ಫಾರ್ಮಸಿಸ್ಟ್ ಡೇ ಮತ್ತು ಮೆಡಿಕಲ್ ಸ್ಟೋರ್ ಗಳ ಕತೆ

0
934

ಏ.ಎಸ್. ದೇರಳಕಟ್ಟೆ

ಸೆಪ್ಟೆಂಬರ್ 25 ಫಾರ್ಮಸಿಸ್ಟ್ ಗಳ ದಿನ. ಈ ನಿಟ್ಟಿನಲ್ಲಿ ಔಷಧ ತಜ್ಞರಾದ ಫಾರ್ಮಸಿಸ್ಟ್ ಗಳ ಮತ್ತು ಅವರು ಸೇವೆ ಸಲ್ಲಿಸುತ್ತಿರುವ ಔಷಧ ಅಂಗಡಿಗಳ ಕುರಿತು ಜನಸಾಮಾನ್ಯರು ಒಂದಿಷ್ಟು ತಿಳಿದುಕೊಳ್ಳುವುದು ಉಚಿತ ಎಂದು ನನ್ನ ಅನಿಸಿಕೆ.

ವೈದ್ಯರು ರೋಗಿಗಳ ರೋಗವನ್ನು ನಿರ್ಣಯಿಸಿ ಅದಕ್ಕೆ ತಕ್ಕ ಚಿಕಿತ್ಸೆಯನ್ನು ಸೂಚಿಸುವುದು ಮತ್ತು ಔಷಧಿ ಚೀಟಿಯನ್ನು ನೀಡುವ ಮೂಲಕವಾಗಿದೆ. ವೈದ್ಯರಿಂದ ಔಷಧಿ ಚೀಟಿಯನ್ನು ಪಡೆದ ರೋಗಿ ನೇರವಾಗಿ ಹತ್ತಿರದ ಫಾರ್ಮಸಿ ಅಥವಾ ಮೆಡಿಕಲ್ ಶಾಪಿನಲ್ಲಿ ರುವ ಫಾರ್ಮಸಿಸ್ಟ್ ಗಳ ಕೈಗಿತ್ತು ಅದರಲ್ಲಿ ಸೂಚಿಸಿರುವ ಔಷಧಿಯನ್ನು ಪಡೆಯುತ್ತಾರೆ. ಹೀಗೆ ಪಡೆಯುವ ಔಷಧಿಗಳನ್ನು ಸರಿಯಾದ ಸಮಯಕ್ಕೆ ಸೇವಿಸುವುದು, ಔಷಧಿಯಲ್ಲಿ ನಮೂದಿಸಿರುವ ಲಿಖಿತ ದಿನಾಂಕವನ್ನು ಖಚಿತಪಡಿಸಿಕೊಳ್ಳುವುದು ಹಾಗೂ ಸೇವಿಸುವ ಔಷಧದಿಂದ ಉದ್ಭವಿಸಬಹುದಾದ ಅಡ್ಡ ಪರಿಣಾಮವನ್ನು ತಿಳಿದುಕೊಳ್ಳಬೇಕಾದುದು ರೋಗಿಯ ಕರ್ತವ್ಯವಾದರೆ, ಮೇಲೆ ಸೂಚಿಸಿದಂತಹ ವಿಷಯಗಳನ್ನು ರೋಗಿಗೆ ಮನವರಿಕೆ ಮಾಡಿಕೊಡಬೇಕಾದ ಜವಾಬ್ದಾರಿ ಫಾರ್ಮಸಿಸ್ಟ್ ಗಳಿಗೆ ಇದೆ. ಮಾತ್ರವಲ್ಲ ಫಾರ್ಮಸಿಗಳಲ್ಲಿ ಔಷಧವನ್ನು ನೀಡಬೇಕಾದುದು ಫಾರ್ಮಸಿಸ್ಟ್ ಗಳೇ ಹೊರತು ಔಷಧದ ಬಗ್ಗೆ ಜ್ಞಾನವಿಲ್ಲದ ಅಥವಾ ಕೇವಲ ಇಂತಿಷ್ಟು ವರ್ಷಗಳ ಅನುಭವದ ಮೇರೆಗೆ ಅವಲಂಬಿಸಿ ಔಷಧವನ್ನು ನೀಡುವ ಪರಿಪಾಠ ಖಂಡಿತಾ ಸಲ್ಲದು. ಏಕೆಂದರೆ ಔಷಧಗಳಲ್ಲಿ ತಾಂತ್ರಿಕವಾಗಿ ಅನೇಕ ಸಾಧಕ ಬಾಧಕಗಳಿವೆ. ಅದನ್ನು ತಿಳಿದು ಸರಿಯಾದ ನಿರ್ದೇಶವನ್ನು ನೀಡಲು ಫಾರ್ಮಸಿಸ್ಟ್ ಗಳಿಗೆ ಮಾತ್ರ ಸಾಧ್ಯ.

