ಸನ್ಮಾರ್ಗ ವಾರ್ತೆ-
ದ ಇಂಡಿಯನ್ ಎಕ್ಸ್ ಪ್ರೆಸ್ ವರದಿ
ಗೋಹತ್ಯೆ ನಡೆಸಿರುವ “ಸುಳ್ಳು” ಆರೋಪದೊಂದಿಗೆ ಜೈಲಿನಲ್ಲಿ ಕಳೆದ 89 ದಿನಗಳು ಬಾಲಿ ಮುಂಡಾರನ್ನು ಬಾಣದಂತೆ ತಿವಿಯುತ್ತಿದೆ. ಅಲ್ಲದೆ, ಅವರು ತಮ್ಮ ಗ್ರಾಮದಿಂದ ಖುಂಟಿ ಜಿಲ್ಲಾ ನ್ಯಾಯಾಲಯಕ್ಕೆ 21 ಬಾರಿ ಮಾಡಿದ ಪ್ರಯಾಣವನ್ನು ಮತ್ತು ಕಾನೂನು ವೆಚ್ಚಗಳನ್ನು ಪೂರೈಸಲಿಕ್ಕಾಗಿ ಸಂಬಂಧಿಕರಿಂದ ಪಡೆದ 14,000 ರೂ. ಸಾಲವನ್ನು ಅವರಿಂದ ಮರೆಯಲಾಗುತ್ತಿಲ್ಲ.
63ರ ಹರೆಯದ ಅವರನ್ನು ಈ ವರ್ಷದ ಜನವರಿಯಲ್ಲಿ ಸಾಕ್ಷ್ಯಾಧಾರದ ಕೊರತೆಯಿಂದ ಖು೦ಟಿ ಜಿಲ್ಲಾ ನ್ಯಾಯಾಲಯ ಖುಲಾಸೆಗೊಳಿಸಿದೆ ಮತ್ತು ಈಗ ತಾನು ಜೀವಂತವಾಗಿರುವುದೇ ಅದೃಷ್ಟ ಎಂದು ಅವರು ಹೇಳುತ್ತಾರೆ. ಹಾಗಂತ ಗೋಹತ್ಯೆಯ ಆರೋಪದಲ್ಲಿ ಹತ್ಯೆ, ಹಲ್ಲೆಯು ಝಾರ್ಖಂಡ್ ನಲ್ಲಿ ಕಡಿಮೆಯಾಗಿಲ್ಲ. ಸೆಪ್ಟೆಂಬರ್ 22 ರಂದು 40 ವರ್ಷದ ಕಲಾಂಟಸ್ ಬಾರ್ಲಾರ ಮೇಲೆ ಗೋಹತ್ಯೆ ಆರೋಪದಲ್ಲಿ ಗುಂಪು ಹಲ್ಲೆ ನಡೆದಿದೆ. ಇದಕ್ಕಾಗಿ ಪೊಲೀಸರು ಕಳೆದ ವಾರ ಮೂವರನ್ನು ಬಂಧಿಸಿದ್ದಾರೆ.
ದಿ ಇಂಡಿಯನ್ ಎಕ್ಸ್ಪ್ರೆಸ್ ಪತ್ರಿಕೆಗೆ ಲಭ್ಯವಾದ ದಾಖಲೆಗಳ ಪ್ರಕಾರ ಗೋಹತ್ಯೆ ಆರೋಪದ ಮೇಲೆ ಅಥವಾ ಪ್ರಾಣಿಗಳ ಮೇಲಿನ ಕ್ರೌರ್ಯವನ್ನು ತಡೆಗಟ್ಟುವ ಕಾಯ್ದೆಯಡಿ ಕನಿಷ್ಠ 53 ಜನರ ಮೇಲೆ ಕೇವಲ ಖು೦ಟಿ ಜಿಲ್ಲೆಯೊಂದರಲ್ಲೇ ಪ್ರಕರಣ ದಾಖಲಾಗಿದ್ದು, 2018 ರಿಂದ ಈವರೆಗೆ 16 ಪ್ರಕರಣಗಳಲ್ಲಿ ಆರೋಪಿಗಳು ಖುಲಾಸೆಗೊಂಡಿದ್ದಾರೆ.
ವಶಪಡಿಸಿಕೊಂಡ ಹಸುವಿನ ಮಾಂಸವನ್ನು ಎಫ್ಎಸ್ಎಲ್ಗೆ ಪರೀಕ್ಷೆಗೆ ಕಳುಹಿಸಲಾಗಿಲ್ಲ ಎಂಬುದನ್ನು ಪತ್ತೆ ಹಚ್ಚಿದ ಬಳಿಕ ನ್ಯಾಯಾಲಯಗಳು ಆರೋಪಿಗಳನ್ನು ಬಿಡುಗಡೆಗೊಳಿಸಿವೆ. ಅಲ್ಲದೇ ಸಾಕ್ಷಿಗಳು ಎಂದಿಗೂ ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ. ವಿಶೇಷ ಏನೆಂದರೆ, ಹೀಗೆ ಹಾಜರಾಗದ ಎರಡು ಪ್ರಕರಣಗಳಲ್ಲಿ ಭಜರಂಗದಳದ ಸದಸ್ಯರೇ ಸಾಕ್ಷಿಯಾಗಿದ್ದರು.
