರಯೋಜನ, ಫಲಿತಾಂಶವನ್ನು ಸಮಾಜವೂ ಆಸ್ವಾದಿಸುತ್ತದೆ. ಇದರಿಂದ ಧಾರ್ಮಿಕ, ಸಾಮಾಜಿಕ, ನೈತಿಕ, ತರಬೇತಿ ಹೀಗೆ ಬಹಳಷ್ಟು ಪ್ರಯೋಜನಗಳಾಗುತ್ತವೆ. ಮಾತುಕತೆಯು ಪುನರ್ ನಿರ್ಮಾಣ, ಆಯುಧ ಮತ್ತು ಶುಶ್ರೂಷೆಯೂ ಆಗಿದೆ. ಮಕ್ಕಳ ಜೊತೆ ನಡೆಯುವ ಋಣಾತ್ಮಕ ವ್ಯವಹಾರವು ಮಾನಸಿಕ ಭದ್ರತೆಯನ್ನು ದುರ್ಬಲಗೊಳಿಸುತ್ತದೆ.

ಮನುಷ್ಯ ಜೀವನವನ್ನು ಹೇಗೆ ನಿಭಾಯಿಸಬೇಕು ಎಂಬುದನ್ನು ಮಗು ತನ್ನ ಪ್ರಥಮ ಪಾಠ ಶಾಲೆ ಮನೆಯಲ್ಲಿ ಕಲಿಯುತ್ತದೆ. ಮನೆಯ ಮೂಲಕವೇ ಮಗು ಭಾಷೆ, ಸಂಬಂಧಗಳ ಮಹತ್ವ, ಅನ್ಯೋನ್ಯತೆ, ಗೌರವ, ವ್ಯವಹಾರ ಎಲ್ಲವನ್ನು ಕಲಿಯುತ್ತದೆ. ವಯಸ್ಸಿನ ಪ್ರತಿ ಘಟ್ಟದಲ್ಲೂ ಮಾತುಕತೆಯಲ್ಲಿ ವ್ಯತ್ಯಾಸ ಇರುತ್ತದೆ. ಈ ಘಟ್ಟದಲ್ಲಿ ಹೆತ್ತವರು ಮಕ್ಕಳ ಮಾನಸಿಕತೆಗೆ ತಕ್ಕಂತೆ ವರ್ತಿಸದಿದ್ದರೆ ಅದು ಪ್ರತಿಕೂಲ ಸಂಬಂಧಗಳಿಗೆ ಎಡೆ ಮಾಡಿಕೊಡುತ್ತದೆ.

ಬಾಲ್ಯಕಾಲ: (1ರಿಂದ 6 ವರ್ಷ)
ಈ ವಯಸ್ಸಿನ ಘಟ್ಟದಲ್ಲಿ ಮಕ್ಕಳು ಹೆಚ್ಚು ಹೆಚ್ಚು ಪ್ರಶ್ನೆಗಳನ್ನು ಕೇಳುತ್ತಾರೆ. ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಅವರು ಪುಳಕಿತರಾಗಿರುತ್ತಾರೆ. ಅವರು ವಿಷಯವನ್ನು ಅರಿಯುವ, ಗ್ರಹಿಸುವ ಇಚ್ಛೆ ವ್ಯಕ್ತಪಡಿಸುತ್ತಾರೆ. ಕೆಲವರಿಗೆ ಮಕ್ಕಳ ಇಂತಹ ಮುಗ್ಧ ಪ್ರಶ್ನೆಗಳು ಕಿರಿಕಿರಿಯನ್ನುಂಟು ಮಾಡುತ್ತವೆ. ಅವರು ರೇಗುತ್ತಾರೆ. ನಿನ್ನ ಪ್ರಶ್ನೆ ಸಾಕಾಯಿತು ಎಂದು ಸಾರುತ್ತಾರೆ.

