ಸನ್ಮಾರ್ಗ ವಾರ್ತೆ
ಹೊಸದಿಲ್ಲಿ,ಸೆ.8:ದೇಶದ್ರೋಹ ಕಾನೂನುನನ್ನು ದುರಪಯೋಗಿಸಲಾಗುತ್ತಿದೆ ಎಂದು ಜಸ್ಟಿಸ್ ದೀಪಕ್ ಗುಪ್ತ ಹೇಳಿದ್ದಾರೆ. ಇಂತಹ ಪ್ರಕರಣಗಳಲ್ಲಿ ಶಿಕ್ಷಿಸಲ್ಪಡುವವರ ಸಂಖ್ಯೆ ಕಡಿಮೆ. ಆದ್ದರಿಂದ ಕಾನೂನಿನ ಬಗ್ಗೆ ಮರುಅವಲೋಕನ ನಡೆಯುವ ಆವಶ್ಯಕತೆಯಿದೆ ಎಂದು ಅವರು ಹೇಳಿದರು.
“ಅಭಿವ್ಯಕ್ತಿ ಸ್ವಾತಂತ್ರ್ಯ” ಪ್ರಜಾಪ್ರಭುತ್ವದ ಪ್ರಧಾನ ಆಶಯಗಳಲ್ಲೊಂದು. ಜನರು ಸರಕಾರಕ್ಕೆ ಹೆದರುವ ಪರಿಸ್ಥಿತಿ ಸೃಷ್ಟಿಸಬಾರದು. ಸರಕಾರಕ್ಕೆ ಅನುಕೂಲಕರವಾದ ನಿಲುವು ಸ್ವೀಕರಿಸಲು ಜನರನ್ನು ನಿರ್ಬಂಧಿಸಬಾರದು. ಸಾರ್ವಜನಿಕ ಸಮಾಜದಲ್ಲಿ ಯಾರದ್ದಾದರೂ ಮಾತು, ಕೆಲಸಗಳು ಸಮಸ್ಯೆಗಳಿಗೆ ಕಾರಣವಾದರೆ ಮಾತ್ರ ದೇಶದ್ರೋಹ ಆರೋಪ ಹೊರಿಸಬಹುದು ಎಂದು ಅವರು ಹೇಳಿದರು. ಮಣಿಪುರದ ಪತ್ರಕರ್ತ ಕಿಶೋರ್ ಚಂದ್ ವಿರುದ್ಧ ದೇಶದ್ರೋಹ ಆರೋಪ ಹೊರಿಸಿ ಬಂಧಿಸಿದ ಘಟನೆಯನ್ನು ಅವರು ಬೆಟ್ಟು ಮಾಡಿದರು. ಆನ್ಲೈನ್ ಲೇಖನದ ಹೆಸರಿನಲ್ಲಿ ಕಿಶೋರ್ ವಿರುದ್ಧ ದೇಶದ್ರೋಹ ಆರೋಪ ಹೊರಿಸಿ ಜೈಲಿಗೆ ಹಾಕಲಾಗಿದೆ. ಟೀಕೆಗಳಿಗೆ ಸ್ವಾಗತಿಸಲು ನ್ಯಾಯ ವ್ಯವಸ್ಥೆ ಕೂಡ ತಯಾರಿರಬೇಕು. ರಾಷ್ಟ್ರದ ಚಿಹ್ನೆಗಳನ್ನು ಗೌರವಿಸಲು ಯಾರನ್ನೂ ಬಲವಂತಪಡಿಸಬಾರದು. ಅದು ಹೃದಯದಿಂದ ಬರಬೇಕಾಗಿದೆ ಎಂದು ಅವರು ಹೇಳಿದರು.












