ವಿಕಾಸ್ ದುಬೆ ಎನ್‌ಕೌಂಟರ್‌ನಲ್ಲಿ ಕಾಡುವ 8 ಪ್ರಶ್ನೆಗಳು: ಉಜ್ಜಯಿನಿಯಲ್ಲಿ ನಿರಾಯುಧ ಗಾರ್ಡ್‌ಗಳಿಗೆ ಸಿಕ್ಕಿಬಿದ್ದ ದುಬೆ ಪಿಸ್ತೂಲ್ ಕಸಿದುಕೊಂಡು ಯುಪಿಯ ಸಶಸ್ತ್ರ ಪೊಲೀಸರಿಂದ ತಪ್ಪಿಸಿಕೊಂಡದ್ದು ಹೇಗೆ?

0
814

ಸನ್ಮಾರ್ಗ ವಾರ್ತೆ

ಕಾನ್ಪುರ.ಜು.10: ಒಂದೇ ವಾರದಲ್ಲಿ, ವಿಕಾಸ್ ದುಬೆಯ ಐವರು ಸಂಗಡಿಗರ ಎನ್‌ಕೌಂಟರ್‌ಗಳನು ನಡೆದಾಗ ವಿಕಾಸ್ ದುಬೆಗೂ ಕೂಡ ಎನ್‌ಕೌಂಟರ್ ನಿಶ್ಚಿಯವಾಗಿತ್ತು. ಆದರೆ ಶುಕ್ರವಾರ ಬೆಳಿಗ್ಗೆ, ಅವನು ಸ್ವತಃ ಶರಣಾಗಲು ಉಜ್ಜಯಿನಿಗೆ ಬಂದನು. ಇದು ಕಾನ್ಪುರದಿಂದ ಕೇವಲ 17 ಕಿ.ಮೀ ದೂರದಲ್ಲಿದೆ. ವಿಕಾಸ್ ದುಬೆಯ ಬಂಧನ ಬಗ್ಗೆ ಪ್ರಶ್ನೆಗಳು ಎದ್ದೇಳುತ್ತಿರುವಾಗಲೇ ಎನ್‌ಕೌಂಟರ್ ನಡೆದಿರುವುದು ಹಲವು ರೀತಿಯ ಪ್ರಶ್ನೆಗಳು ತಲೆ ಎತ್ತುವಂತೆ ಮಾಡಿದೆ.

1.ದಿನವಿಡೀ ಚಾರ್ಟರ್ಡ್ ವಿಮಾನದ ಮೂಲಕ ಕರೆದೊಯ್ಯುವ ವರದಿಗಳು ಇದ್ದವು, ನಂತರ ರಸ್ತೆಯ ಪ್ರಯಾಣಕ್ಕೆ ಏಕೆ ಬದಲಿಸಲಾಯ್ತು?

ಈ ಮೊದಲು ವಿಕಾಸ್‌ನನ್ನು ಉಜ್ಜಯಿನಿಯಿಂದ ಇಂದೋರ್‌ಗೆ ಮತ್ತು ನಂತರ ಅಲ್ಲಿಂದ ಚಾರ್ಟರ್ಡ್ ವಿಮಾನದ ಮೂಲಕ ಕರೆದೊಯ್ಯಲಾಗುವುದು ಎಂಬ ಚರ್ಚೆ ನಡೆದಿತ್ತು, ಆದರೆ ಗುರುವಾರ ಸಂಜೆ ಇದ್ದಕ್ಕಿದ್ದಂತೆ ಅವನನ್ನು ರಸ್ತೆ ಮೂಲಕ ಕರೆದೊಯ್ಯಲಾಗುವುದು ಎಂದು ಹೇಳಲಾಗಿತ್ತು ಮತ್ತು ಇದಕ್ಕಾಗಿ ಯುಪಿ ಎಸ್‌ಟಿಎಫ್ ತಂಡ ಬರುತ್ತಿದೆ ಎನ್ನಲಾಗಿತ್ತು. ಆದರೆ ಎಸ್‌ಟಿಎಫ್ ತಂಡ ಬರಲಿಲ್ಲ. ಸಂಜೆ, ಉಜ್ಜಯಿನಿಯ ಪೊಲೀಸ್ ತಂಡ ವಿಕಾಸ್ ದುಬೆಯನ್ನು ಝಾನ್ಸಿವರೆಗೆ ಕರೆದುಕೊಂಡು ಬಂತು.

