ಸರ್ದಾರ್ ಜಿ ನಿಮ್ಮ ಪ್ರತಿಮೆಗಾಗಿ ಬೀದಿಪಾಲಾದವರ ಬಗ್ಗೆ ಗೊತ್ತೇ?

1
2128

ಮಾನ್ಯ ಸರ್ದಾರ್ ಪಟೇಲ್‍ಜಿ,
ಈ ನಾಡಿನ ಸ್ವಾತಂತ್ರ್ಯಕ್ಕೆ ಹೋರಾಡಿರುವ ನಿಮ್ಮ ಆತ್ಮ ಈಗಲೂ ನೀವು ಅತಿಹೆಚ್ಚು ಪ್ರೀತಿಸುವ ಈ ಮಾತೃಭೂಮಿಯಲ್ಲಿ ಸೇರಿಕೊಂಡಿದೆ ಎಂದು ನಾನು ಈಗಲೂ ನಂಬುತ್ತಿದ್ದೇನೆ. ರಾಜರುಗಳ ಕೈಯಿಂದ ಭಾರತವನ್ನು ವಿಮೋಚಿಸಿದ್ದು ನಿಮ್ಮ ಕಾರ್ಯಾಚರಣೆಯಾಗಿತ್ತು. ಬ್ರಿಟಿಷರ ಕಠಿಣ ತೆರಿಗೆ ಪದ್ಧತಿಯಿಂದ ರೈತರನ್ನು ರಕ್ಷಿಸಿದ್ದು ನೀವು ತಂದ ಕಾನೂನಿನ ಮೂಲಕವಾಗಿತ್ತು. ಸ್ವತಂತ್ರ ಭಾರತದ ಮೊದಲ ಗೃಹ ಸಚಿವರು ಎಂಬ ನೆಲೆಯಲ್ಲಿ ಅಕ್ರಮಗಳ ವಿರುದ್ಧ ನೀವು ಕೈಗೊಂಡ ಜಾತ್ಯತೀತವೂ ಶಕ್ತಿ ಶಾಲಿಯೂ ಆದ ನಿಲುವುಗಳನ್ನು ಗಾಂಧೀಜಿಯವರ ಪ್ರಶಂಸೆಗೂ ಪಾತ್ರವಾಗಿತ್ತು.

ಭಾರತದ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ಸರ್ದಾರ್ ಎಂಬ ವಿಶೇಷಣದೊಂದಿಗೆ ಒಂದು ಮಹಾಮೇರು ವ್ಯಕ್ತಿತ್ವವಾಗಿ ನೀವು ನೆಲೆಸಿದಿರಿ. ಆದರೆ ನಿಮಗೆ ಗೊತ್ತಾ! ನಿಮ್ಮ ಪರಂಪರೆ ಯನ್ನು ಮೂಲೆಗೆಸೆದು 182 ಮೀಟರ್ ಎತ್ತರವಿರುವ, ಜಗತ್ತಿನ ಅತಿದೊಡ್ಡ ಪ್ರತಿಮೆಯಾಗಿ ನಿಮ್ಮನ್ನು ಪರಿವರ್ತಿಸಲಾಗಿದೆ. ಯಾರು ನಿಮ್ಮ ಈ ಹೊಸ ಅವತಾರದ ನಿರ್ಮಾಣದ ಹಿಂದಿರುವುದು ಎಂಬುದನ್ನು ಊಹಿಸಲು ನಿಮ್ಮಿಂದಾದೀತೇ?