ವೈದ್ಯರು ಔಷಧ ಚೀಟಿಯಲ್ಲಿ ಸೂಚಿಸುವ ಔಷಧಗಳನ್ನು ಖಚಿತಪಡಿಸಿ ರೋಗಿಗೆ ನೀಡುವುದು ಫಾರ್ಮಸಿಸ್ಟ್ ಗಳಿಗೆ ಒಂದು ದೊಡ್ಡ ಸವಾಲಾಗಿದೆ. ಏಕೆಂದರೆ ವೈದ್ಯರುಗಳು ಸೂಚಿಸುವ ಬ್ರ್ಯಾಂಡ್ ನೇಮ್ ಕೆಲವೊಮ್ಮೆ ಅಸ್ಪಷ್ಟವಾಗಿರುವುದರ ಕಾರಣ ತಪ್ಪು ಸಂಭವಿಸುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಈ ಪ್ರಮಾದವನ್ನು ದೂರೀಕರಿಸಲು ಕೆಲವು ಕೊಲ್ಲಿ ದೇಶಗಳಲ್ಲಿ ಚಾಲ್ತಿಯಲ್ಲಿರುವಂತೆ ಔಷಧಗಳ ರಾಸಾಯನಿಕದ ಹೆಸರನ್ನು ಸೂಚಿಸಿದರೆ ಇನ್ನೂ ಹೆಚ್ಚು ಉಪಯುಕ್ತವಾಗಬಹುದು.

ಇಂದು ಒಂದೊಂದು ನಗರ ಪ್ರದೇಶಗಳಲ್ಲೂ ನೂರಾರು ಫಾರ್ಮಸಿಗಳಿದ್ದು ಪ್ರತಿಯೊಂದರಲ್ಲೂ ಸೇಲ್ಸ್ ಮಾನ್ ಅಥವಾ ಸೇಲ್ಸ್ ಹುಡುಗಿಯರನ್ನೇ ಅನುಭವದ ಮೇರೆಗೆ ಗೊತ್ತುಪಡಿಸಿ ಔಷಧವನ್ನು ನೀಡುತ್ತಿದ್ದಾರೆ. ಆದರೆ ಅಲ್ಲಿ ಯೋಗ್ಯತೆಯುಳ್ಳ ಫಾರ್ಮಸಿಸ್ಟ್ ಗಳು ಬೆರಳೆಣಿಕೆಯಷ್ಟು ಮಂದಿಯನ್ನು ಮಾತ್ರ ಕಾಣಬಹುದು. ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಮತ್ತು ಕೊಲ್ಲಿ ದೇಶಗಳಲ್ಲಿ ಪ್ರತಿಯೊಂದು ಫಾರ್ಮಸಿಗಳಲ್ಲೂ ಅರ್ಹರಾದ ಮತ್ತು ಆರೋಗ್ಯ ಇಲಾಖೆಯಿಂದ ಮಾನ್ಯತೆ ಪಡೆದ ಫಾರ್ಮಸಿಸ್ಟ್ ಗಳೇ ಔಷಧವನ್ನು ನೀಡಬೇಕೆಂಬ ನಿಯಮವಿದೆ. ಆದರೆ ಭಾರತದಲ್ಲಿ ಇಂತಹ ಕಟ್ಟುನಿಟ್ಟಿನ ಕ್ರಮವಿಲ್ಲದ ಕಾರಣ ಫಾರ್ಮಸಿಸ್ಟ್ ಗಳ ಪರವಾನಿಗೆ ಕೇವಲ ಗೋಡೆಗೆ ಮಾತ್ರ ಸೀಮಿತವಾಗಿದೆಯೇ ಹೊರತು ಅಲ್ಲಿ ಫಾರ್ಮಸಿಸ್ಟ್ ಗಳ ಲಭ್ಯತೆ ಕಂಡುಬರುವುದಿಲ್ಲ.

