ಸನ್ಮಾರ್ಗ ವಾರ್ತೆ
ಹೊಸದಿಲ್ಲಿ, ಜ. 11: ಪೌರತ್ವ ತಿದ್ದುಪಡಿ ಕಾನೂನಿಗೆ ಸಂಬಂಧಿಸಿ ಶಾಲೆಗಳಲ್ಲಿ ಪ್ರಚಾರ ನಡೆಸುವ ಬಿಜೆಪಿಯ ತೀರ್ಮಾನದ ವಿರುದ್ಧ ಮಹಾರಾಷ್ಟ್ರ ಸಚಿವ ಆದಿತ್ಯ ಠಾಕರೆ ಕಟು ಟೀಕೆ ಮಾಡಿದ್ದು ನೀಚ ರಾಜಕೀಯವನ್ನು ಬಿಜೆಪಿ ಮಾಡುತ್ತಿದೆ ಎಂದರು. ಮುಂಬೈ ಮಾಟುಂಗ ಶಾಲೆಯಲ್ಲಿ ಬಿಜೆಪಿ ನಾಯಕರು ಸಿಎಎ ಕುರಿತು ತರಗತಿ ನಡೆಸಿದರು. ಇದರ ವಿರುದ್ಧ ವ್ಯಾಪಕ ಪ್ರತಿಭಟನೆ ವ್ಯಕ್ತವಾಗಿದೆ. ಈ ನಡುವೆ ಠಾಕ್ರೆ ಬಿಜೆಪಿಯನ್ನು ಬಹಿರಂಗ ತರಾಟೆಗೆತ್ತಿಕೊಂಡರು.
ಶಾಲೆಯಲ್ಲಿ ಇಂತಹ ಪ್ರಚಾರ ಮಾಡುವುದು ಅಪಹಾಸ್ಯಕರವಾಗಿದೆ. ಶಾಲೆಯನ್ನು ರಾಜಕೀಯಗೊಳಿಸಲು ಬಿಡುವುದಿಲ್ಲ. ಮಹಿಳಾ ಸಮಾನತೆ, ಹೆಲ್ಮೆಟ್, ಪರಿಸರ ಶುಚಿತ್ವ ವಿಷಯದಲ್ಲಿ ಶಾಲೆಗಳಲ್ಲಿ ರಾಜಕೀಯ ನಾಯಕರು ತರಗತಿ ಮಾಡಬಹುದು ಎಂದು ಠಾಕ್ರೆ ಹೇಳಿದರು. ಸಿಎಎಯನ್ನು ಆದಿತ್ಯ ಠಾಕ್ರೆ ರಾಜಕೀಯಗೊಳಿಸುತ್ತಿದ್ದಾರೆ ಎಂದು ಬಿಜೆಪಿ ವಕ್ತಾರ ಮಾಧವ ಭಂಡಾರಿ ಹೇಳಿದ್ದಾರೆ. ಕಾನೂನಿಗೆ ಸಂಬಂಧಿಸಿ ದೇಶಾದ್ಯಂತ ಪ್ರಚಾರ ಆರಂಭಿಸಲಾಗಿದೆ. ಎಲ್ಲ ವಿಭಾಗದ ಜನರಿಗೆ ತಲುಪಿಸುವುದು ಬಿಜೆಪಿಯ ಗುರಿಯಾಗಿದೆ ಎಂದು ಅವರು ಹೇಳಿದರು.