ಆದಿವಾಸಿ ಸಮೂಹ ವಾಸಿಸುವ ಸ್ಥಳದಲ್ಲಿ ರಾತ್ರಿ ಹಗಲು ಕೆಲಸ ಮಾಡಿ ನಿಮ್ಮ ಪ್ರತಿಮೆಯನ್ನು ಎಬ್ಬಿಸಿದ್ದು ಚೀನಾದವರು. ಅವರ ಜೊತೆ ಕೆಲವಾರು ಊರಿನ ಕಾರ್ಮಿಕರೂ ಇದ್ದರು.
ಯಾರ ಭೂಮಿಯಲ್ಲಿ ನಿಮ್ಮ ಪ್ರತಿಮೆಯನ್ನು ಎಬ್ಬಿಸಲಾಯಿತೆಂದು ಈಗ ನೀವು ಕೇಳುತ್ತಿರಬಹುದು. ಇದು ಯಾರ ಯೋಜನೆ ಎಂದು ನಿಮಗೆ ಈಗ ಸಂದೇಹವಾಗುತ್ತಿರಬಹುದು. ನಿಮ್ಮ ಪ್ರತಿಮೆ ಇರುವ ಆ ಹೊಳೆಗಳು, ಬೆಟ್ಟ ಕಾಡುಗಳಿರುವ ಆ ಪ್ರದೇಶ ವಾಸ್ತವದಲ್ಲಿ ಆದಿ ವಾಸಿಗಳಿಗೆ ಸೇರಿರುವುದಾಗಿದೆ. ನೀವೂ, ಗಾಂಧೀಜಿಯೂ ನೆಹರೂ ಸೇರಿದ ನಾಯಕರು ಭರವಸೆ ಕೊಟ್ಟಿರುವ, ಪಂಚಶೀಲ ತತ್ವಗಳ ಸುರಕ್ಷೆ ದೃಢಪಡಿಸಿದ ಅದೇ ಗ್ರಾಮೀಣ ಜನರ ಮಣ್ಣು ಅದು. ಭಾರತದ ಸಂವಿಧಾನದ ಶಿಲ್ಪಿಯಾದ ಬಾಬಾ ಸಾಹೇಬ್ ಅಂಬೇಡ್ಕರ್ ಐದನೆ ಶೆಡ್ಯೂಲ್‍ನಲ್ಲಿ ಸೇರಿಸಿ ಸಂರಕ್ಷಿಸಿದ ಅದೇ ಆದಿವಾಸಿಗಳಿಗೆ ಸೇರಿದ ಮಣ್ಣು ಇದು.

ಸಾಧು ಬೆಟ್ಟಿನ ಗುಡ್ಡದ ಮೇಲೆ ತಲೆಯೆತ್ತಿ ನಿಂತಾಗ ನಿಮಗೆ ನರ್ಮದಾ ನದಿಯ ತೀರಗಳು ಕಾಣಿಸುತ್ತವೆ. ಆ ಆದಿವಾಸಿಗಳ ಕೆಡವಿ ಹಾಕಿದ ಗುಡಿಸಲುಗಳು ಕೂಡ ಕಾಣಿಸುತ್ತವೆ.
ನಿಮಗೆ ನೆನಪಿದೆಯೇ? ಬಹಳಷ್ಟು ತ್ಯಾಗವನ್ನು ಸಹಿಸಿ ನಾಡ ರಾಜ್ಯಗಳನ್ನು ಒಗ್ಗೂಡಿಸಿ ನಿಮ್ಮ ನೇತೃತ್ವದಲ್ಲಿ ಪ್ರಜಾಪ್ರಭುತ್ವ ಆಧಾರಿತ ಏಕೀಕೃತ ಭಾರತವನ್ನು ಕಟ್ಟಿದ ಆ ದಿನಗಳು..? ನಿಮ್ಮ ಹೊಸ ಅವತಾರಕ್ಕೂ ಅವರು ಇರಿಸಿದ ಹೆಸರು ಐಕ್ಯ(ಯುನಿಟಿ) ಎಂದೇ ಆಗಿದೆ. ವಿರೋಧಾಭಾಸ ಎಂದು ಹೇಳಲೇ? ಆದಿವಾಸಿಗಳ ಭೂಮಿಯನ್ನು ಕಿತ್ತುಕೊಂಡಿದ್ದಷ್ಟೇ ಅಲ್ಲ. ಅವರ ಹಕ್ಕುಗಳನ್ನು ಕೂಡ ಕಬಳಿಸಿ ನಿಮ್ಮ ಪ್ರತಿಮೆಯನ್ನು ನಿಲ್ಲಿಸಲಾಗಿದೆ. ಇಷ್ಟು ಅಸಂಘಟಿತವಾದ ಮತ್ತು ಸ್ವಯಂ ಪರ್ಯಾಪ್ತರಾದ ಒಂದು ಸಮುದಾಯದ ಮೇಲೆ ಶಕ್ತಿ ಪ್ರಯೋಗಿಸಿ ಬಡಿದೋಡಿಸುವ ಕುರಿತು ನೀವು ಎಂದಾದರೂ ಯೋಚಿಸಿದ್ದೀರಾ..? ಜುನಾಗಡವನ್ನು ಭಾರತಕ್ಕೆ ಸೇರಿಸಿದಾಗ ನೀವು ಆ ರೀತಿ ಮಾಡಿದ್ದೀರಾ..?