ರೋಗಿಗಳ ಆರೋಗ್ಯ ರಕ್ಷಣೆ ಕುರಿತು ಜಾಗೃತಿ ಮೂಡಿಸುವುದು ಫಾರ್ಮಸಿಸ್ಟ್ ಗಳ ಜವಾಬ್ದಾರಿಯಾಗಿದೆ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಔಷಧಿಯನ್ನು ದುರುಪಯೋಗಪಡಿಸದಂತೆ ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ಫಾರ್ಮಸಿಸ್ಟ್ ಗಳ ಮಹತ್ವದ ಪಾತ್ರವಿದೆ. ಫಾರ್ಮಸಿ ಕುರಿತು ಸಾರ್ವಜನಿಕ ವಲಯದಲ್ಲಿ ಕಡಿಮೆ ತಿಳಿವಳಿಕೆ ಇದ್ದು, ಇದಕ್ಕೆ ಕಾರಣ ಪ್ರಸ್ತುತದಲ್ಲಿ ಬಳಸುತ್ತಿರುವ ಮೇಡಿಕಲ್ ಸ್ಟೋರ್ ಎಂಬ ಪದವಾಗಿದೆ. ಹಾಗಾಗಿ, ಮುಂದಿನ ದಿನಗಳಲ್ಲಿ ಫಾರ್ಮಸಿ ಎಂಬ ಪದ ಬಳಕೆಗೆ ಆದ್ಯತೆ ನೀಡಬೇಕಾದುದು ಪ್ರಸ್ತುತ ಸಮಾಜದ ಅಗತ್ಯ. ಮಾತ್ರವಲ್ಲ ನಮ್ಮ ದೇಶದಲ್ಲಿರುವ ಶೇಕಡಾ 90ರಷ್ಟು ಔಷಧ ಅಂಗಡಿಗಳೂ ಗುಣಮಟ್ಟವನ್ನು ಕಾಪಾಡಿಕೊಳ್ಳದೇ ಇರುವುದರಿಂದ ಅವುಗಳಿಗೂ ಇತರ ದಿನಸಿ ಅಂಗಡಿಗಳಿಗೂ ಯಾವುದೇ ವ್ಯತ್ಯಾಸ ಕಂಡು ಬರುವುದಿಲ್ಲವೆಂಬುದು ವಾಸ್ತವ. ಕೆಲವು ಔಷಧಗಳನ್ನು ಸರಿಯಾದ ಪ್ರಮಾಣದಲ್ಲಿ ತಾಪಮಾನವನ್ನು ಕಾಯ್ದುಕೊಳ್ಳಬೇಕಾದುದು ಅತಿ ಅಗತ್ಯವಾಗಿದೆ. ಇನ್ಸುಲಿನ್ ಗಳಂತಹ ಕೆಲವು ಔಷಧಗಳನ್ನು 2-8 ರಷ್ಟು ತಾಪಮಾನವನ್ನು ಕಾಯ್ದುಕೊಳ್ಳಬೇಕಾದರೆ ಅದನ್ನು ಫ್ರಿಜರ್ ನಲ್ಲಿ ಶೇಖರಿಸಬೇಕಾಗುತ್ತದೆ. ಆದರೆ ಅದರ ಹೊರತು ಇನ್ನು ಕೆಲವು ಔಷಧಗಳನ್ನು 15-25 ಮತ್ತು 8-15ರ ತಾಪಮಾನವನ್ನು ಕಾಯ್ದು ಕೊಳ್ಳಬೇಕಾದುದು ಔಷಧದ ಸುರಕ್ಷಿತತೆಯ ದೃಷ್ಟಿಯಿಂದ ಅತಿ ಅಗತ್ಯವಾಗಿದೆ. ಆದರೆ ಪ್ರಸ್ತುತ ಮೆಡಿಕಲ್ ಶಾಪ್‍ಗಳಲ್ಲಿ ಈ ಪ್ರಮಾಣವನ್ನು ಕಾಯ್ದುಕೊಳ್ಳುತ್ತಿದ್ದಾರೆಯೇ ಎಂಬುದು ಒಂದು ದೊಡ್ಡ ಪ್ರಶ್ನೆಯಾಗಿದೆ.

