ಅಹ್ಮದಾಬಾದ್, ಜೂ. 20: ಗುಜರಾತಿನಲ್ಲಿ ಓರ್ವ ಮಹಿಳಾ ಸರಪಂಚ್ ರ ಪತಿಯನ್ನು ಆರು ಮಂದಿ ಸೇರಿ ಲಾಠಿ, ಕಬ್ಬಿಣದ ಪೈಪ್ನಿಂದ ಹೊಡೆದು ಕೊಂದು ಹಾಕಿದ ಘಟನೆ ಬುಧವಾರ ನಡೆದಿದೆ. ಸರಪಂಚರ ಪತಿ ಬೈಕಲ್ಲಿ ರಣಾಪುರ-ಬರ್ವಾಲಾ ರಸ್ತೆಯಲ್ಲಿ ಸಂಚರಿಸುತ್ತಿದ್ ದವೇಳೆ ತಡೆದ ದುಷ್ಕರ್ಮಿಗಳ ಗುಂಪು ಮಾರಣಾಂತಿಕವಾಗಿ ಹಲ್ಲೆ ನಡೆಸಿತ್ತು. ಗಂಭೀರ ಗಾಯಗೊಂಡಿದ್ದ ಸರಪಂಚರ ಪತಿ ಮಾಂಜಿಭಾಯಿ ಸೋಳಂಕಿ ತನ್ನ ಸಂಬಂಧಿಕರೊಬ್ಬರಿಗೆ ಘಟನೆಯ ವಿವರ ತಿಳಿಸಿದ್ದರು. ಮೊದಲು ಅವರ ಬೈಕ್ಗೆ ಕಾರು ಢಿಕ್ಕಿ ಹೊಡೆಯಿತು. ನಂತರ ಕಾರಿನಲ್ಲಿದ್ದ ಆರು ಮಂದಿ ಅವರನ್ನು ಹೊಡೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಸೋಲಂಕಿಯ ಒಂದು ವೀಡಿಯೊ ವೈರಲ್ ಆಗಿದ್ದು ಅದರಲ್ಲಿ ಅವರು ಪ್ರಜ್ಞೆ ಕಳಕೊಂಡು ಬಿದ್ದ ಅವಸ್ಥೆಯಲ್ಲಿ ಕಾಣಿಸಿಕೊಂಡಿದ್ದಾರೆ. ಇದೇವೇಳೆ ಅವರ ಪತ್ನಿ ಕಳೆದ ವರ್ಷ ಪೊಲೀಸರಿಂದ ರಕ್ಷಣೆ ನೀಡುವಂತೆ ಮನವಿ ಮಾಡಿದ್ದರು. ಕಾಟಿ ಸಮುದಾಯದವರು ಹಳೆಯ ಹಗೆತನ ತೀರಿಸಿಕೊಳ್ಳಲು ಹವಣಿಸುತ್ತಿದ್ದಾರೆ ಎಂದು ಅವರು ಮನವಿಯಲ್ಲಿ ತಿಳಿಸಿದ್ದರು.