ಪ್ರಿಯ ಸರ್ದಾರ್ ಜಿ , ದೇಶಕ್ಕೆ ಅನ್ನಕೊಡುವವರು ಎಂದು ನೀವು ಒಪ್ಪಿಕೊಂಡ ರೈತರು ಈ ಆದಿವಾಸಿಗಳು. ಅವರ ಜೀವನ ಪರಿಸ್ಥಿತಿ ದುಸ್ತರವಾಗಿರುವ ಕುರಿತು, ಗತಿಕೆಟ್ಟ ಆತ್ಮಹತ್ಯೆಯಲ್ಲಿ ಅಭಯ ಯಾಚಿಸ ಬೇಕಾದ ಕಾರಣದ ಕುರಿತು ನಿಮಗೆ ಅರಿವಿದೆಯೇ..?

ಗಾಂಧೀಜಿಯ ನಿರ್ದೇಶನದ ಪ್ರಕಾರ ಒಂದು ಕಾಲದಲ್ಲಿ ನೀವು ಈ ಜನತೆಗಾಗಿ ಬ್ರಿಟಿಷರ ವಿರುದ್ಧ ಹೋರಾಡಿದಿರಿ. ಇದೇ ಆಯುಧಗಳನ್ನೆತ್ತಿ ಈ ಬಡಜನರ ಭೂಮಿ, ಹೊಳೆ, ಕಾಡು, ಗುಡ್ಡ, ಮೀನುಗಾರಿಕೆ ಇತ್ಯಾದಿಗಳನ್ನೆಲ್ಲ ನವ ವಸಾಹತುಶಾಹಿ ಆಶಯಗಳಿ ಗೊಪ್ಪುವ ಈಗಿನ ಸರಕಾರ ಕಿತ್ತುಕೊಂಡಿದೆ. ಶ್ರೀಮಂತರು, ಶಕ್ತಿಶಾಲಿಗಳಾಗಿರುವವರ ಆಸ್ತಿಯ ಮೇಲೆ ಇವರ ಕೈ ಉದ್ದ ವಾಗುವುದಿಲ್ಲ. ಬದಲಾಗಿ ದುರ್ಬಲರಾದ ಆದಿವಾಸಿಗಳ ಭೂಮಿ ಯನ್ನು ನಿರ್ಲಜ್ಜವಾಗಿ ಅವರು ಕಿತ್ತುಕೊಳ್ಳುತ್ತಿದ್ದಾರೆ. ಸರ್ದಾರ್ ಜಿ, ನೀವು ಕನಸು ಕಂಡ ಭಾರತ ಇದಲ್ಲ. ಬಡಜನರ ಆಸ್ತಿಯನ್ನು ಹಲವು ವಿಧದಲ್ಲಿ ಅಪಹರಿಸುವವರು ಹೇಗೆ ನಿಮ್ಮ ಪರಂಪರೆಯಲ್ಲಿ ಹಕ್ಕೊತ್ತಾಯ ಮಂಡಿಸಲು ಸಾಧ್ಯ?