2. ಪೊಲೀಸ್ ಬೆಂಗಾವಲಿನಲ್ಲಿ ಅನೇಕ ವಾಹನಗಳು ಇದ್ದವು, ಆದರೆ ವಿಕಾಸ್ ಸವಾರಿ ಮಾಡುತ್ತಿದ್ದ ವಾಹನದಲ್ಲಿ ಮಾತ್ರ ಅಪಘಾತ ಸಂಭವಿಸಿತೇ?

10ಕ್ಕೂ ಹೆಚ್ಚು ವಾಹನಗಳು ಸಿದ್ಧವಾಗಿವಾಗಿದ್ದಾಗ, ವಿಕಾಸ್ ಒಂದು ವಾಹನದಲ್ಲಿ ಕುಳಿತಿದ್ದ. ಉಳಿದ ವಾಹನಗಳು ಹಿಂದಕ್ಕೆ ಮತ್ತು ಮುಂದಕ್ಕೆ ಇದ್ದವು. ಮಾಧ್ಯಮಗಳ ವಾಹನಗಳೂ ಸಹ ಈ ಬೆಂಗಾವಲನ್ನು ಅನುಸರಿಸುತ್ತಿದ್ದವು. ಭಾರಿ ಮಳೆಯಾಗುತ್ತಿತ್ತು. ಈ ಸಂಪೂರ್ಣ ಬೆಂಗಾವಲಿನಲ್ಲಿ, ಅಪಘಾತವು ವಿಕಾಸ್ ಇದ್ದ ವಾಹನಕ್ಕೆ ಮಾತ್ರ ಸಂಭವಿಸಿದೆ. ಬೇರೆ ಯಾವುದೇ ಪೊಲೀಸ್ ವಾಹನ ಅಥವಾ ಯಾವುದೇ ಮಾಧ್ಯಮಗಳ ಕಾರಿನೊಂದಿಗೆ ಯಾವುದೇ ಅಪಘಾತ ಸಂಭವಿಸಿಲ್ಲ.

3. ಮಾಧ್ಯಮಗಳ ವಾಹನವನ್ನು ಉದ್ದೇಶಪೂರ್ವಕವಾಗಿ ತಡೆಹಿಡಿಯಲಾಯ್ತೇ?

ಬೆಂಗಾವಲಿನೊಂದಿಗೆ ಚಲಿಸುತ್ತಿದ್ದ ಮಾಧ್ಯಮಗಳನ್ನು ಉದ್ದೇಶಪೂರ್ವಕವಾಗಿ ನಿಲ್ಲಿಸುವ ಸಲುವಾಗಿ, ರಸ್ತೆ ಮಧ್ಯದಲ್ಲಿ ಹಠಾತ್ ಚೆಕ್‌ಪೋಸ್ಟ್ ಅನ್ನು ಹಾಕಲಾಗಿತ್ತು ಎಂದು ಆರೋಪಿಸಲಾಗಿದೆ. ಈ ಕಾರಣದಿಂದಾಗಿ ಮಾಧ್ಯಮಗಳ ವಾಹನಗಳು ಹಿಂದೆ ಉಳಿದುಕೊಂಡಿದ್ದವು. ನಂತರ ವಿಕಾಸ್ ದುಬೆ ವಾಹನವು ಉರುಳಿದ್ದು ಆತ ತಪ್ಪಿಸಿಕೊಳ್ಳಲು ಯತ್ನಿಸಿದ್ದರಿಂದ ಎನ್‌ಕೌಂಟರ್ ಮಾಡಲಾಗಿದೆ ಎಂಬ ಸುದ್ದಿ ಬಂದಿತು. ಎನ್‌ಕೌಂಟರ್ ನಂತರ ಸ್ಥಳಕ್ಕೆ ತಲುಪಿದ ಉನ್ನತ ಪೊಲೀಸ್ ಅಧಿಕಾರಿಗಳು, “ಮಾಧ್ಯಮಗಳನ್ನು ತಡೆಯಲು ಇದ್ದಕ್ಕಿದ್ದಂತೆ ತಪಾಸಣೆ ಪ್ರಾರಂಭಿಸಲಾಗಿದೆಯೇ?” ಎಂಬ ಪ್ರಶ್ನೆಗೆ ಉತ್ತರಿಸಲಿಲ್ಲ.

