ಆ ಮಹಿಳೆಗೆ ಉಂಗುರವನ್ನು ಕೊಟ್ಟಳು, ಆಕೆಗೆ ಮಗುವಾಯಿತು

0
1468

ದಿನದ ಮಿಂಚು – 88

ಏ ಕೆ ಕುಕ್ಕಿಲ

ಮನೆಯ ಕರೆಗಂಟೆ ಬಾರಿಸಿತು.ಆಕೆ ಎದ್ದು ಕುಳಿತಳು. ಪತಿಗೋ ಸವಿ ಸವಿ ನಿದ್ದೆ. ಮಕ್ಕಳಿರುತ್ತಿದ್ದರೆ ಇವರು ರಜಾ ದಿನವನ್ನು ಹೀಗೆ ನಿದ್ದೆ ಮಾಡಿ ಮುಗಿಸುತ್ತಿರಲಿಲ್ಲ ಎಂದು ಆಕೆಗೆ ಅನಿಸಿತು.  ಮಗುವಿನ ನಿರೀಕ್ಷೆಯೊಂದಿಗೆ ಉರುಳಿದ ಹಲವು ವರ್ಷಗಳನ್ನು ಸ್ಮರಿಸುತ್ತಾ ಪತಿಯ ಮೈಗೆ ಚದ್ದರವನ್ನು ಹಾಸಿ ಬಂದ ಆಕೆ  ಬಾಗಿಲು ತೆರೆದಳು.  ಬಾಗಿಲ ಮುಂದೆ ನಡುವಯಸ್ಸು ದಾಟಿದ ಮಹಿಳೆ.  ಜೊತೆಗೇ, ಅಷ್ಟೇನೂ ಸುಂದರಿಯಲ್ಲದ ಯುವತಿ.

ಏನು ಎಂಬಂತೆ ಈಕೆ ಕಣ್ಣಲ್ಲೇ ಪ್ರಶ್ನಿಸಿದಳು.

“ಇವ್ಳು ನನ್ನ ಮಗಳು.  ಮದುವೆಯಿದೆ.  ದಯವಿಟ್ಟು ಸಹಾಯ ಮಾಡಿ” ಅಂದಳು ಮಹಿಳೆ.

ಆ ಮಹಿಳೆಯನ್ನು ಮತ್ತು ಯುವತಿಯನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಿದ ಈಕೆಗೆ ಏನನ್ನಿಸಿತೋ, ತನ್ನ ಬೆರಳಿನಲ್ಲಿದ್ದ ಉಂಗುರವನ್ನು ಆ ಮಹಿಳೆಯ ಕೈಗಿತ್ತು ಬಾಗಿಲು ಮುಚ್ಚಿದಳು. ತಿರುಗಿದರೆ, ಪತಿ.

ಹಿಂದಿನ ದಿನ ಪತಿಯ ಜೊತೆ ತೆರಳಿ ಇಷ್ಟಪಟ್ಟು ಖರೀದಿಸಿದ್ದ ಆ ಬಂಗಾರದ ಉಂಗುರವನ್ನು ಆ ಮಹಿಳೆಯ ಕೈಗಿಟ್ಟದ್ದನ್ನು ಇವರು ನೋಡಿರುವರೋ, ನೋಡಿದ್ದರೆ ಏನೆನ್ನುವರೋ ಎಂದು ಅನುಮಾನಿಸುತ್ತಾ ನಿಂತ ಆಕೆಯನ್ನು ಆತ ಬಾಹುಗಳಲ್ಲಿ ಪಡೆದುಕೊಂಡ. ನೆತ್ತಿಗೊಂದು ಮುತ್ತುಕೊಟ್ಟ. ತಬ್ಬಿಕೊಂಡ.

ಅವರಿಗೆ ಮಗುವಾಯಿತು.