ಗೋವಿನ ಹೆಸರು ಕೇಳಿದಾಗ ಕೆಲವರಿಗೆ ಕೋಪ ಬರುತ್ತದೆ- ಪ್ರಧಾನಿ ನರೇಂದ್ರ ಮೋದಿ

0
782

ಸನ್ಮಾರ್ಗ ವಾರ್ತೆ

ಮಥುರಾ,ಸೆ.11: “ಗೋವಿನ ವಿಷಯದಲ್ಲಿ ಸರಕಾರವನ್ನು ಟೀಕಿಸುವವರು ದೇಶವನ್ನು ನಾಶಪಡಿಸುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಓಂ, ಗೋವು ಎಂಬ ಪದಗಳನ್ನು ಕೇಳಿದಾಗ ದೇಶ ಹದಿನಾರನೆಯ ಶತಮಾನದಲ್ಲಿದೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ. ಇಂತಹವರು ದೇಶವನ್ನು ನಾಶಪಡಿಸುತ್ತಾರೆ” ಎಂದು ಉತ್ತರ ದೇಶದ ಮಥುರಾದಲ್ಲಿ ಹೇಳಿದರು.

“ಜಾನುವಾರು ಸಾಕಣೆಯ ಅರ್ಥವೇನೆಂದು, ಇದು ದೇಶ ಮತ್ತು ರೈತರ ಅರ್ಥವ್ಯವಸ್ಥೆಗೆ ಎಷ್ಟು ಸಹಾಯಕವೆಂದು ಈ ಜನರಿಗೆ ಗೊತ್ತಿಲ್ಲ” ಎಂದ ಅವರು ಜಾನುವಾರುಗಳಿಗೆ ಸಂಬಂಧಿಸಿದ ರಾಷ್ಟ್ರೀಯ ಪ್ರಾಣಿ ರಕ್ಷಣಾ ಯೋಜನೆಗೆ ಚಾಲನೆ ನೀಡಿ ಮಾತನಾಡುತ್ತಿದ್ದರು. ಉದ್ಘಾಟನಾ ಕಾರ್ಯಕ್ರಮದ ಬಳಿಕ ದನ ಹಾಗೂ ಕರುಗಳ ತಲೆ ನೇವರಿಸಿದರು.

ಜಾನುವಾರುಗಳಿಗೆ ಸಂಬಂಧಿಸಿದ ರೋಗ ಇಲ್ಲದಾಗಿಸಲು ಪ್ರತಿರೋಧಕ ಚುಚ್ಚು ಮದ್ದು ಕೊಡುವುದು ಯೋಜನೆಯ ಉದ್ದೇಶವಾಗಿದೆ. 12,652 ಕೋಟಿ ರೂಪಾಯಿ ವೆಚ್ಚದ ಯೋಜನೆಯಿದಾಗಿದ್ದು, 50ಕೋಟಿ ಜಾನುವಾರುಗಳ ಕಾಲು-ಬಾಯಿ ರೋಗಗಳಿಗೆ ಪ್ರತಿರೋಧಕ ನೀಡುವ ಉದ್ದೇಶ ಇರಿಸಲಾಗಿದೆ. ಇದಲ್ಲದೇ, 3.6ಕೋಟಿ ಕರುಗಳಿಗೆ ಬ್ರೂಸೆಲ್ಲಾಸ್ ಪ್ರತಿರೋಧ ಚುಚ್ಚು ಮದ್ದು ನೀಡಲಾಗುವುದು. ಈ ಯೋಜನೆಗೆ ಕೇಂದ್ರ ಸರಕಾರ ಸಂಪೂರ್ಣ ಧನಸಹಾಯ ಒದಗಿಸಲಿದೆ. 2025ರೊಳಗೆ ಜಾನುವಾರುಗಳಲ್ಲಿ ರೋಗ ನಿಯಂತ್ರಿಸಲು ಮತ್ತು 2030ರಲ್ಲಿ ಸಂಪೂರ್ಣ ರೋಗ ನಿರ್ಮೂಲನದ ಗುರಿಯನ್ನು ಇರಿಸಿಕೊಳ್ಳಲಾಗಿದೆ.

ಗೊರಕ್‌ಪುರ ಮೆದುಳು ಜ್ವರದಿಂದ 70 ಮಕ್ಕಳು ಮೃತಪಟ್ಟಿರುವ ಘಟನೆಯಲ್ಲಿ ಯೋಗಿ ಆದಿತ್ಯನಾಥ ಸರಕಾರವನ್ನು ಪ್ರಧಾನಿ ಸಮರ್ಥಿಸಿಕೊಂಡರು. ಮೆದುಳು ಜ್ವರ ನಿಯಂತ್ರಣಕ್ಕೆ ಆದಿತ್ಯನಾಥ್ ತನ್ನ ಸಾಮರ್ಥ್ಯವನ್ನು ಮೀರಿ ಹೋರಾಡಿದ್ದಾರೆ. ಪಾರ್ಲಿಮೆಂಟಿನಲ್ಲಿಯೂ ಮೆದುಳು ಜ್ವರದ ಕುರಿತು ಗಮನಕ್ಕೆ ತಂದಿದ್ದರು. ಆದರೂ ಮಕ್ಕಳು ಮೃತಪಟ್ಟದ್ದನ್ನು ಸೂಚಿಸಿ ಕೆಲವು ಸ್ಥಾಪಿತ ಹಿತಾಸಕ್ತಿಯ ಜನರು ಸರಕಾರದ ವಿರುದ್ಧ ಆರೋಪ ಹೊರಿಸಿದರು. ಆದರೆ ಯೋಗಿ ತನ್ನ ಕೆಲಸದೊಂದಿಗೆ ಮುಂದೆ ಸಾಗಿದ್ದಾರೆ ಎಂದು ಮೋದಿ ಹೇಳಿದರು.

ಮಥುರಾದಲ್ಲಿ ಜಾನುವಾರುಗಳಿಗಾಗಿ ಸ್ವಚ್ಛಾ ಹೆ ಸೇವಾ, ರಾಷ್ಟೀಯ ಕೃತಕ ಗರ್ಭಧಾರಣೆ ಯೋಜನೆಯನ್ನು ಪ್ರಧಾನಿ ಉದ್ಘಾಟಿಸಿದರು. ಜಾನುವಾರುಗಳು, ಟೂರಿಸಂ, ರಸ್ತೆ ನಿರ್ಮಾಣಗಳಿಗೆ ಸಂಬಂಧಿಸಿದ ಹದಿನಾರು ಯೋಜನೆಗಳಿಗೆ ಅವರು ಚಾಲನೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಮಥುರಾದ ಪ್ಲಾಸ್ಟಿಕ್ ತ್ಯಾಜ ಸಂಗ್ರಹಕಾರರು, ರೈತರು, ಜಾನುವಾರು ವೈದ್ಯರನ್ನು ಮೋದಿ ಸಂದರ್ಶಿಸಿದರು.