ಸನ್ಮಾರ್ಗ ವಾರ್ತೆ
ಬೆಂಗಳೂರು, ಫೆ. 4: ಆನೆ ಹಂತಕ ಕಾಡು ಕಳ್ಳ ವೀರಪ್ಪನ್ ತಂಡದ ಮಹಿಳೆಯನ್ನು 27 ವರ್ಷದ ನಂತರ ಪೊಲೀಸರು ಬಂಧಿಸಿದ್ದಾರೆ. ಚಾಮರಾಜ ನಗರ ಜಾಗೇರಿ ನೆಲ್ಲೂರು ಎಲ್ವ ಮೇರಿ (41) ಬಂಧಿತ ಮಹಿಳೆ. ಟಾಡ ಪ್ರಕರಣದಲ್ಲಿ ಕೊಲ್ಲೆಗಾಲ ಪೊಲೀಸರು ಮಹಿಳೆಯನ್ನು ಬಂಧಿಸಿದ್ದು 1993ರಿಂದ ಈಕೆ ಭೂಗತಳಾಗಿದ್ದಳು. ಎರಡನೆ ಪತಿಯ ಜೊತೆ ಗುತ್ತೆ ಜಮೀನಿನಲ್ಲಿ ಕೃಷಿ ಮಾಡುತ್ತಾ ಜೀವನ ನಡೆಸುತ್ತಿದ್ದಳು.
ಇತ್ತಿಚೆಗೆ ಕಬ್ಬಿಣ ತೋಟದಲ್ಲಿ ಕಾಡಾನೆಗಳು ದಾಳಿ ಮಾಡಿದಾಗ ಅದನ್ನು ಓಡಿಸಲು ಗುಂಡು ಹಾರಿಸಿದ್ದಕ್ಕೆ ಸಂಬಂಧಿಸಿ ಪೊಲೀಸರು ತನಿಖೆ ಮಾಡುವ ವೇಳೆ ಮಹಿಳೆ ತಾನು ವೀರಪ್ಪನ್ ಸಂಗಡ ಇದ್ದುದನ್ನು ಹೇಳಿದ್ದಾಳೆ. ಕರ್ನಾಟಕ-ತಮಿಳುನಾಡು ಅರಣ್ಯ ಇಲಾಖೆ ಸಿಬ್ಬಂದಿಗಳ ಸಹಿತ 22 ಮಂದಿ ಕೊಲ್ಲಲ್ಪಟ್ಟಿದ್ದ 1993ರ ಪಾಲಾರ್ ಬಾಂಬ್ ಸ್ಫೋಟ ಕೇಸು, 1992ರ ರಾಮಪುರ ಪೊಲೀಸ್ ಠಾಣೆಗೆ ದಾಳಿ, ಆಯುಧ ಕಳ್ಳಸಾಗಾಟ ಪ್ರಕರಣದ ಆರೋಪಿ ಸ್ಟೆಲ್ಲ ಈಕೆಯೆಂದು ಚಾಮರಾಜ ನಗರ ಎಸ್ಪಿ ಎಚ್ ಡಿ ಅನಂತ್ ಕುಮಾರ್ ಹೇಳಿದ್ದಾರೆ. 2004ರಲ್ಲಿ ವೀರಪ್ಪನ್ ಕೊಲ್ಲಲ್ಪಟ್ಟಿದ್ದನು.
ಸೆಲ್ವಾ ಸಹೋದರ ಶೇಶರಾಜ ವೀರಪ್ಪನ್ಗೆ ಹಣ ವಂಚಿಸಿದ್ದಕ್ಕೆ ಸಂಬಂಧಿಸಿ ಆತನ ಹದಿಮೂರು ವರ್ಷದ ಈ ತಂಗಿಯನ್ನು ಕಾಡಿಗೆ ಕರೆದುಕೊಂಡು ಹೋಗಿದ್ದ. ಹಣ ಕೊಡುವವರೆಗೆ ತಂಗಿ ತನ್ನ ಬಳಿ ಒತ್ತೆಸೆರೆಯಿರಲಿ ಎಂದು ವೀರಪ್ಪನ್ ಹೇಳಿದ್ದ. ಹಾಗೆ ವೀರಪ್ಪನ್ ತಂಡದೊಂದಿಗೆ ಸ್ಟೆಲ್ಲ ಇದ್ದಳು. ಇದೇವೇಳೆ ವೀರಪ್ಪನ್ ಅನುಯಾಯಿ ವೆಳ್ಳಯ್ಯನನ್ನು ಪ್ರೇಮಿಸಿ ಮದುವೆಯಾದಳು. ಮಹಿಳೆಯರ ಬಗ್ಗೆ ವಿಶ್ವಾಸ ಇಲ್ಲದಿದ್ದ ವೀರಪ್ಪನ್ ತನಗೆ ಆಯುಧ ತರಬೇತಿ ನೀಡಿ ದಾಳಿ ಜೊತೆಗೆ ಕರೆದೊಯ್ಯುತ್ತಿದ್ದ ಎಂದು ಸ್ಟೆಲ್ಲ ಹೇಳಿದ್ದಾಳೆ.
ವೆಳ್ಳಯ್ಯನ ಸಾವಿನ ನಂತರ ವೀರಪ್ಪನ್ ತಂಡದಿಂದ ಹೊರಬಂದ ಸೆಲ್ವ ಜಾಗೇರಿಯ ವೆಲುಸ್ವಾಮಿಯನ್ನು ಮದುವೆಯಾಗಿ ಕಾಡಿನ ಬದಿಯಲ್ಲಿ ಕೃಷಿಕಾರ್ಯದೊಂದಿಗೆ ಜೀವನ ನಡೆಸುತ್ತಿದ್ದಳು. ಇತ್ತೀಚೆಗೆ ಕಾಡಾನೆ ಕೃಷಿ ಜಮೀನಿಗೆ ಬಂದಾಗ ಅದನ್ನು ಓಡಿಸಲು ಗುಂಡು ಹಾರಿಸಿದ್ದು ಸಣ್ಣ ಪ್ರಮಾಣದ ಬೆಂಕಿ ಅನಾಹುತಕ್ಕೂ ಕಾರಣವಾಗಿತ್ತು. ಘಟನೆಯ ಕುರಿತು ತನಿಖೆಯ ವೇಳೆ ಸ್ಟೆಲ್ಲ ಸಿಕ್ಕಿಬಿದ್ದಳು. 1993ರಲ್ಲಿ ಎಂಎಂ ಹಿಲ್ಸ್ ಪೊಲೀಸರು ದಾಖಲಿಸಿದ ಟಾಡ ಕೇಸು ಪ್ರಕಾರ ಮಹಿಳೆಯನ್ನು ಬಂಧಿಸಲಾಗಿದ್ದು ಕೋರ್ಟು ನ್ಯಾಯಾಂಗ ಬಂಧನ ವಿಧಿಸಿದೆ.