ಆ ಗುಡ್ಡದ ಮೇಲಿನಿಂದ ನೀವು ಒಮ್ಮೆ ಎಡಬದಿಗೆ ನೋಡಿ. ನರ್ಮದಾ ನದಿಗೆ ಸಮಾಂತರವಾದ 120 ಕಿಲೊಮೀಟರ್ ಉದ್ದದ ಆರು ಸಾಲಿನ ಮಾರ್ಗ ಕಾಣುವಿರಿ. 100ಕ್ಕೂ ಹೆಚ್ಚು ವರ್ಷ ಹಳೆಯ ಲಕ್ಷಾಂತರ ಮರಗಳನ್ನು ನಿರ್ದಯವಾಗಿ ಕಡಿದು ಆ ಮಾರ್ಗ ನಿರ್ಮಿಸಲಾಗಿದೆ.

ಒಂದು ಕಾಲದಲ್ಲಿ ಅಲ್ಪಸಂಖ್ಯಾತರು, ಆದಿವಾಸಿಗಳ ಕಲ್ಯಾಣಕ್ಕಾಗಿ ನಿಯೋಜಿಸಲಾಗಿದ್ದ ಸಮಿತಿಯ ಅಧ್ಯಕ್ಷರಾಗಿದ್ದವರು ನೀವು. ನಿಮ್ಮ ಪ್ರತಿಮೆ ಹೊಳೆಯಲಿಕ್ಕಾಗಿ ಅಂಧಕಾರಕ್ಕೆ ಸೆಯಲಾಗಿರುವ ಆದಿವಾಸಿಗಳ ಹಕ್ಕುಗಳ ಕುರಿತು ನಿಮಗೆ ಅರಿವಿದೆಯೇ? ಅವರು ವಾಸಿಸುತ್ತಿದ್ದ ಆರುಗ್ರಾಮಗಳ ಭೂಮಿಯನ್ನು ಕಾನೂನಿನಂತೆ ವಶಪಡಿಸಲಾಗಿಲ್ಲ. ಬ್ರಿಟಿಷರು ಕೂಡ ಮಾಡದಿ ದ್ದಂತಹ ರೀತಿಯಲ್ಲಿ ಎಕರೆಗೆ 80 ರೂಪಾಯಿ ಕೊಟ್ಟು ಅವರನ್ನು ಅಲ್ಲಿಂದ ಒಕ್ಕಲೆಬ್ಬಿಸಲಾಗಿದೆ. ಆದರೆ ಆ ಭೂಮಿಯಲ್ಲಿ ಅದ್ದೂರಿ ಹೊಟೇಲು ಗಳು, ಕನ್‍ವೆನ್ಶನ್ ಸೆಂಟರ್ ಗಳು ಎದ್ದು ನಿಂತವು. ಶ್ರೇಷ್ಠತಾ ಭರತ್ ಅಥವಾ ಸ್ವಾಮೀ ನಾರಾಯಣ ಕಾಂಪ್ಲೆಕ್ಸ್ ಎಂದೋ ಅದಕ್ಕೆ ಹೆಸರಿಡಲಾಗಿದೆ.

ಅಹಿಂಸೆಯ ಹೆಸರಿನಲ್ಲಿ ಭೂಮಿಯನ್ನು ವಶಪಡಿಸಿಕೊಂಡು ರೈತರಿಗೆ ನೀಡಿದ ನಿಮ್ಮ ಹೆಸರಿನಲ್ಲಿಯೇ ಹಿಂಸೆಯ ಮೂಲಕ ಈ ಭೂಮಿಯ ಅಪಹರಣ ನಡೆಯಿತು. ಇದು ಇತಿಹಾಸದಲ್ಲಿ ಸಾರ್ವಕಾಲಿಕ ವೈರುಧ್ಯವಾಗಿ ನೆಲೆಸಲಿದೆ. ರೈತರನ್ನು ಗ್ರಾಮಸ್ಥರನ್ನು ಸಂಘಟಿಸಿ ಬ್ರಿಟಿಷ್ ಸಾಮ್ರಾಜ್ಯ ಶಾಹಿಯ ವಿರುದ್ಧ ಹೋರಾಡಿದ್ದ ನೀವು ಈಗ ಇರುತ್ತಿದ್ದರೆ ಈ ಅಕ್ರಮದ ವಿರುದ್ಧವೂ ಹೋರಾಡುತ್ತಿದ್ದಿರಿ.