ಆದರೆ ಇದರಿಂದ ಮಗುವಿಗೆ ಆಗುವ ನಿರಾಶೆಯನ್ನು ಅವರು ಗಣನೆಗೆ ತೆಗೆದುಕೊಳ್ಳುವುದಿಲ್ಲ. ಮಗುವಿಗೆ ತೋರ್ಪಡಿಸಲು ಗೊತ್ತಿರುವುದೂ ಇಲ್ಲ. ಆದ್ದರಿಂದ ಮಕ್ಕಳ ಇಂತಹ ಮುಗ್ಧ ಪ್ರಶ್ನೆಗಳಿಗೆ ಸಹನೆ ಮತ್ತು ಸಂತೋಷದಿಂದ ಉತ್ತರಿಸಬೇಕು. ಯುಕ್ತಿ ಮತ್ತು ಸದುಪದೇಶದಿಂದ ವ್ಯವಹರಿಸಬೇಕು. ಮೃದುತ್ವ ತೋರಿಸಬೇಕು. ಮಕ್ಕಳ ಕಲಿಯುವ, ಗ್ರಹಿಸುವ, ಜ್ಞಾನವನ್ನು ವೃದ್ಧಿಸುವ ತವಕಗಳನ್ನು ಮುಕ್ತ ವಿಶಾಲ ಹೃದಯದಿಂದ ಪೂರೈಸಬೇಕು.

ಈ ವಯಸ್ಸಿನ ಮಕ್ಕಳಲ್ಲಿ ಕಂಡುಕೊಂಡ ಸತ್ಯವೆಂದರೆ, ಇವರು ವಿಷಯಗಳ ಭಾಗಗಳನ್ನು ಅರಿಯುವುದಕ್ಕಿಂತ ಅದನ್ನು ಸಂಪೂರ್ಣವಾಗಿ ತಿಳಿಯಲು ಇಚ್ಛಿಸುತ್ತಾರೆ. ಉತ್ತರ ಕೊಡುವಾಗ ಹೆತ್ತವರು ತಲೆ ತಪ್ಪಿಸಲು ಅರ್ಧಂಬರ್ಧ ಉತ್ತರ ಕೊಟ್ಟು ಬಿಡುತ್ತಾರೆ. ಯಾವುದೇ ಒಂದು ಭಾಗದ ಬಗ್ಗೆ ಹೇಳಿ ಸುಮ್ಮನಾಗುತ್ತಾರೆ. ಅದೇ ಸಂದರ್ಭದಲ್ಲಿ ಅವರ ಗಮನ ಒಂದೇ ವಿಷಯದಲ್ಲಿ ಸ್ತಿಮಿತದಲ್ಲಿರುವುದಿಲ್ಲ. ಉತ್ತರ ನೀಡುವುದಕ್ಕಿಂತ ಮುಂಚಿತವಾಗಿ ಅವರು ಬೇರೆಯೇ ವಿಷಯಗಳಿಗೆ ಲಗ್ಗೆ ಇಟ್ಟು ಬಿಡುತ್ತಾರೆ. ಆದ್ದರಿಂದ ಅವರಿಗೆ ಉತ್ತರ ನೀಡುವಾಗ ಸಂಕ್ಷಿಪ್ತವಾಗಿ, ಮನವರಿಕೆ ಮಾಡುವಂತೆ ಸಾವಧಾನವಾಗಿ ಉತ್ತರಿಸಬೇಕು. ಯಾವುದೇ ವಿಷಯ ಕೇಳಲೇಬೇಕು ಎಂಬ ಒತ್ತಡ ಮಾಡಲೇಬಾರದು.

ಬಾಲ್ಯದ ದ್ವಿತೀಯ ಘಟ್ಟ: (6ರಿಂದ 11ವರ್ಷ)
ಈ ಘಟ್ಟದಲ್ಲಿ ಮಕ್ಕಳಲ್ಲಿ ಚಿಂತಿಸುವ, ಅರಿಯುವ, ಕಥೆಗಳನ್ನು ಕೇಳುವ ಸ್ವಭಾವ ಬೆಳೆಯುತ್ತದೆ. ಈ ವಯಸ್ಸಿನಲ್ಲಿ ಮಕ್ಕಳಿಗೆ ಹೆಚ್ಚು ಮಾರ್ಗದರ್ಶನದ ಅಗತ್ಯವಿರುತ್ತದೆ. ಅವರ ಮಾತುಗಳ ಶಬ್ಧ ಕೋಶಗಳಲ್ಲಿ ಹೆಚ್ಚಳವುಂಟಾಗುತ್ತದೆ. ಓದುವ ಹವ್ಯಾಸವೂ ಬೆಳೆಯುತ್ತದೆ. ಈ ಸಂದರ್ಭದಲ್ಲಿ ಮಕ್ಕಳಿಗೆ ಪ್ರೋತ್ಸಾಹ, ಕ್ಷಮೆ, ಹುಮ್ಮಸ್ಸು ಎಲ್ಲವನ್ನು ನೀಡಬೇಕು. ಯಾವ ವಿಷಯವನ್ನು ಅವರು ಕೇಳುತ್ತಾರೆ ಮತ್ತು ಅದನ್ನು ಪ್ರಯೋಗಕ್ಕೆ ತರಲು ಪ್ರಯತ್ನಿಸುತ್ತಾರೆ. ಆಗ ಅವರಿಗೆ ಹೆಚ್ಚು ಧೈರ್ಯ ತುಂಬುವ ಅಗತ್ಯ ಇದೆ.

