ಕಾಶ್ಮೀರ: ಪುನಃ ಹೆಚ್ಚಿದ ಸರಕಾರಿ ನಿಯಂತ್ರಣ, ಮೆರವಣಿಗೆಗೆ ತಡೆ

0
529

ಸನ್ಮಾರ್ಗ ವಾರ್ತೆ

ಶ್ರೀನಗರ,ಸೆ.9: ಜಮ್ಮು-ಕಾಶ್ಮೀರದಲ್ಲಿ ಸಡಿಲಗೊಳಿಸಲಾಗಿದ್ದ ನಿಯಂತ್ರಣವನ್ನು ಪುನಃ ಹೆಚ್ಚಿಸಲಾಗಿದೆ. ಶ್ರೀನಗರ ಸಹಿತ ಕರ್ಫ್ಯೂ ಸಮಾನ ನಿಯಂತ್ರಣಗಳನ್ನು ಜಾರಿಗೊಳಿಸಲು ಸೂಚನೆ ನೀಡಲಾಗಿದ್ದು ಇದಕ್ಕೆ ಕಾರಣವೇನೆಂದು ತಿಳಿಸಲಾಗಿಲ್ಲ. ಮುಹರ್ರಂ ಮೆರವಣಿಗೆ ಸಂಬಂಧಿಸಿ ಅಹಿತಕರ ಘಟನೆಗಳು, ಪ್ರತಿಭಟನೆಗಳು ನಡೆಯಬಾರದೆಂದು ನಿಯಂತ್ರಣದಲ್ಲಿ ಹೆಚ್ಚಳಗೊಳಿಸಲಾಗಿದೆ ಎಂದು ಹೇಳಲಾಗುತ್ತಿದೆ. ಶ್ರೀನಗರದ ಪ್ರಧಾನ ವ್ಯಾಪಾರಿ ಕೇಂದ್ರವಾದ ಲಾಲ್‍ಚೌಕ್ ಸಹಿತ ಪ್ರಧಾನ ಸ್ಥಳಗಳ ರಸ್ತೆಗಳಲ್ಲಿ ಕಬ್ಬಿಣದ ಬೇಲಿ ಹಾಕಲಾಗಿದೆ. ತುರ್ತು ವೈದ್ಯಕೀಯ ನೆರವಿನ ಅಗತ್ಯವಿರುವವರನ್ನು ಮಾತ್ರ ಬಿಡಲಾಗುತ್ತಿದೆ. ಕಳೆದ ಆಗಸ್ಟ್ ಐದರಂದು ರಾಜ್ಯದ ವಿಶೇಷ ಸ್ಥಾನಮಾನ ರದ್ದು ಪಡಿಸಿದಾಗ ಹೇರಲಾಗಿದ್ದ ನಿಯಂತ್ರಣಗಳಿಂದಾಗಿ ಜನಜೀವನ ಸ್ತಬ್ಧವಾಗಿದ್ದು ಪರಿಸ್ಥಿತಿ ಯಥಾರೀತಿ ಮುಂದುವರಿಯುತ್ತಿದೆ.

ಕಠಿಣ ನಿಯಂತ್ರಣಗಳಲ್ಲಿ ಸಡಿಲಿಕೆ ಮಾಡಲಾಗಿತ್ತಾದರೂ ಈಗ ಪುನಃ ಮತ್ತೆ ತೀಕ್ಷ್ಣಗೊಳಿಸಲಾಗಿದ್ದು ಜನರ ಬವಣೆ ಇನ್ನಷ್ಟು ಹೆಚ್ಚಳವಾಗಬಹುದು ಎಂದು ವರದಿ ತಿಳಿಸಿದೆ. ಕಾಶ್ಮೀರ ಕಣಿವೆಯಲ್ಲಿ ಅಂಗಡಿ, ಮಾರಕಟ್ಟೆಗಳು ಮುಚ್ಚಿಕೊಂಡಿದ್ದು ಸಂಚಾರ ಕೂಡ ಸ್ಥಗಿತವಾದ ಪರಿಸ್ಥಿತಿ ಮುಂದುವರಿದಿದೆ.