ಸನ್ಮಾರ್ಗ ವಾರ್ತೆ
ಮಂಗಳೂರು; ಜ. 11- NRC ,NPR, CAA ಕಾಯ್ದೆಗಳನ್ನು ವಿರೋಧಿಸಿ ಮತ್ತು ಜೆ ಎನ್ ಯು ವಿದ್ಯಾರ್ಥಿಗಳ ಮೇಲಿನ ಹಲ್ಲೆಯನ್ನು ಖಂಡಿಸಿ ವುಮೆನ್ ಇಂಡಿಯಾ ಮೂವ್ ಮೆಂಟ್ ದ ಕ ಜಿಲ್ಲಾ ಸಮಿತಿಯ ವತಿಯಿಂದ ಇವತ್ತು ಬೆಳಿಗ್ಗೆ ಮಂಗಳೂರಿನ ಟೌನ್ ಹಾಲ್ ಮುಂಭಾಗ ಪ್ರತಿಭಟನಾ ಸಭೆ ನಡೆಯಿತು
ಮುಖ್ಯ ಭಾಷಣಕಾರರಾಗಿ ಸಾಮಾಜಿಕ ಹೋರಾಟಗಾರ್ತಿ ನಜ್ಮಾ ಚಿಕ್ಕನೇರಳೆ, ನ್ಯಾಷನಲ್ ವುಮೆನ್ಸ್ ಫ್ರಂಟ್ ನ ರಾಷ್ಟ್ರೀಯ ಸಮಿತಿ ಸದಸ್ಯೆ ದಿಲ್ದಾರ್ ಭಟ್ಕಳ, ಸೌತ್ ಕನ್ನಡ ಸಲಫಿ ಮೂವ್ ಮೆಂಟ್ ನ ಮುಜಾಹಿದಾ, ಅಂಕಣಗಾರ್ತಿ, ಸಾಹಿತಿ ಜ್ಯೋತಿ ಗುರುಪ್ರಸಾದ್, ಮಂಗಳೂರು ಘಟನೆಯಲ್ಲಿ ಗೋಲಿಬಾರ್ ಗೆ ಒಳಗಾಗಿ ಮೃತಪಟ್ಟ ಜಲೀಲ್ ಕುಟುಂಬದ ಸದಸ್ಯೆ ಸಕೀನಾ, ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ರಾಜ್ಯ ಸಮಿತಿ ಸದಸ್ಯರಾದ ಅಂಬ್ರೀನ್, ವುಮೆನ್ ಇಂಡಿಯಾ ಮೂವ್ ಮೆಂಟ್ ನ ರಾಜ್ಯ ಅಧ್ಯಕ್ಷೆ ಶಾಹಿದಾ ತಸ್ನೀಮ್ ಮುಂತಾದವರು ಮಾತಾಡಿದರು.
1955 ಪೌರತ್ವ ಕಾಯಿದೆಯನ್ನು ತಿದ್ದುಪಡಿ ಮಾಡಿ ಧರ್ಮದ ಆಧಾರದಲ್ಲಿ ಪ್ರಜೆಗಳನ್ನು ವಿಭಜಿಸುವಂತೆ ಸಿಎಎ ರಚಿಸಲಾಗಿದೆ. ಪಾಕಿಸ್ತಾನ ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನ ದಿಂದ ವಲಸೆ ಬಂದಿರುವ ಮುಸ್ಲಿಮೇತರ ಧರ್ಮಗಳಾದ ಹಿಂದು, ಕ್ರೈಸ್ತ ಸಿಖ್, ಬೌದ್ಧ, ಜೈನ, ಪಾರಸಿ ಧರ್ಮಿಯರಿಗೆ 2014 ರ ಮೊದಲು ನೆಲೆಸಿರುವವರಿಗೆ ಈ ಹೊಸ ಕಾನೂನಿನಲ್ಲಿ ವ್ಯವಸ್ಥೆ ಇದೆ. ಈ ಕಾನೂನು ಕೇಂದ್ರ ಸರಕಾರದ ಕೋಮು ಅಜೆಂಡಾದ ಭಾಗವಾಗಿದೆ.
1950 ಜನವರಿ 26 ರಂದು ಅಸ್ತಿತ್ವಕ್ಕೆ ಬಂದಿರುವ ಮೂಲಭೂತ ತತ್ವಕ್ಕೆ ಈ ಕಾಯಿದೆಯ ತಿದ್ದುಪಡಿಯು ವಿರುದ್ಧವಾಗಿದೆ. ಅದೇ ರೀತಿ ಸಂವಿಧಾನದ 14,15 ಕಾಯಿದೆಗಳಿಗೆ ವಿರುದ್ಧವಾಗಿದೆ.