ನಿಮ್ಮ ಹೆಸರಿನಲ್ಲಿ ಕಟ್ಟಲಾಗುತ್ತಿರುವ ಅಣೆಕಟ್ಟಿಗಾಗಿ(ಸರ್ದಾರ್ ಸರೋವರ್) ಸರಕಾರ ನಿರ್ದಯವಾಗಿ ಈ ಆದಿವಾಸಿಗಳನ್ನು ಒಕ್ಕಲೆಬ್ಬಿಸಿತು. ಒಂದು ರೂಪಾಯಿ ನಷ್ಟ ಪರಿಹಾರವನ್ನೂ ನೀಡದೆ ಅವರ ಭೂಮಿಯನ್ನು ಕಿತ್ತುಕೊಳ್ಳಲಾಯಿತು. ನಿಮ್ಮ ದಾರಿಯಲ್ಲೇ ಹೋರಾಟಕ್ಕಿಳಿದ ಅವರು ಅಂತಿಮವಾಗಿ ಜೈಲಿಗೆ ತಲುಪಿದರು. ನಿಮಗೆ ನೆನಪಿದೆಯೇ? 1943ರಲ್ಲಿ ನೀವು ಜೈಲನ್ನು ಶಾಂತಿಯ ಸ್ಥಳವೆಂದು ಕರೆದಿರುವುದು. 2013ರಲ್ಲಿ ಆದಿವಾಸಿಗಳನ್ನು ಒಕ್ಕಲೆಬ್ಬಿಸುವಾಗ ಬದಲಿ ಭೂಮಿ ಕೊಡುತ್ತೇವೆ ಎಂದು ನಂಬಿಕೆ ಹುಟ್ಟಿಸಲಾಗಿತ್ತು. ಆದರೆ ಅವರನ್ನು ವಂಚಿಸಲಾಯಿತು. ಅವರಿಂದ ಕಿತ್ತುಕೊಂಡ ಭೂಮಿಯಲ್ಲಿ ಟೂರಿಸಂ ಎತ್ತರಕ್ಕೆ ಬೆಳೆಯಿತು. ಆ ಗುಡ್ಡದ ಮೇಲಿನಿಂದ ಅವರ ಜೀವನದತ್ತೊಮ್ಮೆ ಕಣ್ಣು ಹಾಯಿಸಿರಿ. ಹೆಚ್ಚಿನ ನಷ್ಟಗಳಿಂದ ಅವರನ್ನು ರಕ್ಷಿಸಲು ನಿಮ್ಮಿಂದ ಸಾಧ್ಯವಾಗಲೂಬಹುದು.

1500ಕ್ಕೂ ಅಧಿಕ ಚೀನಾದ ಕಾರ್ಮಿಕರನ್ನು ಕರೆತಂದು ನಿಮ್ಮ ಪ್ರತಿಮೆಯನ್ನು ನಿರ್ಮಿಸಲಾಯಿತು ಎಂದು ಹೇಳುವಾಗ ನಾಚಿಕೆಯಾಗುತ್ತಿದೆ. ರಾತ್ರೆ ಹಗಲು ಪರಿಶ್ರಮಿಸಿದ ರೈತರ ಭೂಮಿಯಲ್ಲಿ ಈಗ ಎದ್ದು ನಿಂತಿರುವುದು ಶಾಪಿಂಗ್ ಮಾಲ್‍ಗಳು. ಫೈವ್ ಸ್ಟಾರ್ ಹೊಟೇಲುಗಳು, ಫುಡ್‍ಕೋರ್ಟ್‍ಗಳು… 35,000 ಕುಟುಂಬಗಳನ್ನು ಅಣೆಕಟ್ಟಿನ ಹೆಸರಿನಲ್ಲಿ ನರ್ಮದಾದಿಂದ ಒಕ್ಕಲೆಬ್ಬಿಸಲಾಯಿತು. ಅವರಲ್ಲಿ ಯಾರೂ ಕೂಡ ಒಮ್ಮೆಯೂ ನರ್ಮದಾ ತಟದ ಕುರಿತು ಅಥವಾ ಒಂದು ಬಿಂದು ನೀರನ್ನು ವ್ಯಾಪಾರ ಮಾಡಿದವರೇ ಅಲ್ಲ. ನಿಮ್ಮ ಹೋರಾಟದ ನಂತರದ ಪೀಳಿಗೆ ಯವರಾದ ಗುಜರಾತಿನ ರೈತರ ಅವಸ್ಥೆ ಅತ್ಯಂತ ಶೋಚನೀಯವಾಗಿದೆ. ಇದೇ ವೇಳೆ ಕಾರ್ಪೊರೇಟ್‍ಗಳು ಕೊಬ್ಬುತ್ತಲೇ ಇದ್ದಾರೆ.