4. ವಿಕಾಸ್ ದೂಬೆ ಕೈಗಳಿಗೆ ಬೇಡಿ ತೊಡಿಸಿರಲಿಲ್ಲವೇ?

8 ಪೊಲೀಸರನ್ನು ಕೊಂದ ಆರೋಪ ಹೊತ್ತಿರುವ 60 ಕ್ಕೂ ಹೆಚ್ಚು ಪ್ರಕರಣಗಳನ್ನು ಮಾಡಿದಾತನಿಗೆ ಕೈ ಬೇಡಿ ಏಕೆ ತೊಡಿಸಲಾಗಿಲ್ಲ ಎಂಬುದು ಒಂದು ದೊಡ್ಡ ಪ್ರಶ್ನೆಯೇ? ಉಜ್ಜಯಿನಿಯ ಮಹಾಕಲ ದೇವಾಲಯದ ನಿರಾಯುಧಿ ಗಾರ್ಡ್ ವಿಕಾಸ್‌ನನ್ನು ನಿಲ್ಲಿಸಿದ್ದನು. ಕಾವಲುಗಾರರೊಂದಿಗೆ ಹೊಯ್ ಕೈ ಮಾಡಿದ್ದನೆಂದು ಹೇಳಲಾಗಿದ್ದರೂ ವಿಕಾಸ್‌ಗೆ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಆತನನ್ನು ಹಿಡಿದ ಉಜ್ಜಯಿನಿ ಪೊಲೀಸರ ಬಳಿ ಲಾಠಿಗಳೂ ಕೂಡ ಇರಲಿಲ್ಲ. ಅದೇ ಸಮಯದಲ್ಲಿ, ಕಾನ್ಪುರ ಬಳಿ ಪೊಲೀಸ್ ಕಾರು ಪಲ್ಟಿಯಾದಾಗ, ವಿಕಾಸ್ ಸಶಸ್ತ್ರ ಪೊಲೀಸರಿಂದ ಪಿಸ್ತೂಲ್ ಕಸಿದುಕೊಂಡು ಗುಂಡು ಹಾರಿಸಲು ಹೇಗೆ ಪ್ರಾರಂಭಿಸಿದ?

ಸ್ಥಳಕ್ಕೆ ತಲುಪಿದ ಪೊಲೀಸ್ ಅಧಿಕಾರಿಗಳು ನಾವು ಎಲ್ಲರಿಗೂ ಹೇಳುತ್ತೇವೆ ಎಂದು ಹೇಳುತ್ತಲೇ ಇದ್ದರು, ಆದರೆ ಪತ್ರಿಕಾಗೋಷ್ಠಿಯಲ್ಲಿ “ವಿಕಾಸ್ ಶರಣಾಗಬಹುದೆಂದು ನಾವು ಭಾವಿಸಿದ್ದೆವು, ಆದರೆ ಅವನು ನಿರಾಕರಿಸಿ ಪೊಲೀಸರ ಮೇಲೆ ಗುಂಡು ಹಾರಿಸಲು ಪ್ರಾರಂಭಿಸಿದಾಗ, ನಾವು ಕೂಡ ಫಯರಿಂಗ್ ಮಾಡಬೇಕಾಯ್ತು” ಎಂದಿದ್ದಾರೆ.