ಯೌವ್ವನ ಘಟ್ಟ: (12-18)
ಈ ಘಟ್ಟದಲ್ಲಿ ಮಕ್ಕಳ ಗಮನ ಸ್ವತಃ ತಮ್ಮ ಸ್ವಂತದ ಮೇಲೆ ಕೇಂದ್ರೀಕೃತವಾಗುತ್ತದೆ. ಈ ವಯಸ್ಸಿನಲ್ಲಿ ಅವರ ಬಗ್ಗೆ ಮಾತುಕತೆ ನಡೆಯಲಿ, ಏನಾದರೂ ಅನಿಸಿಕೆ ಹೇಳಲಿ ಎಂಬುದನ್ನೆಲ್ಲಾ ಬಯಸುತ್ತದೆ. ಅವರಿಗೆ ತಮ್ಮ ಅಭಿಪ್ರಾಯ ಅಭಿವ್ಯಕ್ತಗೊಳಿಸುವ ಇಚ್ಛೆ ಇರುತ್ತದೆ. ಅವರಿಂದ ಯಾರಾದರೂ ಸಲಹೆ ಅಭಿಪ್ರಾಯಗಳನ್ನು ಕೇಳಿದರೆ ಅವರಿಗೆ ತುಂಬಾ ಸಂತೋಷವಾಗುತ್ತದೆ. ನಮಗೂ ಈ ಲೋಕದಲ್ಲಿ ಗೌರವ, ಸ್ಥಾನಮಾನ ಇದೆ ಎಂದು ಭಾವಿಸುತ್ತಾರೆ. ಈ ವಯಸ್ಸಿನಲ್ಲಿ ಅವರಲ್ಲಿ ಅತೀ ಹೆಚ್ಚು ಆತ್ಮವಿಶ್ವಾಸ ತುಂಬುವ ಕೆಲಸ ಮಾಡಬೇಕು. ಅವರ ಮಾತು, ಅಭಿಪ್ರಾಯ ಸಲಹೆಗಳನ್ನು ಗಮನವಿಟ್ಟು ಕೇಳಬೇಕು. ಈ ವಯಸ್ಸಿನ ವಿಶೇಷತೆ ಏನೆಂದರೆ ಇದರಲ್ಲಿ ಮಕ್ಕಳಿಗೆ ಶೌರ್ಯ, ಧೈರ್ಯದ ಘಟನೆಗಳು ಕಥೆಗಳನ್ನು ಇಷ್ಟಪಡುತ್ತಾರೆ. ಈಗ ನಾವು ಮಕ್ಕಳಲ್ಲಿ ಅಂಥ ವೀಡಿಯೋಗಳನ್ನು, ಗೇಮ್‌ಗಳನ್ನು ಇಷ್ಟಪಡುವುದು ಕಾಣುತ್ತದೆ. ಮಕ್ಕಳಿಗೆ ಸಹಾಬಿಯವರ ಕುರಿತಾದ ಘಟನೆಗಳನ್ನು ಹೇಳಬೇಕು. ಸಮಾಜದಲ್ಲಿ ಶಾಂತಿ ಸುರಕ್ಷೆ ಕಾಪಾಡಲು ನಾವು ಸಕಾರಾತ್ಮಕವಾಗಿ ಮುಂದೆ ಬರಬೇಕೆಂಬ ಪ್ರಜ್ಞೆ ಅವರಲ್ಲಿ ಮೂಡಿಸಬೇಕು. ಈ ವಯಸ್ಸಿನಲ್ಲಿ ನಾವು ಮಕ್ಕಳ ಮನಸ್ಸಲ್ಲಿ ಯಾವ ಸಿದ್ಧಾಂತ ಪ್ರತಿಪಾದನೆಯನ್ನು ಮೂಡಿಸುತ್ತೇವೆ ಅದು ಸಮಾಜಕ್ಕೆ ಫಲಪ್ರದವಾಗಿ ಮುಂದೆ ಬರುತ್ತದೆ.

LEAVE A REPLY

Please enter your comment!
Please enter your name here