ಪಾಕಿಸ್ತಾನಕ್ಕೆ ಹೋಗಿ ಎಂದು ಬೆದರಿಕೆಯೊಡ್ಡಿ, ಮುಸ್ಲಿಂ ಕುಟುಂಬದ ಮೇಲೆ 40 ಮಂದಿ ದುಷ್ಕರ್ಮಿಗಳ ತಂಡದಿಂದ ಹಲ್ಲೆ

0
1542

ಹೊಸದಿಲ್ಲಿ,ಮಾ.23: ಪಾಕಿಸ್ತಾನಕ್ಕೆ ಹೋಗಿ ಎನ್ನುತ್ತಾ ಬಂದ ನಲ್ವತ್ತು ಮಂದಿಯಿದ್ದ ದುಷ್ಕರ್ಮಿಗಳ ತಂಡ ಮುಸ್ಲಿಮ್ ಕುಟುಂಬಕ್ಕೆ ಕ್ರೂರವಾಗಿ ಥಳಿಸಿದೆ. ಕುಟುಂಬದ ನಾಲ್ವರಿಗೆ ಯದ್ವಾತದ್ವಾ ಹೊಡೆದು ಬೆದರಿಕೆಯೊಡ್ಡಿದ ದೇಶವನ್ನೆ ನಿಬ್ಬೆರಗುಗೊಳಿಸಿದ ಘಟನೆ ಗುರುಗ್ರಾಮ ಜಿಲ್ಲೆಯ ಬೋಂಡ್ಸಿ ಎಂಬಲ್ಲಿ ನಡೆದಿದೆ.

ಹೋಳಿ ಆಚರಣೆಯ ದಿನವಾದ ನಿನ್ನೆ ಸಂಜೆ ಐದು ಗಂಟೆಗೆ ಘಟನೆ ನಡೆಯಿತು ಎಂದು ಎಸಿಪಿ ಸಂಶೀರ್ ಸಿಂಗ್ ಹೇಳಿದರು. ಮನೆಯ ಹೊರಗೆ ಮಕ್ಕಳು ಕ್ರಿಕೆಟ್ ಆಡುತ್ತಿದ್ದರು. ಘಟನೆಗೆ ಕ್ರಿಕೆಟಿನಿಂದ ಆರಂಭಗೊಂಡ ಜಗಳ ಕಾರಣವಾಗಿದೆ ಎಂದು ಎಸಿಪಿ ಹೇಳಿದ್ದಾರೆ.

ಗಾಯಾಳು ಶಾಹಿದ್‍ರ ಹೇಳಿಕೆಯ ಪ್ರಕಾರ ಬೀದಿಯಲ್ಲಿ ಕ್ರಿಕೆಟ್ ಆಡುತ್ತಿದ್ದಾಗ ಕ್ರಿಕೆಟ್ ನಿಲ್ಲಿಸುವಂತೆ ಕೆಲವರು ಬಂದು ಹೇಳಿದ್ದಾರೆ. ಇದಕ್ಕೆ ಮಕ್ಕಳು ತಯಾರಾಗಲಿಲ್ಲ. ನಂತರ ದುಷ್ಕರ್ಮಿಗಳು ಒಗ್ಗೂಡಿ ಕಬ್ಬಿಣದ ಸಲಾಕೆ, ಹಾಕಿ ಸ್ಟಿಕ್‍ನೊಂದಿಗೆ ಬಂದು ಹಲ್ಲೆ ಮಾಡಿದರು. ಹೊಡೆಯಬೇಡಿ ಎಂದು ಎಷ್ಟೇ ಬೇಡಿದರು ತಂಡ ಹೊಡೆಯುವುದನ್ನು ನಿಲ್ಲಿಸಿಲ್ಲ. ಪೆಟ್ಟು ತಡೆಯಲಾಗದೆ ಓಡಿದವರನ್ನು ಹಿಂಬಾಲಿಸಿ ಕೊಂಡು ಹೋಗಿ ಹೊಡೆದಿದ್ದಾರೆ ಎಂದು ಶಾಹಿದ್ ಹೇಳಿದ್ದಾನೆ. ನಂತರ ಶಾಹಿದ್‍ನನ್ನು ಮರಕ್ಕೆ ಕಟ್ಟಿ ಹೊಡೆದಿದ್ದಾರೆ. ಈ ಕುರಿತು ಪೊಲೀಸರಿಗೆ ದೂರು ನೀಡಿದಾಗ ಮೊದಲು ಕ್ರಮ ಜರಗಿಸಲು ಪೊಲೀಸರು ಮುಂದೆ ಬಂದಿಲ್ಲ ಎಂದು ಆರೋಪವೂ ಕೇಳಿ ಬಂದಿದೆ.