ಸನ್ಮಾರ್ಗ ವಾರ್ತೆ
ಹೊಸದಿಲ್ಲಿ, ಫೆ. 17: ಸೇನೆಯ ಉನ್ನತ ಹುದ್ದೆಗಳಿಗೆ ಮಹಿಳೆಯರನ್ನು ನೇಮಕಗೊಳಿಸಲು ಸಾಧ್ಯವಿಲ್ಲ ಎಂಬ ಕೇಂದ್ರ ಸರಕಾರದ ನಿಲುವನ್ನು ಸಂವಿಧಾನ ವಿರೋಧಿ ಎಂದು ಸುಪ್ರೀಂ ಕೋರ್ಟು ಹೇಳಿದೆ. ಸರಿಯಾದ ಸಮಾನತೆ ಸೇನೆಯಲ್ಲಿ ತರಬೇಕು. ಈ ವಿಷಯದಲ್ಲಿ ಮಹಿಳೆಯರೊಂದಿಗೆ ಕೇಂದ್ರ ಸರಕಾರ ತಾರತಮ್ಯ ಅನುಸರಿಸುತ್ತಿದೆ ಎಂದು ಜಸ್ಟಿಸ್ ಚಂದ್ರ ಚೂಡರ ಪೀಠ ತೀರ್ಪು ನೀಡಿದೆ. 2010ರಲ್ಲಿ ದಿಲ್ಲಿ ಹೈಕೋರ್ಟು ನೀಡಿದ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯಲ್ಲಿ ಕೋರ್ಟು ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಮಹಿಳೆಯರ ನೇಮಕಾತಿಗೆ ಕಾಯಂ ಸಮಿತಿ ರೂಪಿಸಬೇಕೆಂದು ಸುಪ್ರೀಂಕೋರ್ಟು ಆದೇಶ ಹೊರಡಿಸಿತು.
ಕಮಾಂಡಿಂಗ್ ಸ್ಥಾನ ಸಹಿತ ಮಹಿಳೆಯರನ್ನು ಹೊರಗಿಡುವ ಲಿಂಗ ಅಸಮಾನತೆಯು ಸರಿಯಲ್ಲ. ಇದು ಲಿಂಗ ನೀತಿ, ಸಮಾನತೆ ನೀತಿಯ ವಿರುದ್ಧವಾಗಿದೆ. ಪುರುಷರಿಗೆ ಕೊಡುವ ಸ್ಥಾನಮಾನವನ್ನು ಮಹಿಳೆಯರಿಗೂ ಕೊಡಬೇಕಿದೆ. ಸೇವೆ, -ವೇತನ ವ್ಯವಸ್ಥೆಗಳಲ್ಲಿ ಮಹಿಳೆಯರೊಂದಿಗೆ ತಾರತಮ್ಯ ಅಗಬಾರದು ಎಂದು ಸುಪ್ರೀಂಕೋರ್ಟು ತನ್ನ ಆದೇಶದಲ್ಲಿ ತಿಳಿಸಿದೆ.