5. ವಿಕಾಸ್ ದುಬೆ ಯಾವ-ಯಾವ ದೊಡ್ಡ ವಿಷಯಗಳ ಕುರಿತು ಬಹಿರಂಗಪಡಿಸಲಿದ್ದ?

• ಈ ಬಗ್ಗೆ ಕೇಳಿದಾಗ ಯುಪಿ ಮಾಜಿ ಡಿಜಿಪಿ ವಿಕ್ರಮ್ ಸಿಂಗ್ ಅವರು ದುಬೆಯನ್ನು ಪ್ರಶ್ನಿಸಿದರೆ, ದೊಡ್ಡ ದೊಡ್ಡ ಜನರ ಹೆಸರು ಬಹಿರಂಗವಾಗುತ್ತಿತ್ತು ಎಂದು ತಿಳಿಸಿದ್ದರು. ಇದರಲ್ಲಿ ಐಎಎಸ್, ಐಪಿಎಸ್, ನಾಯಕರ ಹೆಸರನ್ನು ಬಹಿರಂಗಗೊಳ್ಳಬಹುದಿತ್ತು. ವಿಕಾಸ್ ಉಜ್ಜಯಿನಿಯಲ್ಲಿ ಸಿಕ್ಕಿಹಾಕಿಕೊಳ್ಳುವುದು ಗ್ರಹಿಕೆಗೂ ನಿಲುಕದ ವಿಷಯವಾಗಿದೆ.

• “ವಾಸ್ತವವಾಗಿ ಕಾರು ಪಲ್ಟಿಯಾಗಿಲ್ಲ, ರಹಸ್ಯವನ್ನು ಮುಚ್ಚುವ ಮೂಲಕ ಸರ್ಕಾರವನ್ನು ಉರುಳಿಸದಂತೆ ನೋಡಿಕೊಳ್ಳಲಾಗಿದೆ” ಎಂದು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಕುತೂಹಲಕಾರಿ ಟ್ವೀಟ್‌ನ್ನು ಮಾಡಿದ್ದಾರೆ.

• “ಯಾವ ಶಂಕೆಯಿತ್ತೋ ಅದೇ ಸಂಭವಿಸಿದೆ. ವಿಕಾಸ್ ದುಬೆ ಯಾವ ರಾಜಕೀಯ ಜನರು, ಪೊಲೀಸ್ ಅಧಿಕಾರಿಗಳೊಂದಿಗೆ ಸಂಪರ್ಕ ಹೊಂದಿದ್ದನು ಎಂಬುದು ಈಗ ಬಹಿರಂಗಗೊಳ್ಳುವುದೇ ಇಲ್ಲ. ಎಲ್ಲ ಏನ್‌ಕೌಂಟರ್‌ಗಳ ಮಾದರಿ ಏಕೆ ಒಂದೇ ರೀತಿ ಇದೆ?” ಎಂದು ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ದಿಗ್ವಿಜಯ್ ಸಿಂಗ್ ಸಂಶಯ ವ್ಯಕ್ತಪಡಿಸಿದ್ದಾರೆ.

6. ಈಗ ಏನು ತನಿಖೆ ಮಾಡಲಾಗುತ್ತದೆ?

• ಪೊಲೀಸ್ ಎನ್‌ಕೌಂಟರ್‌ಗಳಿಗೆ ಸಂಬಂಧಿಸಿದಂತೆ 2015 ರಲ್ಲಿ ಸುಪ್ರೀಂ ಕೋರ್ಟ್ ಮಾರ್ಗಸೂಚಿಗಳನ್ನು ಹೊರಡಿಸಿತ್ತು. ಪ್ರತಿ ಎನ್ಕೌಂಟರ್ ಅನ್ನು ಪರಿಶೀಲಿಸುವುದು ಮುಖ್ಯ. ತನಿಖೆ ಮುಗಿಯುವವರೆಗೂ ಭಾಗಿಯಾಗಿರುವ ಪೊಲೀಸರಿಗೆ ಬಡ್ತಿ ಅಥವಾ ಶೌರ್ಯ ಪ್ರಶಸ್ತಿಗಳು ಲಭಿಸುವುದಿಲ್ಲ.

