ಕ್ಯಾಂಪ್ ಬಝಾರಿನ ಬಾಂಗ್ಲಾದೇಶಿ ಹಿಂದೂಗಳು: ದಾಖಲೆ ಸಲ್ಲಿಸಿದರೂ ಎನ್ಆ‌ರ್‌ಸಿ ಪಟ್ಟಿಯಿಂದ ಹೊರಗುಳಿದ ಕುಟುಂಬ ಸದಸ್ಯರು!

0
741

ಸನ್ಮಾರ್ಗ ವಾರ್ತೆ

ಗುವಾಹಟಿ,ಸೆ.9: ಬಾಂಗ್ಲಾದೇಶಿ ಹಿಂದೂಗಳ ಕಾಲನಿ ಕ್ಯಾಂಪ್‌ಬಝಾರ್‌ನಲ್ಲಿ ವಾಸಿಸುತ್ತಿರುವ ರಹೇಂದ್ರ ಹಜೊಂಗ್ 1964ರಲ್ಲಿ ಇಲ್ಲಿಗೆ ವಲಸೆ ಬಂದ ದಾಖಲೆ ಸಲ್ಲಿಸಿದರೂ ತನ್ನ ಪತ್ನಿ ಸೀತಾ ದೇವಿ ಪೌರತ್ವ ಪಟ್ಟಿಯಲ್ಲಿ ಸೇರ್ಪಡೆಯಾಗಿಲ್ಲ ಎಂದು ಹೇಳಿದರು. 1964ರಲ್ಲಿ ಪೂರ್ವ ಪಾಕಿಸ್ತಾನದಿಂದ ತನ್ನ ತಂದೆ ಕೈ ಹಿಡಿದು ಅಸ್ಸಾಮ್‍ಗೆ ನಿರಾಶ್ರಿತನಾಗಿ ಬಂದಾಗ ತನಗೆ ಏಳು ವರ್ಷ ವಯಸ್ಸು. ಅಂದು ಪೂರ್ವ ಪಾಕಿಸ್ತಾನ, ಬಾಂಗ್ಲಾದೇಶದಿಂದ ನಮ್ಮೊಂದಿಗೆ ಬಂದಿರುವ ಪರಿಶಿಷ್ಟ ಜಾತಿಯ ಕುಟುಂಬಗಳೂ ಈ ಕಾಲನಿಯ ಸುತ್ತಮುತ್ತ ವಾಸವಿದ್ದಾರೆ.

ಅಸ್ಸಾಮ್ ಸರಕಾರ ಅಂದು ಒದಗಿಸಿದ ಗುಡಿಸಲು, ವಿದ್ಯುತ್ ಈಗಲೂ ನಮಗೆ ಆಸರೆಯಾಗಿದೆ. ಇದಕ್ಕೆ ಸಂಬಂಧಿಸಿದ 1964ರಲ್ಲಿ ಸರಕಾರ ನೀಡಿದ ದಾಖಲೆಗಳು ಕೂಡ ನಮ್ಮ ಬಳಿ ಇವೆ. ಹಾಗಿದ್ದರೂ ಪತ್ನಿ ಸೀತಾ ದೇವಿಯನ್ನು ಪೌರತ್ವ ಪಟ್ಟಿಯಿಂದ ಹೊರಗಿಡಲಾಗಿದೆ. ಇದಕ್ಕೆ ಸೀತಾದೇವಿಯ ತಂದೆಗೆ ಸಂಬಂಧಿಸಿದ 1971ರ ಮೊದಲಿನ ಯಾವ ದಾಖಲೆಗಳು ಇಲ್ಲದಿರುವುದೇ ಕಾರಣ ವೆನ್ನಲಾಗಿದೆ.

