ಹೈದರಾಬಾದ್ ವೈದ್ಯೆಯ ಹತ್ಯೆ: ಆರೋಪಿಗಳನ್ನು ಪತ್ತೆ ಹಚ್ಚಲು ನೆರವಾದ ಸಿಸಿ ಟಿವಿ ಫೂಟೇಜ್

0
1305

ಸನ್ಮಾರ್ಗ ವಾರ್ತೆ-

ಹೈದರಾಬಾದ್ ನ ಪಶು ವೈದ್ಯೆಯಯನ್ನು ಕೊಲೆಗೈದ ಆರೋಪಿಗಳನ್ನು ಪತ್ತೆ ಹಚ್ಚಲು ಟೋಲ್ ಪ್ಲಾಜಾ ಬಳಿ ಇರುವ ಸಿಸಿಟಿವಿ ಕ್ಯಾಮೆರಾದ ತುಣುಕು ಪೊಲೀಸರಿಗೆ ಸಹಾಯ ಮಾಡಿತು. ತೆಲಂಗಾಣದ ಅತ್ಯಾಚಾರ ಮತ್ತು ಕೊಲೆ ಆರೋಪಿತರನ್ನು ಪತ್ತೆಹಚ್ಚುವುದಕ್ಕೆ ನೆರವಾದ ಸಿಸಿಟಿವಿ ದೃಶ್ಯಾವಳಿಗಳು ಇಂಡಿಯಾ ಟುಡೆ ಟಿವಿಗೆ ಲಭ್ಯವಾಗಿದೆ. ರಾಷ್ಟ್ರೀಯ ಹೆದ್ದಾರಿ 44 ರಲ್ಲಿ ಹೈದರಾಬಾದ್‌ನ ಹೊರವಲಯದಲ್ಲಿರುವ ಶಮ್‌ಶಾಬಾದ್ ಟೋಲ್ ಪ್ಲಾಜಾದಿಂದ ಈ ತುಣುಕನ್ನು ಪಡೆಯಲಾಗಿದ್ದು, ಈ ತುಣುಕುಗಳ ಸಹಾಯದಿಂದಲೇ ಪ್ರಕರಣವನ್ನು ಭೇದಿಸಲಾಯಿತು. ವೀಡಿಯೊ ದೃಶ್ಯವು ಟೋಲ್ ಪ್ಲಾಜಾ ಬಳಿ ನಿಲ್ಲಿಸಿರುವ ಟ್ರಕ್ ಅನ್ನು ತೋರಿಸುತ್ತದೆ. ಕೆಲವು ಸೆಕೆಂಡುಗಳಲ್ಲಿ ಟ್ರಕ್‌ನ ಹೆಡ್‌ಲೈಟ್‌ಗಳು ಆನ್ ಆಗುತ್ತವೆ. ಟ್ರಕ್ ನಂತರ ನಿಧಾನವಾಗಿ ಚಲಿಸಲು ಪ್ರಾರಂಭಿಸುತ್ತದೆ. ನವೆಂಬರ್ 26 ರಿಂದ ಟೋಲ್ ಪ್ಲಾಜಾ ಬಳಿ ಈ ಟ್ರಕ್ ಅನ್ನು ನಿಲ್ಲಿಸಲಾಗಿರುವುದನ್ನು ಸಿಸಿ ಟಿವಿ ಫೂಟೇಜ್ ತೋರಿಸುತ್ತದೆ. ನವೆಂಬರ್ 27ರಂದು ಮಹಿಳೆಯನ್ನು ಅತ್ಯಾಚಾರ ಮಾಡಿ ಹತ್ಯೆ ಮಾಡಲಾಗಿತ್ತು. ಹಲವಾರು ಜನರು ಟ್ರಕ್‌ನ ಕ್ಯಾಬಿನ್‌ಗೆ ಪ್ರವೇಶಿಸಿ ಹೊರಹೋಗುವುದನ್ನು ತುಣುಕಿನಲ್ಲಿ ಕಾಣಬಹುದು. ಈ ಸಮಯದಲ್ಲಿಯೇ ವೈದ್ಯೆ ತನ್ನ ದ್ವಿಚಕ್ರ ವಾಹನವನ್ನು ಟ್ರಕ್ ಬಳಿ ನಿಲ್ಲಿಸಿದರು. ಆ ಸಂದರ್ಭದಲ್ಲಿ ಆರೋಪಿಗಳು ಮದ್ಯ ಸೇವಿಸುತ್ತಿದ್ದರು ಮತ್ತು ಅತ್ಯಾಚಾರ ಮಾಡುವ ಯೋಜನೆ ರೂಪಿಸಿದರು.

ಅವರಲ್ಲಿ ಒಬ್ಬರು ಸ್ಕೂಟರ್‌ನ ಹಿಂದಿನ ಟೈರ್‌ ಪಂಕ್ಚರ್ ಮಾಡಿದರು ಮತ್ತು ಬಳಿಕ ರಾತ್ರಿ ಆಕೆ ಬಂದಾಗ ನೆರವನ್ನು ನೀಡುವ ನೆಪದಲ್ಲಿ ಸಮೀಪಿಸಿ ಯೋಜನೆ ಕಾರ್ಯಗತಗೊಳಿಸಿದರು. ಆಕೆಯನ್ನು ಹತ್ತಿರದ ಕಾಂಪೌಂಡ್‌ಗೆ ಎಳೆದು ಸಾಮೂಹಿಕ ಅತ್ಯಾಚಾರ ಎಸಗಲಾಯಿತು. ಸಿಸಿಟಿವಿ ದೃಶ್ಯಾವಳಿಗಳು ಈ ಎಲ್ಲವನ್ನು ದಾಖಲಿಸುವುದಿಲ್ಲ, ಆದರೆ ಟೋಲ್ ಪ್ಲಾಜಾದಿಂದ ಹೊರಬಂದ ಟ್ರಕ್ ಅನ್ನು ಇದು ದಾಖಲಿಸುತ್ತದೆ. ಪೊಲೀಸರ ಪ್ರಕಾರ, ಮಹಿಳೆ ಆ ಸಂದರ್ಭದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಇದ್ದರು.

ಸೌಜನ್ಯ: ದ ಇಂಡಿಯನ್ ಎಕ್ಸ್ ಪ್ರೆಸ್