ಲಿಬಿಯಾ: ವಿಮಾನ ನಿಲ್ದಾಣದಿಂದ ಏಳು ಮಂದಿ ಭಾರತೀಯರ ಅಪಹರಣ

0
669

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಅ.9: ಏಳು ಮಂದಿ ಭಾರತೀಯರು ಲಿಬಿಯದಲ್ಲಿ ಅಪರಹಣಕ್ಕೊಳಗಾಗಿದ್ದಾರೆಂದು ಕೇಂದ್ರ ಸರಕಾರ ಹೇಳಿದೆ. ಸೆಪ್ಟಂಬರ್ 14ರಂದು ಅಪಹರಣಗೊಂಡಿರುವ ಅವರ ಬಿಡುಗಡೆಗಯ ಯತ್ನ ನಡೆಯುತ್ತಿದೆ ಎಂದು ವಿದೇಶಿ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ ತಿಳಿಸಿದರು.

ಲಿಬಿಯದಲ್ಲಿ ಇವರು ತೈಲೋತ್ಪಾದನೆ, ವಿತರಣಾ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದರು. ಇವರು ಆಂಧ್ರ ಪ್ರದೇಶ, ಬಿಹಾರ, ಗುಜರಾತ್, ಉತ್ತರ ಪ್ರದೇಶದ ನಿವಾಸಿಗಳಾಗಿದ್ದಾರೆ. ಆಶ್‍ವಾರಿಫ್ ಎಂಬ ಸ್ಥಳದಲ್ಲಿ ಅಪಹರಣ ನಡೆದಿದೆ. ಊರಿಗೆ ಬರಲು ಟ್ರಿಪೊಲಿ ವಿಮಾನ ನಿಲ್ದಾಣಕ್ಕೆ ಹೊರಟು ಬರುತ್ತಿದ್ದಾಗ ಅಪಹರಣಕಾರರು ಏಳು ಮಂದಿಯನ್ನು ಅಪಹರಿಸಿದರು. ಇವರ ಬಿಡುಗಡೆಗಾಗಿ ಕೇಂದ್ರ ಸರಕಾರ ಲಿಬಿಯದ ಸರಕಾರ ಮತ್ತು ಇತರ ಅಂತಾರಾಷ್ಟ್ರೀಯ ಸಂಘಟನೆಗಳನ್ನು ಸಂಪರ್ಕಿಸಿದೆ ಎಂದು ಶ್ರೀವಾಸ್ತವ ತಿಳಿಸಿದರು.

ಇದೇ ವೇಳೆ ಟುನೀಷ್ಯದ ಭಾರತೀಯ ದೂತವಾಸ ಇವರ ಬಿಡುಗಡೆಗೆ ಪ್ರಯತ್ನ ಆರಂಭಿಸಿದೆ. ಏಳು ಮಂದಿಯೂ ಸುರಕ್ಷಿತವಾಗಿದ್ದಾರೆ . ಅವರು ಅವರ ಕುಟುಂಬವನ್ನು ನಿರಂತರ ಸಂಪರ್ಕಿಸುತ್ತಿದ್ದಾರೆ. ಶೀಘ್ರವೇ ಅವರನ್ನು ಬಿಡುಗಡೆಗೊಳಿಸುವ ಭರವಸೆಯನ್ನು ನೀಡಿದ್ದೇವೆ ಎಂದು ಶ್ರೀವಾಸ್ತವ ಹೇಳಿದರು.

ಸುರಕ್ಷೆಯ ಕಾರಣಗಳಿಂದ ಲಿಬಿಯಕ್ಕೆ ಹೋಗುವವರಿಗರ 2015ರಲ್ಲಿಯೇ ಮುನ್ನೆಚ್ಚರಿಕೆ ನೀಡಲಾಗಿತ್ತು ಎಂದು ವಿದೇಶ ಸಚಿವಾಲಯ ತಿಳಿಸಿದೆ. 2016ರಿಂದ ಲಿಬಿಯಕ್ಕೆ ಪ್ರಯಾಣ ನಿಷೇಧ ಮುಂದುವರಿಯುತ್ತಿದೆ. ಲಿಬಿಯದಲ್ಲಿ ಈ ಮೊದಲೂ ಭಾರತೀಯ ಅಪಹರಣ ಘಟನೆ ನಡೆದಿದೆ. 2015ರಲ್ಲಿ ನಾಲ್ವರು ಭಾರತೀಯರ ಅಪಹರಣವಾಗಿತ್ತು. ನಂತರ ಅವರನ್ನು ಬಿಡುಗಡೆಗೊಳಿಸಲಾಗಿತ್ತು.