ನಿಮ್ಮ ಆಶಯಗಳು ಒಂದೊಂದೇ ಪತನವಾಗು ತ್ತಿವೆ. ಭ್ರಷ್ಟಾಚಾರ, ಕೋಮುವಾದದ ವಿರುದ್ಧ ನಿಮ್ಮ ತಲೆಮಾರು ಜಾಗೃತವಾಗಿತ್ತು. ಆರ್ ಎಸ್ ಎಸ್ ನ ಕೋಮು ಅಜೆಂಡಾಗಳನ್ನು ತಿದ್ದಿಕೊಳ್ಳಬೇಕು, ಭಾರತದ ಭಾಗವಾಗಬೇಕೆಂದು ನೀವು ನೀಡಿದ ಉಪನ್ಯಾಸಗಳು ಮತ್ತು ಗೊಲ್ವಾಲ್ಕರ್‍ರಿಗೆ ಬರೆದಿ ರುವ ಪತ್ರವನ್ನು ಈ ದೇಶದ ಜನರು ಪುನಃ ಪುನಃ ಓದಿ ನೋಡಬೇಕಾದ ಸಮಯ ಇದು. ನಿಮ್ಮ ಈ ಹೊಸ ಅವತಾರದ ಹಿಂದೆ ಅಡಗಿ ಕೂತಿರುವವರು, ನಿಮ್ಮನ್ನು ವ್ಯಾಪಾರ ಮಾಡಲು ಪ್ರಯತ್ನಿಸುವವರು ನಿಮ್ಮ ಚಿಂತನೆಗಳನ್ನು ಅರ್ಥ ಮಾಡಿಕೊಂಡಿರುವವರಲ್ಲ. ಅಕ್ರಮಿಗಳನ್ನು ನೀವು ಹೇಗೆ ಹಿಮ್ಮೆಟ್ಟಿಸಿದಿರಿ ಎಂದೋ, ಸರ್ವಾಧಿಕಾರ ಗಳಿಂದ ಪ್ರಜಾಪ್ರಭುತ್ವದೆಡೆಗೆ ಹೇಗೆ ನೀವು ನಾಯಕತ್ವ ನೀಡಿದಿರಿ ಎಂದೋ ಆಧಿಪತ್ಯದಿಂದ ಹೇಗೆ ಸಮಾನತೆ ಮತ್ತು ಸಾಹೋದರ್ಯದೆಡೆಗೆ ದೇಶವನ್ನು ಮುನ್ನಡೆಸಿದಿರಿ ಎಂದೋ ಇವರಲ್ಲಿ ಯಾರಿಗೂ ಗೊತ್ತೇ ಇಲ್ಲ. ಜನರ ಗುಂಪು ಕೊಂದು ಹಾಕಿದ ಒಬ್ಬನೇ ಒಬ್ಬ ಮನುಷ್ಯನ ಮನೆಗೆ ಇವರು ಭೇಟಿ ನೀಡಿಲ್ಲ. ಕೃಷಿ ಮತ್ತು ರೈತರಿಗೆ ಬೆಲೆ ನೀಡುವುದಿಲ್ಲ. ಆದಿವಾಸಿಯ ಅಂತಸ್ತನ್ನು ಇವರು ಒಮ್ಮೆಯೂ ಪರಿಗಣಿಸುವು ದಿಲ್ಲ. ಹೀಗಿದ್ದೂ ಅವರು ನಿರ್ಲಜ್ಜವಾಗಿ ನಿಮ್ಮ ಮೇಲೆ ಹಕ್ಕೊತ್ತಾಯ ಮಂಡಿಸುತ್ತಿದ್ದಾರೆ.

