ಯುನೈಟೆಡ್ ನ್ಯಾಶನ್, ಜೂ. 20: ಕಳೆದ ವರ್ಷ 70 ದಶಲಕ್ಷ ಮನುಷ್ಯರು ನಿರಾಶ್ರಿತರಾಗಿದ್ದಾರೆ ಎಂದು ವಿಶ್ವಸಂಸ್ಥೆ ನಿರಾಶ್ರಿತರ ಏಜೆನ್ಸಿ ವರದಿ ತಿಳಿಸಿದೆ. ಕಳೆದ ಎಪ್ಪತ್ತು ವರ್ಷಗಳಲ್ಲೇ ಕಳೆದ ವರ್ಷ ಅತ್ಯಧಿಕ ಮಂದಿ ನಿರಾಶ್ರಿತರಾದರು. ಸಿರಿಯ ಸಹಿತ ಮಧ್ಯಪ್ರಾಚ್ಯ ದೇಶಗಳಿಂದ ನಿರಾಶ್ರಿತರ ಪ್ರವಾಹವೇ ಹರಿದು ಬಂದಿದೆ ಎಂದು ವರದಿ ತಿಳಿಸಿದೆ. ಅವರವರ ದೇಶದಿಂದ ಹೊರದಬ್ಬಲ್ಪಟ್ಟವರಲ್ಲಿ ಮಕ್ಕಳ ಸಂಖ್ಯೆ ಅತೀ ಹೆಚ್ಚಾಗಿದೆ. ರಾಜಕೀಯ, ಸೈನಿಕ ಘರ್ಷಣೆಗಳಿಂದ ಹೊರದಬ್ಬಲಾದ ಜನರಿಗೆ ನೆರವಾಗಲು ಅಂತಾರಾಷ್ಟ್ರೀಯ ವ್ಯವಸ್ಥೆ ವಿಫಲವಾಯಿತು ಎಂದು ವರದಿ ಅಡಿಗೆರೆ ಎಳೆದು ತೋರಿಸಿದೆ. ವಿಶ್ವ ನಿರಾಶ್ರಿತರ ದಿನಾಚರಣೆಗಿಂತ ಮೊದಲು ವರದಿಯನ್ನು ಬಹಿರಂಗಪಡಿಸಲಾಗಿದ್ದು ಯುದ್ಧ, ಕಲಹ ಮಾತ್ರವಲ್ಲ ವಂಶ ನಾಶದ ಬೆದರಿಕೆಯಿಂದ ಜನರಿಗೆ ಸುರಕ್ಷೆ ಒದಗಿಸಲು ಸಾಧ್ಯವಾಗದಿದ್ದರೆ ನಿರಾಶ್ರಿತರ ಪ್ರವಾಹ ಇನ್ನಷ್ಟು ಹೆಚ್ಚುವುದು ಶತಸಿದ್ಧ ಎಂದು ವರದಿ ಮುನ್ನೆಚ್ಚರಿಕೆ ನೀಡಿದೆ.
ಅತೀ ಹೆಚ್ಚು ನಿರಾಶ್ರಿತರು ಸಿರಿಯದಿಂದ ಬಂದಿದ್ದಾರೆ. ಅಲ್ಲಿಂದ ಸುಮಾರು ಹತ್ತು ಲಕ್ಷ ದಶಲಕ್ಷ ಮಂದಿ ನಿರಾಶ್ರಿತರ ವಿವಿಧೆಡೆಗೆ ಪಲಾಯನ ಹೂಡಿದರು. ಅಫ್ಘಾನಿಸ್ತಾನ, ದಕ್ಷಿಣ ಸುಡಾನ್, ಮ್ಯಾನ್ಮಾರ್, ಸೋಮಾಲಿಯಗಳು ನಿರಾಶ್ರಿತರ ಹರಿವಿನಲ್ಲಿ ನಂತರದ ಸ್ಥಾನವನ್ನು ಪಡೆದುಕೊಂಡಿವೆ. ಯೆಮನ್ ಸಹಿತ ಇತರ ಮಧ್ಯಪ್ರಾಚ್ಯದ ದೇಶಗಳಿಂದಲೂ ನಿರಾಶ್ರಿತರ ಸಂಖ್ಯೆ ಹೆಚ್ಚಳವಾಗುತ್ತಿದೆ. ಲೆಬನಾನ್, ಜೋರ್ಡಾನ್ ಗಳ ಪರಿಸ್ಥಿತಿಯೂ ಭಿನ್ನವಾಗಿಲ್ಲ. ಘರ್ಷಣೆ ಯುದ್ಧಗಳಲ್ಲಿ ಮಕ್ಕಳು ಮಹಿಳೆಯರು ಹೆಚ್ಚು ಬಲಿಯಾಗುತ್ತಾರೆ. ನಿರಾಶ್ರಿತರ ಪುನರ್ವಸತಿ, ಆರೋಗ್ಯ ಇತ್ಯಾದಿ ಕೆಲಸಗಳಿಗೆ ಸಂಪನ್ಮೂಲದ ಕೊರತೆಯಿರುವುದು ಇನ್ನೊಂದು ದೊಡ್ಡ ಸಮಸ್ಯೆ ಎಂದು ವರದಿ ಹೇಳಿದೆ.












