ಗೋಡ್ಸೆ ಆಶಯದಲ್ಲಿ ನಂಬಿಕೆ ಇದೆ ಎನ್ನಲು ಮೋದಿಗೆ ಧೈರ್ಯವಿಲ್ಲ- ರಾಹುಲ್ ಗಾಂಧಿ

0
476

ಸನ್ಮಾರ್ಗ ವಾರ್ತೆ

ಕೇರಳ, ಜ. 30: ಗಾಂಧಿ ಹಂತಕ ಗೋಡ್ಸೆ ಮತ್ತು ಭಾರತ ಪ್ರಧಾನಿ ನರೇಂದ್ರ ಮೋದಿ ಒಂದೇ ಆಶಯದಲ್ಲಿ ನಂಬಿಕೆ ಇರಿಸಿದವರು.ಆದರೆ ಅದನ್ನು ಬಹಿರಂಗವಾಗಿ ಹೇಳುವ ಧೈರ್ಯ ಮೋದಿಗಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದರು. ಪೌರತ್ವ ತಿದ್ದುಪಡಿ ಕಾನೂನು ವಿರುದ್ಧ ತನ್ನ ಸಂಸತ್ ಕ್ಷೇತ್ರ ಕಲ್ಪಟ್ಟದಲ್ಲಿ ನಡೆದ ಸಂವಿಧಾನ ಸಂರಕ್ಷಣಾ ರ್ಯಾಲಿಯಲ್ಲಿ ಅವರು ಜನರನ್ನು ಉದ್ದೇಶಿಸಿ ಮಾತಾಡುತ್ತಿದ್ದರು.

ಸತ್ಯವನ್ನು ಸದಾ ಗಟ್ಟಿಯಾಗಿ ಹಿಡಿದ ವ್ಯಕ್ತಿ ಗಾಂಧಿ ಆಗಿದ್ದರು. ಅವರ ಕಣ್ಣುಗಳಿಗೆ ನೋಡದೆ ಗೋಡ್ಸೆ ಗುಂಡಿಕ್ಕಿದ್ದನು. ಕಾರಣ, ಕಳ್ಳರು, ಹೇಡಿಗಳು ಸತ್ಯದ ನೇರ ನೋಡಲು ಹೆದರುತ್ತಾರೆ. ಮೋದಿ ಅದೇ ಮಾಡುತ್ತಿದ್ದಾರೆ. ಭಾರತದ ಆರ್ಥಿಕ ಕುಸಿತ, ನಿರುದ್ಯೋಗ ಮೊದಲಾದ ನಿಜಸ್ಥಿತಿಯನ್ನು ಎದುರಿಸಲು ಮೋದಿಗೆ ಧೈರ್ಯ ಇಲ್ಲ. ಪಾಕಿಸ್ತಾನ ಕುರಿತು ಹೇಳುವಷ್ಟು ಭಾರತದ ಸಮಸ್ಯೆಯ ಕುರಿತು ಹೇಳಲು ಮೋದಿ ಸಿದ್ಧರಿಲ್ಲ ಎಂದು ರಾಹುಲ್ ಆರೋಪಿಸಿದರು. ಈಗಿನದು ನಾವು ಭಾರತೀಯರೆಂದು ಸಾಬೀತುಪಡಿಸಬೇಕಾದ ದುಸ್ಥಿತಿಯಾಗಿದೆ. ಭಾರತೀಯರು ಪೌರತ್ವ ಸಾಬೀತು ಪಡಿಸಬೇಕೆಂದು ಹೇಳಲು ಮೋದಿ ಯಾರು? ಅದಕ್ಕೆ ಮೋದಿಗೆ ಲೈಸೆನ್ಸ್ ಕೊಟ್ಟಿದ್ಯಾರು? ಭಾರತದ ಜನರಿಗೆ ತಮ್ಮ ಪೌರತ್ವಕ್ಕೆ ಯಾರದೇ ಸರ್ಟಿಫಿಕೆಟು ಅಗತ್ಯವಿಲ್ಲ ಎಂದು ರಾಹುಲ್ ಹೇಳಿದರು.