ಒಂದು ಕಾಲದಲ್ಲಿ ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯ ಸಮರ ಹೂಡಿದ ಆದಿವಾಸಿಗಳು ಮತ್ತು ರೈತರು ಇಂದು ಇನ್ನೊಂದು ಸ್ವಾತಂತ್ರ್ಯ ಸಮರದಲ್ಲಿದ್ದಾರೆ. ಸಿಎಜಿ ವರದಿ, ಸಿ.ಎಸ್.ಆರ್. ಕಾನೂನು ತಿರಸ್ಕರಿಸಿದ 200 ಎಕರೆ ಭೂಮಿ ಅಪಹರಿಸಿ 35000 ಕೋಟಿ ತೆತ್ತು ನಡೆಸಲಾಗುತ್ತಿರುವ ಈ ಆಟದಲ್ಲಿ ಆದಿವಾಸಿಗಳು ಶಾಮೀಲಾಗಿಲ್ಲ. ಅವರು ಹೊಳೆ, ಕಾಡು ಕಾಯುವ ಹೋರಾಟದಲ್ಲಿ ವ್ಯಸ್ತರಾಗಿದ್ದಾರೆ.

ನರ್ಮದಾದ ತೀರದಲ್ಲಿ ಅತಿಕಾಯರಾದ ನಿಮ್ಮ ಹೊಸ ಅವತಾರಕ್ಕೆ ರೂಪ ನೀಡುತ್ತಾರೆ. ಅಲ್ಲಿ ನಿಂತು ನೀವು ಈ ಅನ್ಯಾಯಗಳನ್ನು ನೋಡಬಹುದು. ಒಗ್ಗಟ್ಟು, ಸುಸ್ಥಿರತೆ, ಸಮಾನತೆಯ ವಿರುದ್ಧ ನಡೆಯುವ ಎಲ್ಲ ಅನ್ಯಾಯ, ಅಕ್ರಮಗಳ ವಿರುದ್ಧ ನಿಮ್ಮ ಉಕ್ಕಿನ ಕೈಗಳು ಪ್ರಹಾರ ಮಾಡಬೇಕಿದೆ. ನಿಮ್ಮನ್ನೋ, ನಿಮ್ಮ ಆಶಯ ಗಳನ್ನೋ ಅರಿಯದೆ ಅಲ್ಲಿಗೆ ಬರುವ ಟೂರಿಸ್ಟ್ ಗಳ ನಡುವೆ ಈ ಆದಿವಾಸಿಗಳ, ನದಿಯ ಸಂಕಟಗಳನ್ನು ಆಲಿಸಲು ಅಲ್ಲಿ ನೀವು ಮಾತ್ರ ಇರುವುದು ಎಂದು ನಮಗೆ ಗೊತ್ತಿದೆ. ನೀವು ಆದಿವಾಸಿಗಳ ಹೋರಾಟಕ್ಕೆ ಪ್ರಚೋದನೆಯಾಗಿ… ನರ್ಮದಾ ನಿಮ್ಮಲ್ಲಿ ಯಾಚಿಸುತ್ತಿದೆ ಸರ್ದಾರ್ ಜಿ..

ಪ್ರೀತ್ಯಾದರಗಳೊಂದಿಗೆ
ಮೇಧಾ ಪಾಟ್ಕರ್

 

 

➤ಮೇಧಾ ಪಾಟ್ಕರ್

ಕೃಪೆ: www.thewire.in

1 COMMENT

  1. ಸರ್ದಾರ್ಜಿಯವರ ಆದೇಶದಿಂದ ನಿಷೇಧಕ್ಕೊಳಗಾಗಿದ್ದ ಅದೇ ಮನುವಾದಿ ಸಂಘಟನೆಯ ಸಂತಾನದವರು ಇದು ಮಾಡಿರುವುದನ್ನು ನೋಡುವಾಗ ಹಾಸ್ಯಾಸ್ಪದವೆನಿಸುತ್ತದೆ…

Comments are closed.