• ಎನ್ ಕೌಂಟರ್‌ಗಳು ಸಾಮಾನ್ಯವಾಗಿ ಎರಡು ಪ್ರಕಾರಗಳಾಗಿವೆ. ಮೊದಲನೆಯದು, ಇದರಲ್ಲಿ ಅಪರಾಧಿಯು ಪೊಲೀಸ್ ಕಸ್ಟಡಿಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಾನೆ. ಎರಡನೆಯದಾಗಿ, ಪೊಲೀಸರು ಅಪರಾಧಿಯನ್ನು ಬಂಧಿಸಲು ಹೋದಾಗ ಮತ್ತು ಅವನು ಪ್ರತೀಕಾರ ನಡೆಸುತ್ತಾನೆ.

• ಸುಪ್ರೀಂ ಕೋರ್ಟ್‌ನ ಮಾರ್ಗಸೂಚಿಗಳ ಪ್ರಕಾರ, ಸಿಆರ್‌ಪಿಸಿಯ ಸೆಕ್ಷನ್ 176 ರ ಅಡಿಯಲ್ಲಿ, ಪ್ರತಿ ಎನ್‌ಕೌಂಟರ್‌‌ಗೆ ಮ್ಯಾಜಿಸ್ಟ್ರೇಟ್ ತನಿಖೆ ಅಗತ್ಯ. ಪ್ರತಿ ಎನ್‌ಕೌಂಟರ್‌ನ ನಂತರ ಬಳಸಿದ ಶಸ್ತ್ರಾಸ್ತ್ರಗಳು ಮತ್ತು ಗುಂಡುಗಳನ್ನು ಪೊಲೀಸರು ಲೆಕ್ಕ ಹಾಕಬೇಕಾಗುತ್ತದೆ.

• ಪೊಲೀಸರಿಗೆ ಏನ್‌ಕೌಂಟರ್‌ ಮಾಡುವ ಹಕ್ಕು ಇಲ್ಲ. ತನ್ನನ್ನು ಮಾತ್ರ ರಕ್ಷಿಸಿಕೊಳ್ಳುವ ಹಕ್ಕಿದೆ. ಅಪರಾಧಿಯಿಂದ ತನ್ನನ್ನು ರಕ್ಷಿಸಿಕೊಳ್ಳಲು, ಪೊಲೀಸರು ಗುಂಡು ಹಾರಿಸುತ್ತಾರೆ ಮತ್ತು ಅದರಲ್ಲಿ ಅಪರಾಧಿಯು ಕೊಲ್ಲಲ್ಪಟ್ಟರೆ, ಅದನ್ನು ಸಾಬೀತುಪಡಿಸುವುದು ಸಹ ಅಗತ್ಯವಾಗಿರುತ್ತದೆ.

7. ಉಜ್ಜಯಿನಿಯಲ್ಲಿ ಬಂಧನವನ್ನು ಸ್ಕ್ರಿಪ್ಟ್ ಮಾಡಲಾಗಿದೆಯೇ?

4 ರಾಜ್ಯಗಳ ಮೂಲಕ 1250 ಕಿ.ಮೀ ಪ್ರಯಾಣಿಸಿದ ನಂತರ ವಿಕಾಸ್ ದುಬೆ ಉಜ್ಜಯಿನಿ ತಲುಪಿದ್ದು, ಹೇಗೆ ಎಂಬುದು ಈಗಲೂ ರಹಸ್ಯವಾಗಿಯೇ ಉಳಿದಿದೆ.

