ಭೀಮ ಕೋರೆಗಾಂವ್ ಅರ್ಜಿ; ವಿಚಾರಣೆ ನಡೆಸುವುದರಿಂದ ಹಿಂದೆ ಸರಿದ ಐದನೆ ಜಡ್ಜ್

0
398

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಅ.4: ಭೀಮ ಕೊರೆಗಾಂವ್ ಪ್ರತಿಭಟನೆಯ ಬೆನ್ನಿಗೆ ಮಾನವಹಕ್ಕು ಕಾರ್ಯಕರ್ತರ ವಿರುದ್ಧ ಮಹಾರಾಷ್ಟ್ರ ಸರಕಾರ ಹೊರಿಸಿದ ಪ್ರಕರಣವನ್ನು ರದ್ದು ಪಡಿಸಬೇಕೆಂದು ಸಲ್ಲಿಸಿದ ಅರ್ಜಿಯಲ್ಲಿ ಆಲಿಕೆಯನ್ನು ನಡೆಸಲು ಐದನೇ ಜಡ್ಜ್ ಕೂಡಾ ಹಿಂದೆ ಸರಿದಿದ್ದಾರೆ.

ಯುಎಪಿಎ ಸಹಿತ ಆರೋಪಗಳನ್ನು ಹೊರಿಸಿದ್ದರ ವಿರುದ್ಧ ಮಾನವಹಕ್ಕು ಕಾರ್ಯಕರ್ತ ಗೌತಮ್ ನವ್‌ಲಾಖ್ ಸಲ್ಲಿಸಿದ ಅರ್ಜಿ ಇದು. ಸುಪ್ರೀಂಕೋರ್ಟಿನ ಜಡ್ಜ್ ಎಸ್.ರವೀಂದ್ರ ಭಟ್ ಈಗ ಹಿಂದೆ ಸರಿದಿದ್ದಾರೆ. ತನ್ನ ವಿರುದ್ಧ ಕೇಸು ರದ್ದು ಪಡಿಸಬೇಕೆಂದು ಆಗ್ರಹಿಸಿದ ಅರ್ಜಿಯನ್ನು ಬಾಂಬೆ ಹೈಕೋರ್ಟು ರದ್ದು ಪಡಿಸಿದ ಹಿನ್ನೆಲೆಯಲ್ಲಿ ನವ್‌ಲಾಖ್ ಸುಪ್ರೀಂಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸಿದಾಗ ಮೂವರು ಸದಸ್ಯರ ಪೀಠದಿಂದ ತಾನು ಹಿಂದೆ ಸರಿಯುತ್ತಿದ್ದೇನೆ ಎಂದು ಗುರುವಾರ ರವೀಂದ್ರ ಭಟ್ ತಿಳಿಸಿದ್ದಾರೆ.

ನವ್‌ಲಾಖ್ ಅರ್ಜಿ ಆಲಿಸಲು ಕಳೆದ ಸೆಪ್ಟಂಬರಿನಲ್ಲಿ 30ನೇ ತಾರೀಕು ಚೀಫ್ ಜಸ್ಟಿಸ್ ರಂಜನ್‌ಗೊಗೊಯಿ ಹಿಂದೆ ಸರಿದಿದ್ದರು. ನಂತರ ಎನ್‍.ವಿ.ರಮಣ, ಆರ್.ಸುಭಾಶ್ ರೆಡ್ಡಿ, ಬಿ.ಆರ್ ಗವಾಯ್ ಹಿಂದೆ ಸರಿದರು. ಗುರುವಾರ ಪುನಃ ಕೇಸು ಪರಿಗಣನೆಗೆ ಬಂದಾಗ ಜಸ್ಟಿಸ್ ಅರುಣ್ ಮಿಶ್ರ, ವಿನೀತ್ ಶರಣ್‍ ಪೀಠದಿಂದ ಭಟ್ ಹಿಂದೆ ಸರಿದಿದ್ದಾರೆ. ಮೂರು ವಾರದ ಬಂಧನ ತಡೆ ಶುಕ್ರವಾರ ಕೊನೆಗೊಳ್ಳುತ್ತಿದೆ ಎಂದು ನವ್‌ಲಾಖ್‌ರ ವಕೀಲರು ಕೋರ್ಟಿಗೆ ತಿಳಿಸಿದಾಗ ಅಂದೇ ಪುನಃ ಅರ್ಜಿಯಲ್ಲಿ ಆಲಿಕೆ ನಡೆಸಲಾಗುವುದು ಎಂದು ಕೋರ್ಟು ತಿಳಿಸಿತು.

2017ರಲ್ಲಿ ಪುಣೆಯಲ್ಲಿ ಭೀಮಕೊರೆಗಾಂವ್ ಪ್ರತಿಭಟನೆ ನಂತರದ ಘಟನೆಯ ಬೆನ್ನಿಗೆ ಮಾವೋವಾದಿ ಸಂಬಂಧ ಆರೋಪಿಸಿ ಅವರ ವಿರುದ್ಧ ಪೊಲೀಸರು ಕೇಸು ದಾಖಲಿಸಿದ್ದರು. ಮೇಲ್ನೋಟಕ್ಕೆ ಕೇಸು ಸರಿಯಾಗಿದೆ ಎಂದು ಹೈಕೋರ್ಟು ಕಂಡು ಕೊಂಡಿತ್ತು. ಆದರೆ ನವ್‌ಲಾಖ್‌ರಿಗೆ ಬಂಧನದಿಂದ ಸಂರಕ್ಷಣೆಯನ್ನು ನೀಡಿತು. ವರವರ ರಾವ್, ಅರುಣ್ ಫೆರಾರಿಯ, ವರ್ನಾನ್ ಗೋನ್ಸಾಲ್ವಿಸ್, ಸುಧಾ ಭಾರದ್ವಾಜ್ ವಿರುದ್ಧವೂ ಕೇಸು ದಾಖಲಿಸಿಕೊಳ್ಳಲಾಗಿತ್ತು.