ನಿರಾಶ್ರಿತರಿಗೆ ಭಾರತ ಸರಕಾರ ವಾಸಕ್ಕೆ ಅನುಮತಿ ನೀಡಿದಾಗ ಕೊಟ್ಟ ದಾಖಲೆ ಮಾತ್ರ ನಮ್ಮ ಬಳಿ ಇವೆ. ಪ್ರಜೆಯೆಂಬ ಎಲ್ಲ ಹಕ್ಕುಗಳನ್ನೂ ನೀಡಲಾಗಿದೆ. ನಾವು ನಿರಂತರ ಮತದಾನವನ್ನೂ ಮಾಡುತ್ತಾ ಬಂದಿದ್ದೇವೆ. ಆ ಹಕ್ಕುಗಳೆಲ್ಲ ಈಗ ಇಲ್ಲದಾಗುತ್ತಿದೆ ಎಂದು ಹತ್ತಿರದ ಗುಡಿಸಲಿಗೆ ಕರೆದುಕೊಂಡು ಹೋಗಿ ರಾಜೇಂದ್ರರವರು ಪುತ್ರ ರಾಜ್‍ಕುಮಾರ್ ಹಜೋಂಗ್‍ನನ್ನು ಕರೆದರು. ತಂದೆಯದೇ ಅವಸ್ಥೆ ಮಗನದ್ದೂ ಆಗಿದೆ. ಪತ್ನಿ ಕೊನಿಕಾ ಹಜೋಂಗ್ ಪಟ್ಟಿಯಿಂದ ಹೊರಗಿದ್ದಾರೆ. ತನ್ನ ತಂದೆಯ ಅಸ್ಸಾಂ ಪರಂಪರೆಯ ದಾಖಲೆಗಳನ್ನು ಹಾಜರುಪಡಿಸಲು ಕೊನಿಕಾರಿಗೂ ಸಾಧ್ಯವಾಗಿಲ್ಲ. ತಂದೆಯನ್ನು ವಿಚಾರಣೆಗೆ ಕರೆದುಕೊಂಡು ಹೋಗಲಾಗಿತ್ತು. ಗ್ರಾಮದಲ್ಲಿ ಎಲ್ಲ ಮನೆಗಳಲ್ಲಿ ಇದೇ ಅವಸ್ಥೆ ಇದೆ. ಒಂದೇ ಕುಟುಂಬದ ಅರ್ಧದಷ್ಟು ಜನರು ಪಟ್ಟಿಯಿಂದ ಹೊರಗಿದ್ದಾರೆ. ಕ್ಯಾಂಪ್ ಬಝಾರ್ ಇರುವ ಸುರ್ಜೊಗಿರಿ ಗ್ರಾಮ ಪಂಚಾಯತ್‍ನಲ್ಲಿ 642 ಮಂದಿ ಪೌರತ್ವ ಪಟ್ಟಿಯಿಂದ ಹೊರಗಿದ್ದಾರೆ.

2018ರ ಕರಡು ಪಟ್ಟಿಯಲ್ಲಿ ತಂದೆಯ ಹೆಸರು ಬಂದಿತ್ತು ಆದರೆ ತನ್ನ ಹೆಸರು ಬಂದಿರಲಿಲ್ಲ, ಈಗ ನನ್ನ ಹೆಸರು ಬಂದಿದೆ ಆದರೆ ಪತ್ನಿಯ ಹೆಸರಿಲ್ಲ ಎಂದರು.”ಇನ್ನು ಏನು ಮಾಡುತ್ತೀರಿ?” ಎಂದು ಕೇಳಿದಾಗ, “ಇತರರು ಹೇಗೆ ಮಾಡುತ್ತಾರೋ ಹಾಗೆಯೇ ನಾವು ಕೂಡ ಮಾಡುತ್ತೇವೆ” ಎಂದು ರಾಜ್‍ಕುಮಾರ್ ಹಜೋಂಗ್ ಹೇಳಿದರು.

ಪೂರ್ವ ಪಾಕಿಸ್ತಾನ, ಬಾಂಗ್ಲಾದೇಶದಿಂದ ಹಿಂದೂಗಳು ಅಸ್ಸಾಂಗೆ ಬಂದಿದ್ದಾರೆ. ಅವರೆಲ್ಲ ನಿರಾಶ್ರಿತರ ಕಾಲನಿಯಲ್ಲೇ ಉಳಿದುಕೊಂಡಿಲ್ಲ. ಆರ್ಥಿಕವಾಗಿ ಗಟ್ಟಿಯಾಗದ ಪರಿಶಿಷ್ಟ ಜಾತಿ ಕುಟುಂಬಗಳು ಅಲ್ಲಿ ಉಳಿದುಕೊಂಡಿದ್ದಾರೆ. ಸರಿಯಾದ ಆದಾಯ ಇಲ್ಲದ್ದರಿಂದ ಅಂದು ತಂದೆ ಕಟ್ಟಿದ ಗುಡಿಸಲನ್ನು ನವೀಕರಿಸುತ್ತಿದ್ದಾರೆ. “ಇರುವ ಹಣವನ್ನು ಉಪಯೋಗಿಸಿ ಐದಾರು ಬಾರಿ ಹಿಯರಿಂಗ್‍ಗೆ ಹೋದೆವು. ಇನ್ನು ವಿದೇಶಿ ಟ್ರಿಬ್ಯೂನಲ್‍ಗೆ ಹೋಗಬೇಕಾಗಿದೆ.ಆದರೆ ಅದಕ್ಕೆ ವಕೀಲರನ್ನು ಇರಿಸಲು ಆರ್ಥಿಕ ಸ್ಥಿತಿ ತಮ್ಮದಲ್ಲ” ಎಂದು ಬಡವ ರಾಜೇಂದ್ರ ಹಜೊಂಗ್ ಹೇಳುತ್ತಾರೆ.