ಉಜ್ಜಯಿನಿಯಲ್ಲಿನ ಆತನ ಬಂಧನದ ಬಗ್ಗೆಯೂ ಹಲವು ಪ್ರಶ್ನೆಗಳು ಎದ್ದವು. ಒಂದು ದಿನ ಮುಂಚಿತವಾಗಿ, ಅಂದರೆ ಬುಧವಾರ ಮಧ್ಯಾಹ್ನ, ಮಹಾಕಾಲ ಪೊಲೀಸ್ ಠಾಣೆ ಉಸ್ತುವಾರಿ ಮತ್ತು ಉಜ್ಜಯಿನಿ ಉಸ್ತುವಾರಿ ವರ್ಗಾವಣೆ ಮಾಡಲಾಯಿತು. ಕಲೆಕ್ಟರ್ ಆಶಿಶ್ ಸಿಂಗ್ ಮತ್ತು ಎಸ್ಪಿ ಮನೋಜ್ ಸಿಂಗ್ ಅವರು ರಾತ್ರಿ ಮಹಾಕಾಲ ದೇವಸ್ಥಾನವನ್ನು ತಲುಪಿದರು. ಇಬ್ಬರೂ ಹೇಳುವಂತೆ ಅವರು ಬೇರೊಂದು ವಿಷಯದಲ್ಲಿ ಮೀಟಿಂಗ್‌ಗಾಗಿ ತಲುಪಿದ್ದರು ಎನ್ನಲಾಗಿದೆ.

8. ಉಜ್ಜಯಿನಿ ಪೊಲೀಸರು ಗಾಂಧಿಗಿರಿ ತೋರಿಸಿದರು?

ಗುರುವಾರ ಬೆಳಿಗ್ಗೆ ವಿಕಾಸ್ ದುಬೆ ದೇವಸ್ಥಾನದಲ್ಲಿ ಸುತ್ತಾಡಿ ಫೋಟೊ ತೆಗೆಸಿಕೊಳ್ಳುತ್ತಿರುವಾಗ ಪೊಲೀಸರ ಗಾಂಧಿಗಿರಿ ಇಲ್ಲಿ ಕಾಣಿಸಿಕೊಂಡಿತು. ವಿಕಾಸ್ ಸ್ವತಃ ದೇವಾಲಯದಿಂದ ಹೊರಬಂದನು, ಪೊಲೀಸರು ಹಿಂಬಾಲಿಸುತ್ತಿದ್ದರು. ಮಾಧ್ಯಮಗಳು ಬಂದಾಗ ವಿಕಾಸ್‌ದುಬೆಯ ಕೊರಳ ಪಟ್ಟಿ ಹಿಡಿದು ಬಂಧಿಸಲಾಯಿತು. ಯಾವುದೇ ಪೊಲೀಸರ ಕೈಯಲ್ಲಿ ಲಾಠಿ ಕೂಡ ಇರಲಿಲ್ಲ.

ದೇವಾಲಯದ ಒಳಗೆ ವಿಕಾಸ್ ದುಬೆಯ ಫೋಟೋ-ವಿಡಿಯೋಗಳನ್ನು ಯಾರು ಮಾಡುತ್ತಿದ್ದರು ಎಂಬುದು ಯಾರಿಗೂ ತಿಳಿದಿಲ್ಲ. ವಿಕಾಸ್ ಸಿಕ್ಕಿಬಿದ್ದಾಗ, ಶರ್ಮಾಜೀ ಕೊಲ್ಲಿಸುತ್ತೀರೇನು ಎಂದು ಒಬ್ಬ ಪೋಲಿಸ್ ಹೇಳಿದ ಮಾತು ಕೇಳಿ ಬಂತು. ಯಾರನ್ನೋ ಹುಡುಕುವ ಹಾಗೆ ವಿಕಾಸ್ ದುಬೆ ಕೂಡ ಮತ್ತೆ ಮತ್ತೆ ಹಿಂತಿರುಗಿ ನೋಡುತ್ತಲೇ ಇದ್ದನು.

ಕೃಪೆ: ದೈನಿಕ್ ಭಾಸ್ಕರ್

ಓದುಗರೇ, ಸನ್ಮಾರ್ಗ ಪೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.