ಸನ್ಮಾರ್ಗ ವಾರ್ತೆ-
ಹೊಸದಿಲ್ಲಿ, ಡಿ. 17: ಉನ್ನಾವ ಅತ್ಯಾಚಾರ ಪ್ರಕರಣದಲ್ಲಿ ಉತ್ತರ ಪ್ರದೇಶದ ಮಾಜಿ ಬಿಜೆಪಿ ಶಾಸಕ ಕುಲ್ದೀಪ್ ಸೇಂಗರ್ ತಪ್ಪಿತಸ್ಥ ಎಂದು ಕೋರ್ಟು ಹೇಳಿದೆ. ದಿಲ್ಲಿಯ ತೀಸ್ ಹಝಾರಿ ಕೋರ್ಟು ತೀರ್ಪು ನೀಡಿದ್ದು ಒಂಬತ್ತು ಆರೋಪಿಗಳಲ್ಲಿ ಒಬ್ಬನ್ನು ಖುಲಾಸೆ ಗೊಳಿಸಿದೆ. ಶಿಕ್ಷೆ ಗುರುವಾರ ಘೋಷಿಸುವುದಾಗಿ ಕೋರ್ಟು ತಿಳಿಸಿದೆ. 2017ರಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಎಸಗಿದ ಕೇಸು ಶಾಸಕ ವಿರುದ್ಧ ನಡೆಯುತ್ತಿದೆ.
13 ಪ್ರಾಸಿಕ್ಯೂಶನ್ ಸಾಕ್ಷಿಗಳು ಒಂಬತ್ತು ಆರೋಪಿ ಕಡೆಯ ಸಾಕ್ಷಿಗಳ ವಿಚಾರಣೆ ನಡೆಯಿತು. ಬಾಲಕಿಯ ತಾಯಿ, ಮಾವ ಪ್ರಧಾನ ಸಾಕ್ಷಿಗಳು. ದಿಲ್ಲಿ ಏಮ್ಸ್ ನಲ್ಲಿ ಬಾಲಕಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಹೇಳಿಕೆ ಪಡೆಯಲು ಆಸ್ಪತ್ರೆಯಲ್ಲಿ ವಿಶೇಷ ಕೋರ್ಟಿನ ವ್ಯವಸ್ಥೆ ಮಾಡಲಾಗಿತ್ತು. ಭಾರತದ ದಂಡ ಸಂಹಿತೆ, ಪೊಕ್ಸೊ ಕಾನೂನು ಪ್ರಕರಣದ ವಿವಿಧ ಸೆಕ್ಷನ್ಗಳಲ್ಲಿ ಶಾಸಕ ಮತ್ತು ಆತನ ಸಂಗಡಿಗರ ವಿರುದ್ಧ ಆರೋಪ ಹೊರಿಸಲಾಗಿದೆ. ಬಾಲಕಿಯ ಪತ್ರ ಪರಿಗಣಿಸಿ ಐದು ಕೇಸುಗಳನ್ನು ಸುಪ್ರೀಂಕೋರ್ಟು ದಿಲ್ಲಿ ಕೋರ್ಟಿಗೆ ವರ್ಗಾಯಿಸಿತ್ತು. ಸಾಮೂಹಿಕ ಅತ್ಯಾಚಾರ, ವಾಹನ ಢಿಕ್ಕಿಹೊಡೆದು ಕೊಲ್ಲುವ ಯತ್ನ, ತಂದೆಯನ್ನು ಅನ್ಯಾಯವಾಗಿ ಕಸ್ಟಡಿಯಲ್ಲಿ ಕೊಲೆ ಮಾಡಿದ್ದು ಮತ್ತು ಇತರ ನಾಲ್ಕು ಕೇಸುಗಳ ವಿಚಾರಣೆ ನಡೆಯುತ್ತಿದೆ.