ಫಾರ್ಮಸಿ ವಿದ್ಯಾರ್ಥಿಗಳ ಸಂಖ್ಯೆ ಇಂದಿನ ದಿನಗಳಲ್ಲಿ ಹೆಚ್ಚಾಗಿದ್ದು ವರ್ಷಂಪ್ರತಿ ಕಲಿತು ಹೊರಬರುತ್ತಿರುವ ಫಾರ್ಮಸ್ಟ್ ಗಳು ಹೆಚ್ಚುತ್ತಿದ್ದು ಅವರಿಗೆ ಉದ್ಯೋಗದ ಪ್ರಮಾಣ ಮಾತ್ರ ಇಳಿಕೆಯಾಗುತ್ತಿರುವುದು ದುರಾದೃಷ್ಟ. ಅವರ ಅರ್ಹತೆಗೆ ತಕ್ಕ ವೇತನ ಲಭಿಸದೇ ಇರುವ ಕಾರಣದಿಂದಲೂ ಮತ್ತು ಔಷಧಿ ಅಂಗಡಿಯ ಮಾಲಿಕರು ಕಡಿಮೆ ವೇತನಕ್ಕೆ ಫಾರ್ಮಸಿ ವಿದ್ಯಾಭ್ಯಾಸವನ್ನು ಪಡೆಯದ ಉದ್ಯೋಗಾರ್ಥಿಗಳನ್ನು ಫಾರ್ಮಸಿಸ್ಟ್ ಗಳ ಬದಲಿಗೆ ನೇಮಕ ಮಾಡುವ ಕಾರಣದಿಂದಲೂ ಹೆಚ್ಚಿನ ಪ್ರಮಾಣದಲ್ಲಿ ಫಾರ್ಮಸಿಸ್ಟ್ ಗಳು ಕೊಲ್ಲಿ ದೇಶಗಳಿಗೆ ಉದ್ಯೋಗ ಅರಸಿ ಹೋಗುವುದು ಸಹಜ. ಮತ್ತು ಈ ಪ್ರಕ್ರಿಯೆ ಹಿಂದಿನಿಂದಲೂ ನಿರಂತರವಾಗಿ ನಡೆಯುತ್ತಿದೆ. ಈ ನಿಟ್ಟಿನಲ್ಲಿ ನಮ್ಮ ದೇಶದ ಸಂಪನ್ಮೂಲವನ್ನು ಇತರ ದೇಶಗಳಿಗೆ ಧಾರೆಯೆರೆದು ಅವರ ಸೇವೆ ಹೊರದೇಶಗಳಿಗೆ ಲಭ್ಯವಾಗುವುದು ಕ್ಷುಲ್ಲಕವಾಗಿ ಪರಿಗಣಿಸಬೇಕಾದ ವಿಷಯವಲ್ಲ.

ಫಾರ್ಮಸಿ ವಿದ್ಯಾಭ್ಯಾಸಕ್ಕೆ ಈ ಹಿಂದೆಯೂ ಈಗಲೂ ಉದ್ಯೋಗದ ಅವಕಾಶಗಳು ಹೇರಳವಾಗಿವೆ. ಆದರೆ ದೌರ್ಭಾಗ್ಯವಶಾತ್ ಇಂದು ಫಾರ್ಮಸಿ ಕಾಲೇಜುಗಳಲ್ಲಿ B Pharm, M Pharm, Pharm ಕಲಿಯುವ ವಿದ್ಯಾರ್ಥಿಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹುಡುಗಿಯರೇ ಆಗಿದ್ದು ಅವರು ತಮ್ಮ ವಿದ್ಯಾಭ್ಯಾಸ ಮುಗಿಸಿ ವಿವಾಹವಾಗಿ ಪತಿಯ ಮನೆ ಸೇರಿದರೆ ಮುಂದೆ ಭವಿಷ್ಯದಲ್ಲಿ ಅವರ ಸೇವೆ ಕೇವಲ ಮನೆಗೆ ಮಾತ್ರ ಸೀಮಿತವಾಗುತ್ತಿದೆಯೇ ಹೊರತು ಸಮಾಜಕ್ಕೆ ಅವರಿಂದ ಯಾವುದೇ ಪ್ರಯೋಜನವೂ ಲಭ್ಯವಾಗುವುದಿಲ್ಲ. ಇದು ಇತರ ಸಮುದಾಯಕ್ಕಿಂತಲೂ ಮುಸ್ಲಿಮ್ ಸಮುದಾಯದಲ್ಲಿ ಹೆಚ್ಚಾಗಿರುವುದು ಕಂಡುಬರುತ್ತದೆ. ಈ ನಿಟ್ಟಿನಲ್ಲಿ ಸಮುದಾಯದಲ್ಲಿ ಬದಲಾವಣೆಯ ಗಾಳಿ ಬೀಸಬೇಕಾದುದು ಅನಿವಾರ್ಯ.