ಸನ್ಮಾರ್ಗ ವಾರ್ತೆ-
ಟೆಹ್ರಾನ್/ವಾಷಿಂಗ್ಟನ್, ಜ.14: ವಿಶ್ವ ಯುದ್ಧದ ಬೆದರಿಕೆ ಸೃಷ್ಟಿಸಿದ ಅಮೆರಿಕ- ಇರಾನ್ ಘರ್ಷಣೆಯಲ್ಲಿ ತುಸು ಸಡಿಲಿಕೆಯಾಗಿದೆ. ಬಿಕ್ಕಟ್ಟು ನಿವಾರಣೆಗೆ ಏಕೈಕ ದಾರಿ ಯುದ್ಧಭೀತಿ ಇಲ್ಲದಾಗಿಸುವುದು ಎಂದು ಇರಾನ್ ಹೇಳಿದೆ.
ಇರಾನಿನೊಂದಿಗೆ ಹೊಸ ದಾರಿಯಲ್ಲಿ ಮುಂದೆ ಸಾಗುವ ಕುರಿತು ಚರ್ಚೆ, ಸಮಾಲೋಚನೆಗೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಿದ್ಧ ಎಂದು ಅಮೆರಿಕ ರಕ್ಷಣಾ ಕಾರ್ಯದರ್ಶಿ ಮಾಕ್ ಎಸ್ಪೇರ್ ಹೇಳಿದ್ದಾರೆ. ದಿಗ್ಬಂಧನ ತೆರವುಗೊಳಿಸಿದ ಬಳಿಕವೇ ಅಮೆರಿಕದೊಂದಿಗೆ ಚರ್ಚೆ ಎಂದು ಇರಾನ್ ಪ್ರತಿಕ್ರಿಯಿಸಿದೆ. ಕಳೆದ ದಿವಸ ಯುದ್ಧಘೋಷಣೆಯ ನಂತರ ಚರ್ಚೆಗೆ ಸಿದ್ಧ ಎಂಬ ಈ ಹೊಸ ಹೇಳಿಕೆಯನ್ನು ಅಮೆರಿಕ ಬಿಡುಗಡೆಗೊಳಿಸಿದೆ. ತೆಹ್ರಾನ್ಗೆ ಬಂದ ಕತರ್ ಅಮೀರ್ ಶೇಖ್ ತಮೀಂ ಬಿನ್ ಹಮದ್ ಅಲ್ಥಾನಿಯವರೊಂದಿಗೆ ಘರ್ಷಣೆಯ ಭೀತಿ ಇಲ್ಲದಾಗಿಸುವುದು ಸಮಸ್ಯೆ ಪರಿಹಾರಕ್ಕಿರುವ ಮಾರ್ಗವೆಂದು ಇರಾನ್ ಅಧ್ಯಕ್ಷ ಹಸನ್ ರೂಹಾನಿ ಹೇಳಿದ್ದಾರೆ. ಘರ್ಷಣೆ ಇಲ್ಲದಾಗಿಸುವುದು ಮತ್ತು ಚರ್ಚೆಗಳು ಅರಬ್ ವಲಯದ ಬಿಕ್ಕಟ್ಟಿಗೆ ಪರಿಹಾರವೆಂದು ಎರಡು ದೇಶಗಳೂ ಒಪ್ಪಿಕೊಂಡಿವೆ ಎಂದು ಕತರ್ ಅಮೀರ್ ಹೇಳಿದರು.
ಅರಬ್ ವಲಯದ ಪೈಕಿ ಅತಿ ಹೆಚ್ಚು ಅಮೆರಿಕನ್ ಸೇನೆ ಕತರ್ ನಲ್ಲಿದೆ. ಕತರ್ ಗೆ ಇರಾನ್ ಜೊತೆಗೆ ಉತ್ತಮ ಸಂಬಂಧವಿದೆ. ಅರಬ್ ವಲಯದ ಸುರಕ್ಷೆಗಾಗಿ ಹೆಚ್ಚು ಸಹಕಾರ ಚರ್ಚೆಗಳಿಗೆ ತೀರ್ಮಾನಿಸಲಾಗಿದೆ ಎಂದು ಹಸನ್ ರೂಹಾನಿ ಹೇಳಿದರು. ವಿವಾದಗಳಲ್ಲಿ ಮಧ್ಯಸ್ಥಿಕೆ ವಹಿಸಲು ಸಜ್ಜಾದ ಪಾಕಿಸ್ತಾನದ ವಿದೇಶ ಸಚಿವ ಶಾ ಮಹ್ಮೂದ್ ಕುರೈಶಿಯವವರೂ ಹಸನ್ ರೂಹಾನಿಯವರನ್ನು ಭೇಟಿಯಾಗಿ ಚರ್ಚೆ ನಡೆಸಿದರು. ಇರಾನಿನೊಂದಿಗಿನ ಯುದ್ಧಸ್ಥಿತಿ ಜಾಗತಿಕ ಸ್ಥಿರತೆ, ಶಾಂತಿಗೆ ಬೆದರಿಕೆಯಾಗಿದೆ ಎಂದು ಜಪಾನ್ ಪ್ರಧಾನಿ ಶಿಂಟೊ ಅಬೆ ಮತ್ತು ಸೌದಿ ರಾಜಕುಮಾರ ಮುಹಮ್ಮದ ಬಿನ್ ಸಲ್ಮಾನ್ ಹೇಳಿದರು. ಇದೇ ವೇಳೆ ಯುಕ್ರೇನ್ ವಿಮಾನ ಪ್ರಮಾದದಿಂದ ಹೊಡೆದುರುಳಿಸಿದುದರ ವಿರುದ್ಧ ರಾಜಧಾನಿ ನಗರ ಟೆಹ್ರಾನ್ನಲ್ಲಿ ಪ್ರತಿಭಟನೆ ನಡೆಸಿದವರ ಮೇಲೆ ಗುಂಡು ಹಾರಿಸಲಾಗಿದೆ ಎಂದು ವರದಿಯಿದೆ. ಆದರೆ ಇರಾನ್ ಪೊಲೀಸರು ನಿರಾಕರಿಸಿದ್ದಾರೆ.












