ಕತರ್-ಭಾರತ ವ್ಯಾಪಾರ ವಹಿವಾಟಿ‌ನಲ್ಲಿ ಶೇ.63ರಷ್ಟು ಹೆಚ್ಚಳ

0
464

ಸನ್ಮಾರ್ಗ ವಾರ್ತೆ

ಕತರ್: ಭಾರತಕ್ಕೆ ಅನಿಲ ರಫ್ತು ಹೆಚ್ಚಳವಾಗಿರುವ ಪರಿಣಾಮವಾಗಿ ಕತರ್ ಹಾಗೂ ಭಾರತದ ನಡುವಿನ ಪರಸ್ಪರ ವ್ಯಾಪಾರ ವ್ಯವಹಾರಗಳು 2021-2022ರ ಅವಧಿಯಲ್ಲಿ ಶೇ.63ರಷ್ಟು ಹೆಚ್ಚಳವಾಗಿದ್ದು,1500 ಕೋಟಿ ಡಾಲರ್‌ಗೆ ತಲುಪಿರುವುದಾಗಿ ಕೇಂದ್ರ ವಾಣಿಜ್ಯ ಸಚಿವಾಲಯ ಬಿಡುಗಡೆಗೊಳಿಸಿದ ವರದಿಯು ತಿಳಿಸಿದೆ. ಕತರ್‌ನಿಂದ ಭಾರತವು ಅತೀ ಹೆಚ್ಚು ಅನಿಲ ಆಮದು ಮಾಡಿಕೊಳ್ಳುತ್ತಿದೆ. ಜಾಗತಿಕ ಮಟ್ಟದಲ್ಲಿ ಶೇ.50ರಷ್ಟು ಅನಿಲವನ್ನು ಕತರ್ ಭಾರತಕ್ಕೆ ರಫ್ತು ಮಾಡುತ್ತಿದೆ.

ಕತರ್‌ನಿಂದ ಭಾರತವು ಎಥಿಲಿನ್, ಪ್ರೊಪೈಲಿನ್, ಅಮೊನಿಯ, ಯುರಿಯಾ, ಪೊಲಿಎಥಿಲಿನ್‌ನ್ನು ಆಮದು ಮಾಡಿಕೊಳ್ಳುತ್ತಿದೆ. ಈ ಹಿಂದೆ ಕತರ್‌ನಿಂದ ಆಮದು ಮಾಡಿಕೊಳ್ಳುವ ದೇಶಗಳ ಪಟ್ಟಿಯಲ್ಲಿ  ಭಾರತ ನಾಲ್ಕನೇ ಸ್ಥಾನದಲ್ಲಿರುವಂತೆ ನೋಡಿಕೊಳ್ಳಲಾಗುವುದು ಎಂದು ಕತರ್ ದೂತವಾಸ ಹೇಳಿತ್ತು.

ಕೇಂದ್ರ ವಾಣಿಜ್ಯ ಸಚಿವಾಲಯದ ವರದಿಯ ಪ್ರಕಾರ 2021-2022ರ ಕಾಲಾವಧಿಯಲ್ಲಿ ಭಾರತ ಕತರ್‌ನಿಂದ 590 ಕೋಟಿ ಡಾಲರ್ ಮೌಲ್ಯದ ಪ್ರಾಕೃತಿಕ ಅನಿಲ ಆಮದು ಮಾಡಿಕೊಂಡಿತ್ತು. ಪ್ರತೀ ವರ್ಷದ ದತ್ತಾಂಶಗಳ ಪ್ರಕಾರ ವ್ಯಾಪಾರ ವ್ಯವಹಾರವು ಶೇ.88ರಷ್ಟು ಹೆಚ್ಚಳವಾಗಿದೆ. 1990ರಲ್ಲಿ 25 ವರ್ಷಗಳ ಕಾಲಾವಧಿಗೆ ಪ್ರತೀ ವರ್ಷ 75 ಲಕ್ಷ ಟನ್ ಪ್ರಾಕೃತಿಕ ಅನಿಲ ಖರೀದಿಗೆ ಗುತ್ತೆ ಮಾಡಿಕೊಳ್ಳಲಾಗಿತ್ತು. 2015ರ ಒಪ್ಪಂದ ಪ್ರಕಾರ ಪ್ರತೀ ವರ್ಷ ಒಂದು ದಶಲಕ್ಷ ಟನ್‌ಗೂ ಹೆಚ್ಚು ಪ್ರಾಕೃತಿಕ ಅನಿಲವನ್ನು ಭಾರತವು ಕತರ್‌‌ನಿಂದ ಆಮದು ಮಾಡಿಕೊಳ್ಳುವುದಾಗಿ ಒಡಂಬಡಿಕೆಯಲ್ಲಿತ್ತು.

ಎರಡು ದೇಶಗಳ ನಡುವೆ ವ್ಯಾಪಾರದಲ್ಲಿ ಅತ್ಯಂತ ಹೆಚ್ಚು ಪ್ರಾಬಲ್ಯವು ಇಂಧನ ಕ್ಷೇತ್ರದಲ್ಲಿದೆ ಎಂದು ಕತರ್‌ಗೆ ಭೇಟಿ ನೀಡಿದ ವೇಳೆ, ಉಪರಾಷ್ಟ್ರಪತಿ ವೆಂಕಯ್ಯ ನಾಯಿಡು ಹೇಳಿದ್ದರು. ಕಳೆದ ಮೂರು ವರ್ಷಗಳಿಂದ ಭಾರತದ ವಿವಿಧ ಬಂದರುಗಳ ಮೂಲಕ ಸಂಬಂಧ ಸ್ಥಾಪಿಸಿಕೊಂಡು ಭಾರತದಿಂದ ಕತರ್‌ಗೆ ನಡೆಯುತ್ತಿರುವ ರಫ್ತಿನಲ್ಲಿ ಗಣನೀಯವಾಗಿ ಹೆಚ್ಚಳವಾಗಿದೆ.

1500ಕ್ಕೂ ಹೆಚ್ಚು ಭಾರತೀಯ ಕಂಪೆನಿಗಳು ಕತರ್‌ನಲ್ಲಿವೆ. 100ಕ್ಕೂ ಹೆಚ್ಚು ಭಾರತೀಯ ಕಂಪೆನಿಗಳು ಕತರ್ ಫೈನಾನ್ಸಿಯಲ್ ಸೆಂಟರ್‌ನಲ್ಲಿ ನೋಂದಾಯಿಸಿಕೊಂಡಿವೆ. ಎರಡು ಕಂಪೆನಿಗಳು ಕತರ್ ಫ್ರೀ ಝೋನ್‍ನಲ್ಲಿ ರಿಜಿಸ್ಟರ್ ಮಾಡಿಸಿಕೊಂಡಿವೆ. ಉಪ ರಾಷ್ಟ್ರಪತಿಯವರ ಅಧಿಕೃತ ಭೇಟಿಯ ವೇಳೆ ಭಾರತ-ಕತರ್ ಸ್ಟಾರ್ಟಪ್ ಬ್ರಿಡ್ಜ್‌ಗೆ ಚಾಲನೆ ನೀಡಲಾಗಿತ್ತು.