ಸನ್ಮಾರ್ಗ ವಾರ್ತೆ
ಹೊಸದಿಲ್ಲಿ, ಫೆ. 1: ಪೌರತ್ವ ತಿದ್ದುಪಡಿ ಕಾನೂನು ವಿರುದ್ಧ ಶಾಹಿನ್ ಬಾಗ್ನಲ್ಲಿ ಪ್ರತಿಭಟನೆ ನಡೆಸುವವರೊಂದಿಗೆ ಮಾತುಕತೆಗೆ ಕೇಂದ್ರ ಸರಕಾರ ಸಿದ್ಧವಿದೆ ಎಂದು ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ. ಮೋದಿ ಸರಕಾರ ಶಾಹಿನ್ಬಾಗ್ ಪ್ರತಿಭಟನಾಕಾರರೊಂದಿಗೆ ಮಾತಾಡಲು ಸಿದ್ಧ ಮತ್ತು ಪೌರತ್ವ ತಿದ್ದುಪಡಿ ಕಾನೂನಿನಲ್ಲಿ ಅವರು ಹೊಂದಿರುವ ಸಂದೇಹಗಳನ್ನು ದೂರೀಕರಿಸಲಾಗುವುದು ಎಂದು ರವಿಶಂಕರ್ ಪ್ರಸಾದ್ ಟ್ವೀಟ್ ಮಾಡಿದರು. ಆದರೆ ಈ ಮಾತುಕತೆ ವಿಶೇಷ ವ್ಯವಸ್ಥೆಯಡಿಯಲ್ಲಿ ನಡೆಯಲಿದೆ ಎಂದು ಅವರು ಹೇಳಿದರು.
ಪೌರತ್ವ ತಿದ್ದುಪಡಿ ಕಾನೂನು, ಎನ್ಪಿಆರ್, ಎನ್ಆರ್ಸಿ ವಿರುದ್ಧ ಶಾಹಿನ್ ಬಾಗ್ನಲ್ಲಿ 45 ದಿನಗಳಿಂದ ಪ್ರತಿಭಟನೆ ನಡೆಯುತ್ತಿದೆ. ಮಹಿಳೆಯರ ನೇತೃತ್ವದಲ್ಲಿ ಪ್ರತಿಭಟನೆ ಹೆಚ್ಚು ಬಲಗೊಳ್ಳುತ್ತಿದೆ. ದಿಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಇದು ನಿರ್ಣಾಯಕವಾಗುವ ಪರಿಸ್ಥಿತಿ ಇದೆ. ಆದ್ದರಿಂದ ಕೇಂದ್ರ ಮಾತುಕತೆಗೆ ಮುಂದೆ ಬರಲು ಸಿದ್ಧವಾಯಿತು ಎನ್ನಲಾಗಿದೆ.
ಸರಕಾರ ಶಹೀನ್ ಬಾಗ್ನ ಪ್ರತಿಭಟನಾ ಕಾರರೊಂದಿಗೆ ಮಾತಾಡಲು ತಯಾರಿದೆ. ಆದರೆ ಅದು ವಿಶೇಷ ವ್ಯವಸ್ಥೆ ರೂಪದಲ್ಲಿ ಆಗಿರಬೇಕು. ಹಾಗಾದರೆ ನರೇಂದ್ರ ಮೋದಿ ಸರಕಾರ ಅವರೊಂದಿಗೆ ಮಾತಾಡುತ್ತದೆ. ಸಿಎಎಯ ಕುರಿತು ಅವರ ಸಂದೇಹಗಳನ್ನು ದೂರೀಕರಿಸಲಾಗುವುದು ಎಂದು ರವಿಶಂಕರ್ ಪ್ರಸಾದ್ ತಿಳಿಸಿದರು. ಇಂದು ಬೆಳಗ್ಗೆ ಈ ವಿಷಯವನ್ನು ಹೇಳಿದ್ದು ಆದರೆ ಇದಕ್ಕೆ ಈವರೆಗೂ ಶಾಹಿನ್ ಬಾಗ್ ಪ್ರತಿಭಟನಾಕಾರರು ಪ್ರತಿಕ್ರಿಯೆ ನೀಡಿಲ್ಲ.












