ಸಮ್ಮೇಳನದಲ್ಲಿ ತಪ್ಪುಗಳು ನಡೆದಿದ್ದರೆ ತಿದ್ದಿಕೊಳ್ಳುತ್ತೇವೆ: ಕಸಾಪ ಅಧ್ಯಕ್ಷ ಮಹೇಶ್ ಜೋಶಿ

0
339

ಸನ್ಮಾರ್ಗ ವಾರ್ತೆ

ಹಾವೇರಿ: “ವಿಶ್ವ ಸಾಹಿತ್ಯದಲ್ಲಿ ಕರ್ನಾಟಕಕ್ಕೆ ದೊಡ್ಡ ಸ್ಥಾನವಿದೆ. ಕನ್ನಡಿಗರೆಲ್ಲಾ ಸೇರಿಕೊಂಡು ಜೊತೆಯಾಗಿ ಮತ್ತಷ್ಟು ಮೇಲೆ ಕೊಂಡೊಯ್ಯಬೇಕು. ಟೀಕೆಗಳು ಅಭಿವೃದ್ದಿಗೆ ಪ್ರೇರಕವಾಗಬೇಕು. ವಿರೋಧಿಗಳು ನಮ್ಮ ಜೊತೆ ಕೈಜೋಡಿಸಿದರೆ ಕನ್ನಡ ಕುಟುಂಬ ಮತ್ತಷ್ಟು ಜೋರಾಗಿ ಹೃದಯವಂತಿಕೆ ಪಲ್ಲವಿಸುವಂತಾಗುತ್ತದೆ” ಎಂದು ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾದ ಹಿರಿಯ ಕವಿ ಡಾ.
ದೊಡ್ಡರಂಗೇಗೌಡ ತಿಳಿಸಿದರು. ಅವರು ಹಾವೇರಿಯಲ್ಲಿ ಮೂರು ದಿನಗಳ ಕಾಲ ನಡೆದ ೮೬ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಮಾತನಾಡುತ್ತಿದ್ದರು.

ರಾಜ್ಯದಲ್ಲಿ ತೀವ್ರ ವಿರೋಧ ವ್ಯಕ್ತವಾದ ಬೆನ್ನಲ್ಲೇ ಹಿಂದಿ ಅಥವಾ ಇನ್ನಾವುದೇ ಬಾಷೆಯ ಹೇರಿಕೆಯನ್ನು ಖಂಡಿಸುವ ಮೂಲಕ ಆರು ನಿರ್ಣಯ ಕೈಗೊಳ್ಳಲಾಯಿತು. ಸಮ್ಮೇಳನದ ಸರ್ವಾಧ್ಯಕ್ಷರು ಅದನ್ನು ಅನುಮೋದಿಸಿದರು. “ಸಮ್ಮೇಳನಾಧ್ಯಕ್ಷರ ಅಸಮಾಧಾನ ಅರ್ಥವಾಗಿದೆ. ಅವರ ಅಪೇಕ್ಷೆಯಂತೆ ಕನ್ನಡ ಶಾಸ್ತ್ರೀಯ ಭಾಷಾ ಅಧ್ಯಯನ ಕೇಂದ್ರಕ್ಕೆ ಮತ್ತು ಸಂಶೋಧನೆಗೆ ಅಗತ್ಯವಿರುವ ಸಂಪೂರ್ಣ ಅನುದಾನವನ್ನು ನೀಡಲಾಗುವುದು” ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದರು.

ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿಕೆ, ಹರಿಪ್ರಸಾದ್ ಮಾತನಾಡುತ್ತಾ “ಸಮ್ಮೇಳನದಲ್ಲಿ ಅಲ್ಪಸಂಖ್ಯಾತರ ಪ್ರಾತಿನಿಧ್ಯ ಕಡಿಮೆ ಇದೆ ಎಂಬ ಆರೋಪದಲ್ಲಿ ಹುರುಳಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹೇಶ್ ಜೋಶಿ ಮಾತನಾಡುತ್ತಾ “ಇದು ಕನ್ನಡಿಗರ ಸಾಹಿತ್ಯ ಸಮ್ಮೇಳನ ಜಾತಿ ಧರ್ಮಗಳನ್ನು ಹಿಡಿದೆಣಿಸುತ್ತಾ ಅಪಸ್ವರ ತೆಗೆಯುವುದು ಸರಿಯಲ್ಲ. ಸಮ್ಮೇಳನ ಯಶಸ್ವಿಗೊಳಿಸಲು ಅನೇಕ ಸವಾಲುಗಳನ್ನು ಎದುರಿಸಬೇಕಾಯಿತು. ಮೂರು ದಿನಗಳ ಮೆಲುಕು ಹಾಕಿದರೆ ಎದೆ ತುಂಬಿ ಬರುತ್ತಿದೆ. ಸರಕಾರ ಇಪ್ಪತ್ತು ಕೋಟಿ ಅನುದಾನ ನೀಡಿದೆ. ಸಂಘ ಸಂಸ್ಥೆಗಳು ಕೈಜೋಡಿಸಿವೆ. ತಪ್ಪುಗಳು ನಡೆದಿದ್ದರೆ ತಿದ್ದಿಕೊಳ್ಳುತ್ತೇವೆ” ಎಂದು ಅಧ್ಯಕ್ಷೀಯ ನುಡಿಗಳನ್ನಾಡುತ್ತಾ ಹೇಳಿದರು.

“ಗಡಿನಾಡು ಮತ್ತು ಹೊರನಾಡು ಕನ್ನಡಿಗರ ತಳಮಳಗಳು” ಎಂಬ ವಿಷಯದಲ್ಲಿ ನಡೆದ ಗೋಷ್ಟಿಯಲ್ಲಿ ಕನ್ನಡ ಶಾಲೆ ಉಳಿಸುವಲ್ಲಿ ಸರಕಾರ ತೋರುತ್ತಿರುವ ನಿರ್ಲಕ್ಷದ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಯಿತು, ಜನಪ್ರತಿನಿಧಿಗಳ ಇಚ್ಚಾಶಕ್ತಿಯ ಕೊರತೆಯಿಂದಲೇ ಗಡಿನಾಡಲ್ಲಿ ಶಾಲೆಗಳ ಕಗ್ಗೊಲೆಗಳಾಗುತ್ತಿವೆ. ಐಎಎಸ್ ಅಧಿಕಾರಿಗಳು ಇಂಗ್ಲೀಷ್ ಶಾಲೆಗಳ ಏಜೆಂಟರಂತೆ ವರ್ತಿಸುತ್ತಿದ್ದು, ಕನ್ನಡದ ಬುಡಕ್ಕೆ ಬೆಂಕಿ ಹಚ್ಚುತ್ತಿದ್ದಾರೆ. ಮೂಲ ಸೌಲಭ್ಯಗಳಿಲ್ಲದೆ ಕನ್ನಡ ಶಾಲೆಗಳು ಆಂಗ್ಲ ಮಾಧ್ಯಮ ಶಾಲೆಗಳಾಗುತ್ತಿವೆ ಎಂದು ತಜ್ಞರು ಅಂಕಿ ಅಂಶಗಳನ್ನಿಟ್ಟು ಆಕ್ರೋಶ ವ್ಯಕ್ತಪಡಿಸಿದ್ದು ಈ ಸಮ್ಮೇಳನದ ವಿಶೇಷವಾಗಿತ್ತು.

“ಕೋಟಿ ಕೋಟಿ ಸುರಿದು ಸಮ್ಮೇಳನ ನಡೆಸುವ ಬದಲು ಕನ್ನಡ ಶಾಲೆಗಳ ಅಭಿವೃದ್ದಿಗೆ ಮುಂದಾಗುವ ಪ್ರತಿಜ್ಞೆಗೈಯಲಿ” ಎಂಬ ಆಗ್ರಹ ಕೇಳಿ ಬಂತು. ಸಮ್ಮೇಳನದಲ್ಲಿ ಹಲವಾರು ಗೋಷ್ಟಿಗಳು ವಿವಿಧ ಕಾರ್ಯಕ್ರಮಗಳು ಜರಗಿದವು. ಕೊನೆಯಲ್ಲಿ ನಡೆದ ಕಾರ್ಯಕಾರಿಣಿ ಸಭೆಯಲ್ಲಿ ಮುಂದಿನ ಸಾಹಿತ್ಯ ಸಮ್ಮೇಳನ ಮಂಡ್ಯದಲ್ಲಿ ನಡೆಸಲು ನಿರ್ಧರಿಸಲಾಯಿತು.