ದೇಶ ಮತ್ತು ವಿದೇಶಗಳ ಪ್ರೊಫೆಸರ್ ಗಳು, ಕಲಾವಿದರು, ವಿಜ್ಞಾನಿಗಳು, ಪ್ರಗತಿಪರರು, ಪತ್ರಕರ್ತರು, ರಾಜಕಾರಣಿಗಳು ಮುಂತಾದವರು ಈ ಕಾಯಿದೆಯನ್ನು ವಿರೋಧಿಸಿ ಸರಕಾರಕ್ಕೆ ಪತ್ರ ಬರೆದಿದ್ದಾರೆ. ಇದರ ವಿರುದ್ಧ ದೇಶಾದ್ಯಂತ ವಿವಿಧ ಸ್ಥರಗಳಲ್ಲಿ ವಿವಿಧ ರೂಪದಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ಈ ಪ್ರತಿಭಟನೆಗಳನ್ನು ಹತ್ತಿಕ್ಕಲು ಪೋಲಿಸರ ಮೂಲಕ ವಿಶೇಷತಃ ಬಿಜೆಪಿ ಆಡಳಿತ ಇರುವ ರಾಜ್ಯಗಳಲ್ಲಿ ಬಲಪ್ರಯೋಗದ ಮೂಲಕ ಹತ್ತಿಕ್ಕುವ ಕ್ರೂರ ಪ್ರಯತ್ನಗಳು ನಡೆದಿದೆ. ಉತ್ತರ ಪ್ರದೇಶ, ಅಸ್ಸಾಂ ಮುಂತಾದ ರಾಜ್ಯಗಳಲ್ಲಿ 28 ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಗೋಲಿಬಾರ್ ನಡೆಸಿ ಹತ್ಯೆಗೆಯ್ಯಲಾಗಿದೆ.
ಮಂಗಳೂರಿನಲ್ಲಿ ಕೂಡ ಎರಡು ಅಮಾಯಕ ಜೀವಗಳು ಬಲಿಯಾದವು, ಇದು ಸಾಲದು ಎಂಬಂತೆ ಆಸ್ಪತ್ರೆಗಳಲ್ಲಿ ಹಲವಾರು ಮಂದಿ ಜೀವನ್ಮರಣ ಹೋರಾಟದಲ್ಲಿ ಇದ್ದಾರೆ, ಜೊತೆಗೆ ಸಂಘಪರಿವಾರದ ಶಕ್ತಿಗಳು ಮತ್ತು ಪೋಲಿಸರು ವಿಶ್ವವಿದ್ಯಾನಿಲಯಗಳಲ್ಲಿ ನಡೆಸಿದ ದಾಂದಲೆ ವಿಶ್ವದಾದ್ಯಂತ ಚರ್ಚೆಯಾಗುತ್ತಿದೆ.
ಈ ಮದ್ಯೆ ಸರಕಾರ ಪರಸ್ಪರ ವಿರುದ್ಧ ಹೇಳಿಕೆಗಳನ್ನು ನೀಡಿ ಜನರ ದಿಕ್ಕು ತಪ್ಪಿಸುವ ಕೆಲಸವನ್ನು ಮಾಡುತ್ತಿದೆ. ಆದ್ದರಿಂದ ಸಿಎಎ, ಎನ್ ಆರ್ ಸಿ ಮತ್ತು ಎನ್ ಪಿ ಆರ್ ಗೆ ಅಸಹಕಾರ ವ್ಯಕ್ತಪಡಿಸಿ ನಾಗರಿಕರು ಬಹಿಷ್ಕಾರ ಹಾಕಬೇಕೆಂದು ವುಮೆನ್ಸ್ ಇಂಡಿಯ ಕರೆ ನೀಡಿದೆ ಹಾಗೂ ಈ ಮೂರು ಸಂವಿಧಾನ ವಿರೋಧಿ ಕಾನೂನುಗಳನ್ನು ರದ್ದು ಪಡಿಸಬೇಕೆಂದು ವಿಮೆನ್ ಇಂಡಿಯಾ ಮೂವ್ ಮೆಂಟ್ ಸರಕಾರವನ್ನು ಒತ್ತಾಯಿಸಿದೆ.












