ಸನ್ಮಾರ್ಗ ವಾರ್ತೆ
ಕಾಸರಗೋಡು, ಜ. 28: ಕುಂಬಳೆಯ ಮದ್ರಸಾ ವಿದ್ಯಾರ್ಥಿಗಳ ಮೇಲೆ ಸಂಘಪರಿವಾರದವರೆಂದು ಆರೋಪಿಸಲಾದ ಮಂದಿ ದಾಳಿ ಮಾಡಿದ್ದು ಇಬ್ಬರು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಬಂಬ್ರಾಣದ ದಾರುಲ್ ಉಲೂಂ ಮದ್ರಸಾದ ವಿದ್ಯಾರ್ಥಿಗಳಾದ ಹಸನ್ ಸೈದ್(13) ಮತ್ತು ಮುನಾಝ್(17) ಗಾಯಗೊಂಡಿರುವ ಬಾಲಕರು. ವಿದ್ಯಾರ್ಥಿಗಳನ್ನು ಕುಂಬಳ ಜಿಲ್ಲೆ ಸಹಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದ್ದು ಮೂರು ಮಂದಿಯ ತಂಡದಲ್ಲಿ ಒಬ್ಬನನ್ನು ಊರವರು ಹಿಡಿದು ಪೊಲೀಸರಿಗೆ ಒಪ್ಪಿಸಿದರು. ಸೋಮವಾರ ರಾತ್ರೆ ಪ್ರದೇಶದ ಮನೆಯಲ್ಲಿ ಊಟ ಮಾಡಿ ಮರಳುವ ವೇಳೆ ಗೂಂಡಾ ತಂಡ ಹಲ್ಲೆ ಮಾಡಿದೆ. ಟೋಪಿ ಧರಿಸುವುದು ಯಾಕೆ ಎಂದು ಕೇಳಿ ಸಿಎಎ, ಎನ್ಆರ್ಸಿ ಒಪ್ಪುವುದಿಲ್ಲವಾದರೆ ಪಾಕಿಸ್ತಾನಕ್ಕೆ ಹೋಗಬೇಕೆಂದು ಹೇಳುತ್ತಾ ಹೊಡೆದಿದ್ದಾರೆ.
ಕಾರಿನಲ್ಲಿ ಮಾರಕ ಆಯುಧಗಳೊಂದಿಗೆ ತಂಡ ಬಂದಿತ್ತು. ತಂಡದ ಕಿರಣ್ ಎಂಬಾತನನ್ನು ಊರವರೇ ಹಿಡಿದು ಪೊಲೀಸರಿಗೆ ಕೊಟ್ಟಿದ್ದಾರೆ. ಇವರು ಸಂಚರಿಸಿದ ಕಾರು ಮತ್ತು ಆಯುಧಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಕಾಸರಗೋಡನ್ನು ಗುಜರಾತ್ ಮಾಡುವ ಯತ್ನ- ಮುಸ್ಲಿಂ ಲೀಗ್
ಕಾಸರಗೋಡನ್ನು ಮುಝಾಫ್ಫರ್ ನಗರ್ ,ಗುಜರಾತ್ ಮಾಡಲು ಸಂಘಪರಿವಾರ ಗೂಢ ಸಂಚು ಮಾಡಿದ್ದು ಇದರ ಫಲವಾಗಿ ಮಕ್ಕಳ ಮೇಲೆ ಹಲ್ಲೆ ನಡೆದಿದೆ ಎಂದು ಮುಸ್ಲಿಂ ಲೀಗ್ ಜಿಲ್ಲಾ ಕಾರ್ಯದರ್ಶಿ ಎಕೆಎಂ ಅಶ್ರಫ್ ಫೇಸ್ಬುಕ್ನಲ್ಲಿ ಬರೆದಿದ್ದಾರೆ. ಮನೆಗಳು ವ್ಯಾಪಾರಿ ಸಂಸ್ಥೆಗಳನ್ನು ಕೊಳ್ಳೆಹೊಡೆದು ಹಣಮಾಡುವುದು ಹಲ್ಲೆಯ ಉದ್ದೇಶವಾಗಿತ್ತೆಂದು ಅವರು ಆರೋಪಿಸಿದರು.












