ಹರಿಯಾಣ: ಅಂಧ ಇಮಾಮ್ ದಂಪತಿಯ ಬರ್ಬರ ಕೊಲೆ

0
2783

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಸೆ.9: ಹರಿಯಾಣದ ಸೋನಿಪತ್‍ನಲ್ಲಿ ಅಂಧ ಇಮಾಮ್ ಮತ್ತು ಅವರ ವಿಕಲಾಂಗ ಪತ್ನಿಯನ್ನು ಮಸೀದಿಯ ಸಮೀಪದ ಕೋಣೆಯಲ್ಲಿ ಕಡಿದು ಕೊಲೆ ಮಾಡಲಾಗಿದೆ. ಗನ್ನೂರ್ ತಾಲೂಕಿನ ಮಾಲಿಕ್‍ ಮಾಜರಿ ಗ್ರಾಮದ ಮಸೀದಿ ಇಮಾಮ್ ಹಾಫಿಝ್ ಮುಹಮ್ಮದ್ ಇರ್ಫಾನ್(28) ಮತ್ತು ಪತ್ನಿ ಯಾಸ್ಮೀನ್(22) ಕೊಲೆಯಾದ ನತದೃಷ್ಟರು. ಮಸೀದಿಗೆ ತಾಗಿಕೊಂಡಿದ್ದ ಕೋಣೆಯಲ್ಲಿ ಕಡಿದು ಕೊಲೆಗೈಯ್ಯಲಾಗಿದೆ. ಆರೋಪಿಗಳೆಂದು ಶಂಕಿಸಲಾದ ನಾಲ್ವರ ತಂಡವನ್ನು ಹರಿಯಾಣ ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸುತ್ತಿದ್ದಾರೆ.

ಶನಿವಾರ ರಾತ್ರೆ ಗ್ರಾಮವನ್ನೇ ನಡುಗಿಸಿದ ಘಟನೆ ನಡೆದಿದೆ. ರಾತ್ರೆ ನಮಾಝ್ ಬಳಿಕ ತನ್ನ ಕೋಣೆಗೆ ಹೋದ ಇಮಾಮ್ ಬೆಳಗ್ಗಿನ ನಮಾಝ್‍ಗೆ ಬರದಿದ್ದಾಗ ಜನರು ಅವರ ಕೋಣೆಗೆ ಹೋಗಿ ನೋಡಿದ್ದರು. ಅಲ್ಲಿ ಇಮಾಮ್ ಪತ್ನಿಯ ಮೃತದೇಹ ಕಂಡು ಬಂದಿತ್ತು. ಎರಡು ದಿವಸ ಮೊದಲು ಮಸೀದಿಯ ಗೋಡೆಯ ಸಮೀಪ ನಾಲ್ವರು ಮದ್ಯಪಾನ ಮಾಡುತ್ತಿದ್ದರು. ಇದನ್ನು ಇಮಾಮ್ ಪ್ರಶ್ನಿಸಿದ್ದರು. ನಂತರ ನಿನ್ನನ್ನು ನೋಡಿಕೊಳ್ಳುತ್ತೇನೆ ಎಂದು ಇಮಾಮರಿಗೆ ಮದ್ಯಪಾನಿಗಳು ಬೆದರಿಕೆಯೊಡ್ಡಿದ್ದರು ಎಂದು ಸ್ಥಳೀಯ ಅಮ್ಜದ್ ಎಂಬವರು ಹೇಳಿದ್ದಾರೆ.

ಇದೇ ತಂಡ ಇಮಾಮರು ಮತ್ತು ಪತ್ನಿಯ ಹತ್ಯೆ ಮಾಡಿರಬಹುದು ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ. ಇಮಾಮರಿಗೆ ಬೆದರಿಕೆ ಹಾಕಿದ್ದನ್ನು ಪೊಲೀಸರಿಗೆ ತಿಳಿಸಲಾಗಿತ್ತು. ಆದರೂ ಪೊಲೀಸರು ಯಾರ ವಿರುದ್ಧವೂ ಎಫ್‍ಐಆರ್ ದಾಖಲಿಸಿರಲಿಲ್ಲ. ತದನಂತರ ಗ್ರಾಮಸ್ಥರ ಒತ್ತಡಕ್ಕೆ ಮಣಿದು ನಾಲ್ವರ ವಿರುದ್ಧ ಕೇಸು ದಾಖಲಿಸಿಕೊಂಡಿದ್ದಾರೆ ಎನ್ನಲಾಗಿದೆ. ಇತ್ತೀಚೆಗಷ್ಟೇ ಇಮಾಮರು ವಿವಾಹವಾಗಿದ್ದರು.