ಮತ್ತೆ ಸ್ಕೀಮ್ ಹಗರಣ: 867ಕೋಟಿ ರೂಪಾಯಿ ಕಳಕೊಂಡ ಹೂಡಿಕೆದಾರರು; ವಿದ್ಯಾವಂತರೇ ಬಲಿಪಶುಗಳು!

0
578

ಸನ್ಮಾರ್ಗ ನ್ಯೂಸ್

ಹೈದರಾಬಾದ್: ದೇಶದಲ್ಲಿ ಪೊಂಜಿ ಸ್ಕೀಮ್(Ponzi Scheme) ವಂಚನೆಗಳು ಮರುಕಳಿಸುತ್ತಿದ್ದು, ತೆಲಂಗಾಣದಲ್ಲಿ ಸಾವಿರಾರು ಹೂಡಿಕೆದಾರರು ಮತ್ತೊಮ್ಮೆ ಮೋಸಕ್ಕೆ ಒಳಗಾಗಿದ್ದಾರೆ. ಹೈದರಾಬಾದ್‌ನ ಫಾಲ್ಕನ್ ಇನ್‌ವಾಯ್ಸ್ ಎಂಬ ಕಂಪನಿ ₹867 ಕೋಟಿ (100 ಮಿಲಿಯನ್ ಡಾಲರ್) ವಂಚನೆ ನಡೆಸಿದ ಪ್ರಕರಣ ಬೆಳಕಿಗೆ ಬಂದಿದೆ.

ಈ ಕಂಪನಿಯು ಅಮೆಜಾನ್‌ ಮತ್ತಿತರ ದೊಡ್ಡ ಸಂಸ್ಥೆಗಳೊಂದಿಗೆ ತೊಡಕಿರುವಂತೆ ನಟಿಸಿ, 22% ವರೆಗೆ ಲಾಭ ಭರವಸೆ ನೀಡಿ ಹೂಡಿಕೆದಾರರನ್ನು ಸೆಳೆದಿತ್ತು. ಹೊಸ ಹೂಡಿಕೆದಾರರಿಂದ ಸಂಗ್ರಹಿಸಿದ ಹಣವನ್ನು ಹಳೆಯ ಹೂಡಿಕೆದಾರರಿಗೆ ಪಾವತಿಸುವ ಪೊಂಜಿ ಮಾದರಿಯಲ್ಲಿಯೇ ಕಂಪನಿ ಕಾರ್ಯನಿರ್ವಹಿಸುತ್ತಿತ್ತು. ಈ ವಂಚನೆಯ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದು, ಈಗಾಗಲೇ ಇಬ್ಬರನ್ನು ಬಂಧಿಸಿದ್ದಾರೆ. ಆದರೆ ಸಂಸ್ಥಾಪಕ ಅಮರ್‌ದೀಪ್ ಕುಮಾರ್ ಪರಾರಿಯಾಗಿದ್ದು, ಅವನಿಗಾಗಿ ಹುಡುಕಾಟ ನಡೆಯುತ್ತಿದೆ.

2021 ರಿಂದ 7,000 ಹೂಡಿಕೆದಾರರಿಂದ ₹1,700 ಕೋಟಿ ವಂಚನೆ ಮಾಡಲಾಗಿದೆ ಎಂಬ ಮಾಹಿತಿ ತನಿಖೆಯಿಂದ ಬಹಿರಂಗವಾಗಿದೆ. ಸಂತ್ರಸ್ತರು ತಮ್ಮ ಹಣ ಮರಳಿಸುವ ಬಗ್ಗೆ ಆತಂಕದಲ್ಲಿದ್ದು, “ನಾವು ನಂಬಿಕೆ ಇಟ್ಟು ಹೂಡಿಕೆ ಮಾಡಿದ್ದೇವೆ, ಆದರೆ ಈಗ ಹಣ ಮರಳಲು ಸಾಧ್ಯವಿಲ್ಲ” ಎಂದು ಗಂಭೀರ ಪರಿಸ್ಥಿತಿಯನ್ನು ವಿವರಿಸಿದ್ದಾರೆ.

ಪೊಲೀಸರು ಮತ್ತು ಆರ್ಥಿಕ ತಜ್ಞರು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದು, “ಹೆಚ್ಚಿನ ಲಾಭದ ಆಮಿಷ ನೀಡುವ ಯಾವುದೇ ಯೋಜನೆಗಳ ಬಗ್ಗೆ ಜಾಗರೂಕರಾಗಿರಿ. ಅಧಿಕೃತ ಮೂಲಗಳ ಮೂಲಕ ಮಾತ್ರ ಹೂಡಿಕೆ ಮಾಡಿ” ಎಂದು ಸಲಹೆ ನೀಡಿದ್ದಾರೆ. ಈ ಪ್ರಕರಣವು ಸರ್ಕಾರ ಮತ್ತು ನಿಯಂತ್ರಕ ಸಂಸ್ಥೆಗಳು ಕಠಿಣ ಕ್ರಮ ಕೈಗೊಳ್ಳಬೇಕಾದ ಅಗತ್ಯವನ್ನು ಪುನರುಚರಿಸಿದೆ.

ದೇಶದಲ್ಲಿ ಹಲವು ವರ್ಷಗಳಿಂದ ಪೊಂಜಿ ಸ್ಕೀಮ್ ಹೆಸರಿನಲ್ಲಿ ಜನರನ್ನು ವಂಚಿಸುವ ಪ್ರಕರಣಗಳು ನಡೆದಿದ್ದರೂ, ಇಂತಹ ಸ್ಕೀಮ್‌ಗಳಿಗೆ ವಿದ್ಯಾವಂತರೇ ಮತ್ತೆ ಮತ್ತೆ ಬಲಿಪಶುಗಳಾಗುತ್ತಿದ್ದು, ಸಾರ್ವಜನಿಕರು ಇಂತಹ ವಂಚನೆಗಳಿಂದ ಪಾಠ ಕಲಿಯುತ್ತಿಲ್ಲ.