ಆಗಸ್ಟ್ 2017ರಲ್ಲಿ ಖುಂಟಿಯ ಜಲ್ತಾಂಡಾ ಬಜಾರ್ ಬಳಿ ಮುಂಡಾನ ಮೇಲೆ ಗೋರಕ್ಷಕರು ಹಲ್ಲೆ ನಡೆಸಿದರು ಮತ್ತು ಮುಂಡಾರನ್ನು ಬಂಧಿಸಲಾಯಿತು. ಮುಂಡಾರ ಮೇಲೆ ದಾಳಿ ನಡೆದ ಕೇವಲ 8 ಕಿ.ಮೀ ದೂರದಲ್ಲಿರುವ ಸೌರಿ ಗ್ರಾಮದಲ್ಲಿ ಗುಂಪಿನಿಂದ ಬಾರ್ಲಾ ಕೊಲ್ಲಲ್ಪಟ್ಟರು ಮತ್ತು ಇನ್ನಿಬ್ಬರು ಗಾಯಗೊಂಡರು. ಮುಂಡಾರ ಮೇಲೆ ನಡೆದ ದಾಳಿಯ ಎರಡು ವರ್ಷಗಳ ಬಳಿಕ ಈ ದಾಳಿ ನಡೆದಿತ್ತು.
“ಗುಂಪು ದಾಳಿ ಮಾಡಿದಾಗ ಏನಾಗುತ್ತದೆ ಎಂದು ನಾನು ಊಹಿಸಬಲ್ಲ. ಭಜರಂಗದಳದ ಸದಸ್ಯರು ನನಗೆ ಕಪಾಳಮೋಕ್ಷ ಮಾಡಿ ಪೊಲೀಸರಿಗೆ ಒಪ್ಪಿಸಿದರು. ನಾನು ಜೀವಂತವಾಗಿರುವುದು ನನ್ನ ಅದೃಷ್ಟ” ಎಂದು ಮುಂಡಾ ಹೇಳಿದರು.
ಖುಂಟಿ ಜಿಲ್ಲಾ ನ್ಯಾಯಾಲಯದಲ್ಲಿ ಇದೇ ರೀತಿಯ ಪ್ರಕರಣಗಳಲ್ಲಿ ಇತರ ಆರೋಪಿಗಳನ್ನು ಪ್ರತಿನಿಧಿಸುವ ವಕೀಲ ರಮೇಶ್ ಜೈಸ್ವಾಲ್, “ಕಳೆದ ಕೆಲವು ವರ್ಷಗಳಲ್ಲಿ ನಾನು ಒಂದೇ ಒಂದು ಆರೋಪ ಸಾಬೀತಾಗಿರುವುದನ್ನು ನಾನು ಕಂಡಿಲ್ಲ. ಏಕೆಂದರೆ ನ್ಯಾಯಾಲಯಕ್ಕೆ ಯಾವುದೇ ಪುರಾವೆಗಳು ಹಾಜರಾಗುವುದಿಲ್ಲ. ಮಾಂಸವನ್ನು ಎಫ್ಎಸ್ಎಲ್ಗೆ ಕಳುಹಿಸಲಾಗುವುದಿಲ್ಲ. ಈ ರೀತಿಯಾಗಿ, ಪ್ರಕರಣಗಳು ದುರ್ಬಲಗೊಳ್ಳುತ್ತವೆ” ಎಂದವರು ಹೇಳಿದರು.
ಆದಾಗ್ಯೂ, ಖುಲಾಸೆಗೊಂಡ ಮುಂಡ ಸಂತೋಷದಿಂದೇನೂ ಇಲ್ಲ. “ಜೈಲಿನಲ್ಲಿ, ನನ್ನ ಆರೋಗ್ಯವು ಹದಗೆಟ್ಟಿತು ಮತ್ತು ನಾನು ಇನ್ನೂ ಚೇತರಿಸಿಕೊಂಡಿಲ್ಲ. ವೈದ್ಯರು ಆದಷ್ಟು ಬೇಗ ಚಿಕಿತ್ಸೆಗೆ ಸಲಹೆ ನೀಡಿದ್ದಾರೆ. ಆದರೆ, ಹಣದ್ದೇ ಸಮಸ್ಯೆ. ನಾವು ಹಳ್ಳಿಯಲ್ಲಿ ಗೌರವ ಕಳೆದುಕೊಂಡಿದ್ದೇವೆ” ಎಂದು ಅವರು ಹೇಳಿದರು.












