ಹೊಸದಿಲ್ಲಿ: ಭಯೋತ್ಪಾದನೆಯ ಹಿಂದೆ ಕಾರ್ಯಾಚರಿಸಿದವರು ಮತ್ತು ಅದಕ್ಕೆ ಜವಾಬ್ದಾರಿಯಾದವರು ಖಂಡಿತವಾಗಿ ಶಿಕ್ಷಿಸಲ್ಪಡುತ್ತಾರೆ ಎಂದು ಪಾಕಿಸ್ತಾನಕ್ಕೆ ಉತ್ತರಿಸುತ್ತಿದೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಪುಲ್‍ವಾಮದಲ್ಲಿ ಭಯೋತ್ಪಾದನಾ ದಾಳಿಯಲ್ಲಿ 45 ಮಂದಿ ಯೋಧರು ವೀರ ಮರಣವನ್ನಪ್ಪಿದ ಘಟನೆಯ ಕುರಿತು ಅವರು ಪ್ರತಿಕ್ರಿಯಿಸುತ್ತಿದ್ದರು. ಸಚಿವ ಸಂಪುಟದ ಸುರಕ್ಷಾ ಸಮಿತಿ ಸಭೆಯ ನಂತರ ಪ್ರಧಾನಿ ಹೇಳಿಕೆ ನೀಡಿದ್ದಾರೆ.
“ಈ ಭಯೋತ್ಪಾದನಾ ದಾಳಿಯನ್ನು ಖಂಡಿಸಿ ಭಾರತಕ್ಕೆ ಬೆಂಬಲ ನೀಡಿದ ಎಲ್ಲ ದೇಶಗಳಿಗೆ ತಾನು ಕೃತಜ್ಞತೆ ಸೂಚಿಸುತ್ತೇನೆ. ಈ ದಾಳಿಗೆ ಬಲವಾದ ಉತ್ತರ ನೀಡಲಾಗುವುದು ಎಂದು ಮೋದಿ ಹೇಳಿದರು.ಅಂತಾರಾಷ್ಟ್ರೀಯ ಮಟ್ಟದಲ್ಲಿ ಒಂಟಿಯಾದ ನಮ್ಮ ನೆರೆಯ ದೇಶ ಬಲವಾದ ಗೂಢಾಲೋಚನೆ ಮತ್ತು ತಂತ್ರಗಳಲ ಮೂಲಕ ಭಾರತವನ್ನು ಅಸ್ಥಿರಗೊಳಿಸಬಹುದು ಎಂದು ಭಾವಿಸಿದ್ದರೆ ಅದು ಅವರಿಗೆ ಸಂಭವಿಸಿದ ಪ್ರಮಾದವಾಗಿದೆ ಎಂದು ಪ್ರಧಾನಿ ಹೇಳಿದರು.
ಭಯೋತ್ಪಾದನಾ ದಾಳಿಯಲ್ಲಿ ಜೀವ ಕಳಕೊಂಡ ಎಲ್ಲ ಯೋಧರಿಗೆ ಶ್ರದ್ಧಾಂಜಲಿ ಅರ್ಪಿಸುತ್ತಿದ್ದೇನೆ. ಸೈನಿಕರ ಶೌರ್ಯದಲ್ಲಿ ನಂಬಿಕೆಯಿದೆ. ಅವರಿಗೆ ತಿರುಗೇಟು ನೀಡಲು ಪೂರ್ಣ ಸ್ವಾತಂತ್ರ್ಯವನ್ನು ನೀಡಲಾಗಿದೆ ಎಂದು ಅವರು ಹೇಳಿದರು.












